ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಭಾರತೀಯ ಕ್ರೀಡಾಪಟುಗಳನ್ನು ಸೋಮವಾರ ಭಾರತೀಯ ಒಲಿಂಪಿಕ್ಸ್ ಸಂಸ್ಥೆ (ಐಒಎ) ಸನ್ಮಾನಿಸಿ, ನಗದು ಬಹುಮಾನ ವಿತರಿಸಿತು. ಜಾವೆಲಿನ್ ಥ್ರೋನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ನೀರಜ್ ಚೋಪ್ರಾಗೆ 75 ಲಕ್ಷ ರು. ಚೆಕ್ ವಿತರಿಸಲಾಯಿತು. ನೀರಜ್ ಭಾರತದಿಂದ ಹೊರಗಿರುವ ಕಾರಣ, ಅವರ ಬದಲು ಕ್ರೀಡಾ ಸಚಿವಾಲಯದ ಅಧಿಕಾರಿಯೊಬ್ಬರು ಚೆಕ್ ಸ್ವೀಕರಿಸಿದರು. ನೀರಜ್‌ರ ಮಾಜಿ ಕೋಚ್ ಕ್ಲಾಸ್ ಬಾರ್ಟೋನೀಟ್ಜ್‌ಗೆ 20 ಲಕ್ಷ ರು. ಬಹುಮಾನ ನೀಡಲಾಯಿತು. ಅವರು ಸಹ ಕಾರ್ಯಕ್ರಮಕ್ಕೆ ಗೈರಾಗಿದ್ದರು.
ಶೂಟಿಂಗ್ ತಾರೆ ಮನು ಭಾಕರ್ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ ಕಂಚು ಗೆದ್ದಿದ್ದಕ್ಕೆ 50 ಲಕ್ಷ ರು. ದೊರೆಯಿತು. ಬಳಿಕ ಅವರು ಮಿಶ್ರ ತಂಡ ವಿಭಾಗದಲ್ಲಿ ಗೆದ್ದ ಕಂಚಿಗೆ ಸರಬ್ಜೋತ್ ಸಿಂಗ್ ಜೊತೆ 50 ಲಕ್ಷ ರು. ಹಂಚಿಕೊಂಡರು.
57 ಕೆ.ಜಿ. ಕುಸ್ತಿಯಲ್ಲಿ ಕಂಚು ಗೆದ್ದ ಅಮನ್ ಶೆರಾವತ್., 50 ಮೀ. ರೈಫಲ್ 3 ಪೊಸಿಷನ್ಸ್‌ನಲ್ಲಿ ಕಂಚು ಗೆದ್ದ ಸ್ವಪ್ನಿಲ್ ಕುಸಾಲೆಗೆ ತಲಾ 50 ಲಕ್ಷ ರು. ದೊರೆಯಿತು.
ಕಂಚು ಗೆದ್ದ ಪುರುಷರ ಹಾಕಿ ತಂಡದ ಎಲ್ಲ ಸದಸ್ಯರಿಗೂ ತಲಾ 10 ಲಕ್ಷ ರು. ನೀಡಲಾಯಿತು. ಐಒಎ ಅಧ್ಯಕ್ಷೆ ಪಿ.ಟಿ.ಉಷಾ, ಕೇಂದ್ರ ಕ್ರೀಡಾ ಸಚಿವ ಮನ್‌ಸುಖ್ ಮಾಂಡವೀಯ ಕ್ರೀಡಾಪಟುಗಳಿಗೆ ಚೆಕ್ ವಿತರಿಸಿದರು. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಭಾರತ 1 ಬೆಳ್ಳಿ, 5 ಕಂಚಿನ ಪದಕ ಗೆದ್ದಿತ್ತು.