ನವದೆಹಲಿ: 3ನೇ ಬೃಹತ್ ಆರ್ಥಿಕತೆಯಾಗುವತ್ತ ದಾಪುಗಾಲಿಡುತ್ತಿರುವ ಭಾರತ, ಪ್ರಸಕ್ತ ಹಣಕಾಸು ವರ್ಷದಲ್ಲಿ ಶೇ.7.4ರ ದರದಲ್ಲಿ ಆರ್ಥಿಕ ಪ್ರಗತಿ (ಜಿಡಿಪಿ) ಸಾಧಿಸಲಿದೆ. ಈ ಮೂಲಕ ವಿಶ್ವದಲ್ಲೇ ಅತಿವೇಗದ ಆರ್ಥಿಕತೆ ಎಂಬ ದಾಖಲೆಯನ್ನು ಕಾಯ್ದೆಕೊಳ್ಳಲಿದೆ. ಅಮೆರಿಕದ ತೆರಿಗೆ ದಾಳಿ ಮತ್ತು ಜಾಗತಿಕ ಬಿಕ್ಕಟ್ಟಿನ ನಡುವೆಯೂ ದೇಶ ಉತ್ತಮ ಆರ್ಥಿಕ ಪ್ರಗತಿ ಸಾಧಿಸಲಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
2025-26ನೇ ಸಾಲಿನಲ್ಲಿ ದೇಶದ ಆರ್ಥಿಕ ಪ್ರಗತಿ ದರ ಶೇ.6.3ರಿಂದ ಶೇ.6.8ರ ನಡುವೆ ಬೆಳವಣಿಗೆ ಕಾಣಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ವಿವಿಧ ವಲಯಗಳ ಉತ್ತಮ ಸಾಧನೆ ಪರಿಣಾಮ ಇದೀಗ ಜಿಡಿಪಿ ದರ ಶೇ.7.4ಕ್ಕೆ ಏರುವ ವಿಶ್ವಾಸ ವ್ಯಕ್ತವಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ಹಣಕಾಸು ವರ್ಷದಲ್ಲಿ ದೇಶದ ಜಿಡಿಪಿ ದರ ಶೇ.6.5ರಷ್ಟು ದಾಖಲಾಗಿತ್ತು.
2024-25ರಲ್ಲಿ ಶೇ.4.5ರಷ್ಟಿದ್ದ ಉತ್ಪಾದನಾ ವಲಯದ ಬೆಳವಣಿಗೆ ಈ ವರ್ಷ ಶೇ.7.3ರಷ್ಟು, ಸೇವಾವಲಯ ಶೇ.7.2ರಿಂದ ಏರಿಕೆ ಕಂಡು ಶೇ.9.1ಕ್ಕೆ ತಲುಪುವ ನಿರೀಕ್ಷೆ ಇದೆ. ಆದರೆ ಕೃಷಿ ಮತ್ತು ಅದರ ಸಂಬಂಧಿತ ವಲಯಗಳ ಬೆಳವಣಿಗೆ ಶೆ.4.6ರಿಂದ ಶೇ.3.1ಕ್ಕೆ ಇಳಿಯುವ ನಿರೀಕ್ಷೆ ಇದೆ ಇದೆ ಸರ್ಕಾರದ ವರದಿ ಹೇಳಿದೆ.