;Resize=(412,232))
ನವದೆಹಲಿ: ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿದೆ. ಅಮೆರಿಕ ನಿರ್ಬಂಧದ ಪರಿಣಾಮ, ಪಾವತಿ ವಿಧಾನ ಕುರಿತ ಗೊಂದಲ ಬಗೆಹರಿಯುವವರೆಗೂ ರಷ್ಯಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ನಿಂದ ತೈಲ ಖರೀದಿ ಸ್ಥಗಿತಕ್ಕೆ ನಿರ್ಧರಿಸಿವೆ.
ಆದರೆ ತಕ್ಷಣದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೀರ್ಘ ಕಾಲೀನ ಒಪ್ಪಂದದದ ಬದಲಾಗಿ ಸ್ಪಾಟ್ ಮಾರ್ಕೆಟ್‌ನಿಂದ ತೈಲ ಖರೀದಿಗೆ ದೇಶದ ಅತಿದೊಡ್ಡ ತೈಲ ಉದ್ಯಮವಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಧರಿಸಿದೆ. ಮತ್ತೊಂದೆಡೆ ದೇಶದ ಅತಿದೊಡ್ಡ ಖಾಸಗಿ ತೈಲ ಸಂಸ್ಕರಣ ಘಟಕ ರಿಲಯನ್ಸ್ ಕೂಡ ತಾತ್ಕಾಲಿಕ ಖರೀದಿಯತ್ತ ಒಲವು ತೋರಿದೆ,
ರಷ್ಯಾದ ಒಟ್ಟು ತೈಲ ರಫ್ತಿನ ಪ್ರಮಾಣದಲ್ಲಿ ಭಾರತವೇ ಶೇ.40ರಷ್ಟು ತೈಲವನ್ನು ಖರೀದಿಸುತ್ತಿತ್ತು. ಆದರೆ ಕಠಿಣ ನಿಯಮಗಳ ಕಾರಣದಿಂದ ಏಪ್ರಿಲ್- ಸೆಪ್ಟೆಂಬರ್ ನಡುವೆ ಶೇ.8.4ರಷ್ಟು ಕುಸಿದಿತ್ತು. ಇದೀಗ ನಿರ್ಬಂಧದಿಂದಾಗಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
ಅತಿಶೀಘ್ರ ಭಾರತದ ಜತೆ
ವ್ಯಾಪಾರ ಒಪ್ಪಂದ: ಟ್ರಂಪ್
ಸೋಲ್: ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ ಕುರಿತು ಅಧಿಕಾರಿಗಳು, ಸಚಿವರ ಮಟ್ಟದ ಮಾತುಕತೆ ಪ್ರಗತಿಯಲ್ಲಿರುವಾಗಲೇ, ಶೀಘ್ರವೇ ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಈ ಮೂಲಕ ಶೀಘ್ರವೇ ಒಪ್ಪಂದಕ್ಕೆ ಅಂಕಿತ ಬೀಳುವ ಸುಳಿವು ನೀಡಿದ್ದಾರೆ.ಒಂದು ವೇಳೆ ಒಪ್ಪಂದ ಏರ್ಪಟ್ಟರೆ ಎರಡೂ ದೇಶಗಳ ನಡುವಿನ ತೆರಿಗೆ ಸಮರಕ್ಕೆ ಅಂತಿಮ ತೆರೆ ಬೀಳಲಿದೆ.
ಇಲ್ಲಿ ನಡೆಯುತ್ತಿರುವ ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಸಭೆಯಲ್ಲಿ ಮಾತನಾಡುವ ವೇಳೆ ಭಾರತದ ಜೊತೆಗಿನ ವ್ಯಾಪಾರ ಒಪ್ಪಂದದ ಕುರಿತು ಟ್ರಂಪ್ ಈ ಮಾತುಗಳನ್ನು ಆಡಿದ್ದಾರೆ. ಆದರೆ ಈ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡಿಲ್ಲ.
ಪರಸ್ಪರ ದೇಶಗಳ ಉತ್ಪನ್ನಗಳನ್ನು ಹೆಚ್ಚಿನ ತೆರಿಗೆ ಇಲ್ಲದೇ ರಫ್ತು ಮಾಡಲು ಅವಕಾಶ ನೀಡಲು ಭಾರತ ಮತ್ತು ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಮಾಡಿಕೊಳ್ಳಲು ನಿರ್ಧರಿಸಿವೆ. ಆದರೆ ಕೃಷಿ, ಹೈನುಗಾರಿಕೆ ವಲಯವನ್ನು ಮುಕ್ತ ಮಾಡಲು ಭಾರತ ಒಪ್ಪುತ್ತಿಲ್ಲ. ಹೀಗಾಗಿ ವ್ಯಾಪಾರ ಒಪ್ಪಂದ ಕುದುರುವಲ್ಲಿ ವಿಳಂಬವಾಗುತ್ತಿದೆ.