ನವದೆಹಲಿ: ಸೋಮವಾರವಷ್ಟೇ ರಾಜ್ಯಪತ್ರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ-2019 (ಸಿಎಎ) ಜಾರಿಗೊಳಿಸುವ ಕುರಿತು ಆದೇಶ ಹೊರಡಿಸಿದ್ದ ಕೇಂದ್ರ ಸರ್ಕಾರ, 1 ದಿನ ಬಳಿಕ ಆ ಕಾಯ್ದೆಯಡಿಯಲ್ಲಿ ಅರ್ಹರಿರುವವರಿಗೆ ಅರ್ಜಿ ಸಲ್ಲಿಸಲು ವೆಬ್‌ಸೈಟ್ ಲೋಕಾರ್ಪಣೆ ಮಾಡಿದೆ. ಸಿಎಎ-2019ರಲ್ಲಿ ಅರ್ಹರಿರುವ ಎಲ್ಲರೂ indiancitizenshiponline.nic.in ಎಂಬ ಜಾಲತಾಣದಲ್ಲಿ ಭಾರತೀಯ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಸಿಎಎ-2019 ಎಂಬ ಹೆಸರಿನಲ್ಲಿ ಆ್ಯಪ್ ಕೂಡ ಬಿಡುಗಡೆ ಆಗಲಿದ್ದು, ಅದರ ಮೂಲಕವೂ ಪೌರತ್ವಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಸರ್ಕಾರ ತಿಳಿಸಿದೆ. ಯಾರು ಅರ್ಜಿ ಸಲ್ಲಿಸಬಹುದು?:ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಭಾರತಕ್ಕೆ ಡಿ.31, 2014ರೊಳಗೆ ಬಂದು ನೆಲೆಸಿರುವ ಹಿಂದೂ, ಸಿಖ್, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್ ಜನಾಂಗದ ವ್ಯಕ್ತಿಗಳು ಭಾರತದ ಪೌರತ್ವಕ್ಕೆ ಅರ್ಜಿ ಸಲ್ಲಿಸಲು ಅರ್ಹರಿದ್ದಾರೆ. ಇವರು ಭಾರತದಲ್ಲಿ 2014ರ ಡಿ.31ಕ್ಕಿಂತ ಮುಂಚೆ 5 ವರ್ಷ ಭಾರತದಲ್ಲಿ ನೆಲೆಸಿರಬೇಕು ಎಂಬ ಷರತ್ತಿದೆ.
ಅರ್ಜಿ ಹಾಕಲು ಏನೇನು ದಾಖಲೆ ಬೇಕು?ಪೌರತ್ವ ತಿದ್ದುಪಡಿ ಕಾಯ್ದೆಗೆ ಅರ್ಜಿ ಸಲ್ಲಿಸುವ ವ್ಯಕ್ತಿ, ತಾವು ಇದಕ್ಕೂ ಮೊದಲು ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುತ್ತಿದ್ದುದಕ್ಕೆ 9 ದಾಖಲೆಗಳ ಪೈಕಿ ಒಂದನ್ನು ಸಲ್ಲಿಸಬೇಕಿದೆ. ಪ್ರಮುಖವಾಗಿ ಆ ರಾಷ್ಟ್ರದ ಸರ್ಕಾರ ನೀಡಿರುವ ಯಾವುದೇ ಸರ್ಕಾರಿ ಗುರುತು ಪತ್ರ, ಪಾಸ್‌ಪೋರ್ಟ್, ವೀಸಾ ಮುಂತಾದವುಗಳನ್ನು ಸಲ್ಲಿಸಬಹುದಾಗಿದೆ. ಅಲ್ಲದೆ ಅವರು ನಿರ್ದಿಷ್ಟ ಜನಾಂಗಕ್ಕೆ ಸೇರಿದ ವ್ಯಕ್ತಿಯೆಂದು ಸ್ಥಳೀಯ ಧಾರ್ಮಿಕ ಸಂಸ್ಥೆಯಿಂದ ದೃಢೀಕರಣ ಪತ್ರ ಸಲ್ಲಿಸಬೇಕಿರುತ್ತದೆ. ಜೊತೆಗೆ ವ್ಯಕ್ತಿಗಳು ನಿರ್ದಿಷ್ಟ ದಿನಾಂಕದೊಳಗೆ ಭಾರತಕ್ಕೆ ಬಂದು ನೆಲೆಸಿದ್ದಾರೆ ಎಂಬುದಕ್ಕೆ ಚುನಾಯಿತ ಜನಪ್ರತಿನಿಧಿ ಇಲ್ಲವೇ ಪತ್ರಾಂಕಿತ ಅಧಿಕಾರಿ ಸಹಿ ಮಾಡಿರುವ ದೃಢೀಕರಣ ಪತ್ರ ಅಥವಾ ಭಾರತ ಸರ್ಕಾರ ನೀಡಿರುವ ಯಾವುದೇ ಗುರುತು ಚೀಟಿ ಸಲ್ಲಿಸಬಹುದಾಗಿದೆ. ಈ ದಾಖಲೆಗಳು ಅವಧಿ ಮುಗಿದಿದ್ದರೂ ಸ್ವೀಕರಿಸಲಾಗುತ್ತದೆ.