ಭಾರತದ ದಾಳಿಗೆ 40 ಪಾಕ್ ಯೋಧರ ಹತ್ಯೆ, 100 ಉಗ್ರರು ಫಿನಿಷ್‌

KannadaprabhaNewsNetwork |  
Published : May 11, 2025, 11:55 PM ISTUpdated : May 12, 2025, 04:52 AM IST
ಸೇನೆ  | Kannada Prabha

ಸಾರಾಂಶ

  ‘ಅಪರೇಷನ್‌ ಸಿಂದೂರ್‌’ ಕಾರ್ಯಾಚರಣೆಯಲ್ಲಿ 9 ಉಗ್ರ ನೆಲೆ ಮತ್ತು ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಈ ವೇಳೆ ಪಾಕಿಸ್ತಾನ ಕೆಲವು ಹಿರಿಯ ಸೇನಾಧಿಕಾರಿಗಳೂ ಸೇರಿದಂತೆ ಸೇನೆಯ 40 ಯೋಧರು ಸಾವನ್ನಪ್ಪಿದ್ದಾರೆ. 

 ನವದೆಹಲಿ : ‘ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ‘ಅಪರೇಷನ್‌ ಸಿಂದೂರ್‌’ ಕಾರ್ಯಾಚರಣೆಯಲ್ಲಿ 9 ಉಗ್ರ ನೆಲೆ ಮತ್ತು ಹಲವು ಸೇನಾ ನೆಲೆಗಳನ್ನು ಧ್ವಂಸಗೊಳಿಸಲಾಗಿದೆ. ಈ ವೇಳೆ ಪಾಕಿಸ್ತಾನ ಕೆಲವು ಹಿರಿಯ ಸೇನಾಧಿಕಾರಿಗಳೂ ಸೇರಿದಂತೆ ಸೇನೆಯ 40 ಯೋಧರು ಸಾವನ್ನಪ್ಪಿದ್ದಾರೆ. ಭಾರತದೆಡೆಗೆ ತೂರಿಬಂದಿದ್ದ 700ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ’ ಎಂದು ಭಾರತೀಯ ಸೇನಾ ಪಡೆ ಹೇಳಿದೆ. ಈ ಮೂಲಕ ಪಾಕಿಸ್ತಾನ ಸೇನೆ, ಪಾಕ್‌ ಉಗ್ರರ ಹೆಡೆಮುರಿ ಕಟ್ಟಿದ ವಿಷಯವನ್ನು ಇದೇ ಮೊದಲ ಬಾರಿಗೆ ಅಂಕಿ ಸಂಕಿ ಸಮೇತ ಬಹಿರಂಗಪಡಿಸಿದೆ.

ಮೇ 7ರಿಂದ ಸತತ 4 ದಿನ ಭಾರತ ನಡೆಸಿ ದಾಳಿ, ದಾಳಿಗೆ ಕಾರಣಗಳು, ದಾಳಿ ನಡೆಸಿದ ರೀತಿ, ಅದರ ಪರಿಣಾಮಗಳು ಹಾಗೂ ಅದರಿಂದ ಪಾಕಿಸ್ತಾನ ಕಲಿತ ಪಾಠಗಳ ಬಗ್ಗೆ ಸೇನಾಪಡೆ, ನೌಕಾಪಡೆ ಮತ್ತು ವಾಯುಪಡೆ 3 ಡಿಜಿಎಂಒಗಳು ಭಾನುವಾರ ಸಂಜೆ ಚಿತ್ರಗಳ ಸಮೇತ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಉಗ್ರರ ಬುಡಕ್ಕೇ ಪೆಟ್ಟು:

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಾಯುಪಡೆಯ ಡಿಜಿಎಂಒ ಏರ್‌ಮಾರ್ಷಲ್‌ ಎ.ಕೆ. ಭಾರ್ತಿ, ‘ಪಾಕಿಸ್ತಾನಕ್ಕೆ ಎಲ್ಲಿಗೆ ಹೊಡೆದರೆ ಹೆಚ್ಚು ನೋವಾಗುವುದೋ ಅಲ್ಲಿಗೇ ಭಾರತೀಯ ಸೇನೆ ಹೊಡೆದಿದೆ. ಅತ್ಯಾಧುನಿಕ ತಂತ್ರಜ್ಞಾನವುಳ್ಳ ಪಾಕ್‌ನ ಯುದ್ಧವಿಮಾನಗಳನ್ನು ಹೊಡೆದುರುಳಿಸಲಾಗಿದೆ ಮತ್ತು 6 ವಾಯುನೆಲೆಗಳ ಮೇಲೆ ದಾಳಿ ನಡೆಸಲಾಗಿದೆ’ ಎಂದರು. ಇದಕ್ಕೆ ಪೂರಕವಾಗಿ ಭಾರತ ಹಾನಿ ಮಾಡಿದ ವಾಯನೆಲೆಗಳ ಚಿತ್ರಗಳನ್ನು ಪ್ರದರ್ಶಿಸಿದರು.

ಜೊತೆಗೆ, ‘ಮೇ 8ರಂದು ಪಾಕಿಸ್ತಾನ ಭಾರತದ ವಿರುದ್ಧ ದಾಳಿ ನಡೆಸುತ್ತಿದ್ದ ವೇಳೆ, ಅಂತಾರಾಷ್ಟ್ರೀಯ ಸೇರಿದಂತೆ ಹಲವು ನಾಗರಿಕ ವಿಮಾನಗಳ ಹಾರಾಟವನ್ನು ನಿರ್ಬಂಧಿಸಿರಲಿಲ್ಲ. ಇದು ನೀಚ ನಡವಳಿಕೆ. ಭಾರತವೂ ಆಗ ಬಹಳ ಎಚ್ಚರಿಕೆಯಿಂದ ವರ್ತಿಸಬೇಕಾಯಿತು’ ಎಂದ ಭಾರ್ತಿ, ಪಾಕ್‌ನ ಅಮಾನವೀಯ ಮುಖದ ಅನಾವರಣ ಮಾಡಿದರು.

ಅಲ್ಲದೆ, ಇದೇ ಮೊದಲ ಬಾರಿಗೆ, ‘ಭಾರತವು ಪಾಕ್‌ ಕಡೆಯಿಂದ ಬಂದ 700 ಡ್ರೋನ್‌ಗಳನ್ನು ಹೊಡೆದುಹಾಕಿದೆ’ ಎಂಬ ಮಾಹಿತಿಯನ್ನು ಬಹಿರಂಗಪಡಿಸಿದರು.

ಸೇನಾಪಡೆಯ ಡಿಜಿಎಂಒ, ಲೆ.ಜ.ರಾಜೀವ್‌ ಘಾಯ್‌ ಮಾತನಾಡಿ ‘ಪಹಲ್ಗಾಂ ನರಮೇಧಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಮೇ 7ರಂದು ನೀಡಿದ ಮೊದಲ ಏಟಿಗೆ, ಕಂದಹಾರ್‌ ವಿಮಾನ ಅಪಹರಣ, ಪುಲ್ವಾಮಾ ದಾಳಿಯ ಹಿಂದಿದ್ದವರು ಸೇರಿದ 100ಕ್ಕೂ ಅಧಿಕ ಉಗ್ರರು ಬಲಿಯಾಗಿದ್ದಾರೆ. ಇದೇ ವೇಳೆ, ಪಾಕ್‌ ಸೇನೆಯ 35-40 ಯೋಧರು ಹತರಾಗಿದ್ದಾರೆ’ ಎಂದು ತಿಳಿಸಿದರು.

ಇದೇ ವೇಳೆ, ‘ಕದನ ವಿರಾಮ ಎಷ್ಟು ಅವಧಿಗೆ ಜಾರಿಯಲ್ಲಿರಲಿದೆ?’ ಎಂಬ ಪ್ರಶ್ನೆಗೆ ಉತ್ತರಿಸಿದ ಅಧಿಕಾರಿಗಳು, ‘ತಕ್ಷಣದಿಂದಲೇ ಜಾರಿಗೆ ಬರುವಂತೆ 36 ತಾಸುಗಳ ಕಾಲ (ಸೋಮವಾರದ ಡಿಜಿಎಂಒ ಸಭೆಯ ವರೆಗೆ) ಕದನವಿರಾಮ ಪಾಲಿಸುವ ಒಪ್ಪಂದ ಆಗಿತ್ತು. ಈ ಮನವಿಯೊಂದಿಗೆ ಪಾಕ್‌ನ ಡಿಜಿಎಂಓ ಹಾಟ್‌ಲೈನ್‌ ಮೂಲಕ ಮನವಿ ಮಾಡಿದ್ದರು’ ಎಂದು ಸ್ಪಷ್ಟಪಡಿಸಿದರು.

ಇಸ್ಲಾಮಾಬಾದ್‌ ಮೇಲೂ ದಾಳಿ:

ಪಾಕಿಸ್ತಾನದ ಅಪ್ರಚೋದಿತ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ, ಅದರ ರಾಜಧಾನಿ ಇಸ್ಲಾಮಾಬಾದ್‌ ಮೇಲೆಯೂ ದಾಳಿ ಮಾಡಿತ್ತು ಎಂದು ಡಿಜಿಎಂಒಗಳು ಹೇಳಿದರು.

ಐಎನ್‌ಎಸ್‌ ವಿಕ್ರಾಂತ್‌:ಪಾಕ್‌ ಕರಾಚಿ ಬಂದರಿನ ಮೇಲೆ ದಾಳಿಗೆ ಐಎನ್‌ಎಸ್‌ ವಿಕ್ರಾಂತ್‌ ಬಳಸಲಾಗಿತ್ತೇ ಎಂಬ ಪ್ರಶ್ನೆಗೆ ಉತ್ತರ ನೀಡಿದ ನೌಕಾಪಡೆ ಡಿಜಿಎಂಒ ಪ್ರಮೋದ್‌, ‘ನಾವು ಗಡಿಯಲ್ಲಿ ಸತತ ನಿಗಾ ಇಡುವ ಮೂಲದ ಪಾಕಿಸ್ತಾನದ ನೌಕೆಗಳು ತಮ್ಮ ಸ್ವಸ್ಥಾನ ಬಿಟ್ಟು ಕದಲದಂತೆ ನೋಡಿಕೊಂಡೆವು. ಅಗತ್ಯ ಬಿದ್ದರೆ ಕರಾಚಿ ಬಂದರಿನ ಮೇಲೆ ಬಾಂಬ್‌ ದಾಳಿಗೂ ಸಜ್ಜಾಗಿದ್ದೆವು’ ಎಂದು ಹೇಳಿದರು.

ಪೈಲಟ್‌ಗಳು ವಾಪಸ್‌:

ಪಾಕಿಸ್ತಾನದ ಮೇಲೆ ಭಾರತ ನಡೆಸುತ್ತಿರುವ ಪ್ರತಿದಾಳಿಯಲ್ಲಿ ವಾಯುಪಡೆ ಪ್ರಮುಖ ಪಾತ್ರ ವಹಿಸುತ್ತಿದ್ದು, ‘ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಎಲ್ಲಾ ಭಾರತೀಯ ಪೈಲಟ್‌ಗಳು ಸುರಕ್ಷಿತವಾಗಿ ಮರಳಿದ್ದಾರೆ’ ಎಂದು ಏರ್‌ ಮಾರ್ಷಲ್‌ ಭಾರ್ತಿ ಸ್ಪಷ್ಟಪಡಿಸಿದರು.

‘ನಮ್ಮ ಗಡಿಯೊಳಗೆ ಭಾರತದ ಯುದ್ಧವಿಮಾನಗಳು ಪತನವಾಗಿದ್ದು, 2 ಪೈಲಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪಾಕಿಸ್ತಾನ ಹೇಳಿಕೊಂಡ ಬೆನ್ನಲ್ಲೇ ಸೇನೆಯ ಕಡೆಯಿಂದ ಈ ಸ್ಪಷ್ಟನೆ ಬಂದಿದೆ. ಇದರಿಂದ ಪಾಕ್‌ನ ಕಪಟಿ ಮುಖ ಮತ್ತೊಮ್ಮೆ ಜಗಜ್ಜಾಹೀರಾಗಿದೆ.

ಆದರೆ ಭಾರತದ ಯುದ್ಧವಿಮಾನಗಳು ನಾಶವಾಗಿವೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ನೇರ ಉತ್ತರ ನೀಡದ ಅವರು, ‘ಯುದ್ಧದಲ್ಲಿ ಹಾನಿ ಆಗುವುದು ಮಾಮೂಲಿ’ ಎಂದು ಸ್ಪಷ್ಟನೆ ನೀಡಿದರು.

ಇಂದು ಭಾರತ-ಪಾಕ್‌ ಸೇನಾಪಡೆ ‘ಕದನ ವಿರಾಮ’ ಮಾತುಕತೆ

ನವದೆಹಲಿ: ಭಾರತ ಮತ್ತು ಪಾಕಿಸ್ತಾನದ ಸೇನಾ ಕಾರ್ಯಾಚರಣೆಗಳ ಮಹಾನಿರ್ದೇಶಕರ (ಡಿಜಿಎಂಒ) ನಡುವೆ ಸೋಮವಾರ ಕದನವಿರಾಮದ ಭವಿಷ್ಯದ ಕುರಿತು ಕುರಿತು ಮಾತುಕತೆ ನಿಗದಿಯಾಗಿದೆ. ಈ ಸಭೆ ಮಧ್ಯಾಹ್ನ 12ರ ಸುಮಾರಿಗೆ ಹಾಟ್‌ಲೈನ್‌ ಮೂಲಕ ನಡೆಯಲಿದೆ.ಇದೀಗ ನಡೆಯಲಿರುವ ಮಾತುಕತೆಯಲ್ಲಿ ಕದನವಿರಾಮದ ಮರುಜಾರಿ, ಸದ್ಯದ ಪರಿಸ್ಥಿತಿ ಮತ್ತು ಗಡಿಯಲ್ಲಿನ ಪ್ರಸ್ತುತ ಉದ್ವಿಗ್ನತೆಯನ್ನು ಕಡಿಮೆ ಮಾಡುವ ಕ್ರಮಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆಯಿದೆ.

ಶನಿವಾರವಷ್ಟೇ ಕನದ ವಿರಾಮ ಪ್ರಸ್ತಾಪದೊಂದಿಗೆ ಪಾಕಿಸ್ತಾನದ ಡಿಜಿಎಂಒ, ಭಾರತದ ಡಿಜಿಎಂಒ ಅವರನ್ನು ಸಂಪರ್ಕಿಸಿದ್ದರು. ಇದರ ಬೆನ್ನಲ್ಲೇ ಸಂಜೆ 5 ಗಂಟೆಯಿಂದ ಸಮರವಿರಾಮ ಜಾರಿಯಾಗಿತ್ತು. ಆದರೆ ಕೆಲವೇ ಗಂಟೆಗಳಲ್ಲಿ ಪಾಕ್‌ ಸೇನೆ ಇದನ್ನು ಉಲ್ಲಂಘಿಸಿತ್ತು.

-40 ಪಾಕ್ ಯೋಧರ ಹತ್ಯೆ, 700 ಡ್ರೋನ್‌ ಧ್ವಂಸ

- ಪಾಕ್‌ಗೆ ಅಪರೇಷನ್‌ ಸಿಂದೂರ ಮರ್ಮಾಘಾತ । 100 ಉಗ್ರರು ಹತ

- 4 ದಿನದಲ್ಲಿ ಟಾಪ್‌ ಉಗ್ರ ನೆಲೆ ನಾಶ । ಟಾಪ್‌ ಉಗ್ರ ನಾಯಕರ ಹತ್ಯೆ

-4 ದಿನದಲ್ಲಿ ಭಾರತ ಮಾಡಿದ್ದೇನು?

- ಕ್ಷಿಪಣಿಗಳ ದಾಳಿ ಮೂಲಕ ಪಾಕ್‌ನ 6 ವಾಯುನೆಲೆ ನಾಶ

- ಪಾಕ್‌ ರಾಜಧಾನಿ ಇಸ್ಲಾಮಾಬಾದ್‌ ಮೇಲೂ ವಾಯುದಾಳಿ

- ಅಗತ್ಯ ಬಿದ್ದರೆ ಕರಾಚಿ ಮೇಲೂ ದಾಳಿಗೆ ಭಾರತ ಸಜ್ಜಾಗಿತ್ತು

- ಪಾಕ್‌ಗೆ ಹೆಚ್ಚು ಹಾನಿಯಾಗುವ ಜಾಗಕ್ಕೆ ಭಾರತದ ಪೆಟ್ಟು

- ಯುದ್ಧದ ವೇಳೆ ಭಾರತದ ಯಾವ ಪೈಲಟ್‌ಗೂ ಅಪಾಯವಿಲ್ಲ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

10 ಮಿನಿಟ್ಸ್‌ ಡೆಲಿವರಿ ಇನ್ನು ನಿಮಗೆ ಸಿಗಲ್ಲ!
ಬೀದಿನಾಯಿ ಇಷ್ಟ ಆದ್ರೆ ಮನೇಲಿ ಸಾಕಿ : ಸುಪ್ರೀಂ