ಭಾರತದಿಂದ ಅಗ್ನಿ-5 ‘ಬಂಕರ್ ಬಸ್ಟರ್‌’ ಕ್ಷಿಪಣಿ ಅಭಿವೃದ್ಧಿ

KannadaprabhaNewsNetwork |  
Published : Jul 01, 2025, 12:47 AM ISTUpdated : Jul 01, 2025, 05:54 AM IST
ಅಗ್ನಿ-5 ಖಂಡಾಂತರ ಕ್ಷಿಪಣಿ | Kannada Prabha

ಸಾರಾಂಶ

 ಅಮೆರಿಕದ ಬಂಕರ್‌ ಬಸ್ಟರ್‌ ಬಾಂಬ್‌, ಇತ್ತೀಚೆಗೆ ಇರಾನ್‌ನ ಅಣು ನೆಲೆಗಳನ್ನೇ ನಾಶ ಮಾಡಿತ್ತು. ಈಗ ಇಂತದ್ದೇ ಬಾಂಬ್‌ ಅನ್ನು ಭಾರತ ಕೂಡ ಸಿದ್ಧಪಡಿಸುತ್ತಿದೆ. ಅಗ್ನಿ-5 ಖಂಡಾಂತರ ಕ್ಷಿಪಣಿಯನ್ನೇ ಬಂಕರ್‌ ಬಸ್ಟರ್‌ ಬಾಂಬ್‌ ಹೊತ್ತೊಯ್ಯುವ ಸಾಮರ್ಥ್ಯದೊಂದಿಗೆ ರೂಪಾಂತರಿಸಲಾಗುತ್ತಿದೆ.

 ನವದೆಹಲಿ: ನೆಲದಾಳದಲ್ಲಿನ ಬಂಕರ್‌ಗಳನ್ನೂ ಧ್ವಂಸ ಮಾಡಬಲ್ಲ ಅಮೆರಿಕದ ಬಂಕರ್‌ ಬಸ್ಟರ್‌ ಬಾಂಬ್‌, ಇತ್ತೀಚೆಗೆ ಇರಾನ್‌ನ ಅಣು ನೆಲೆಗಳನ್ನೇ ನಾಶ ಮಾಡಿತ್ತು. ಈಗ ಇಂತದ್ದೇ ಬಾಂಬ್‌ ಅನ್ನು ಭಾರತ ಕೂಡ ಸಿದ್ಧಪಡಿಸುತ್ತಿದೆ. ಅಗ್ನಿ-5 ಖಂಡಾಂತರ ಕ್ಷಿಪಣಿಯನ್ನೇ ಬಂಕರ್‌ ಬಸ್ಟರ್‌ ಬಾಂಬ್‌ ಹೊತ್ತೊಯ್ಯುವ ಸಾಮರ್ಥ್ಯದೊಂದಿಗೆ ರೂಪಾಂತರಿಸಲಾಗುತ್ತಿದೆ.

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಅಗ್ನಿ-5ನ್ನು ಉನ್ನತೀಕರಿಸುತ್ತಿದೆ. ಪ್ರಸ್ತುತ ಸಿಡಿತಲೆಗಳನ್ನು ಹೊತ್ತು 5000 ಕಿ.ಮೀ. ಕ್ರಮಿಸುವ ಸಾಮರ್ಥ್ಯವುಳ್ಳ ಇವುಗಳನ್ನು 7500 ಕೆ.ಜಿ. ಬಂಕರ್‌ ಬಸ್ಟರ್‌ಗಳನ್ನು ಹೊತ್ತೊಯ್ಯುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ. ಇವು ನೆಲದಡಿ 80ರಿಂದ 100 ಮೀ. ನುಗ್ಗಿ ದಾಳಿ ಮಾಡಬಲ್ಲವು.

ಬಂಕರ್‌ ಬಸ್ಟರ್‌ ಬಳಕೆಗೆ ಅಮೆರಿಕ ಬಾಂಬರ್‌ ವಿಮಾನಗಳನ್ನು ಬಳಸಿತ್ತಾದರೂ, ಭಾರತ ಕ್ಷಿಪಣಿಗಳಿಗೆ ಅವುಗಳನ್ನು ಅಳವಡಿಸುತ್ತಿದೆ. ಇದರಿಂದ ಖರ್ಚು ಕೊಂಚ ಕಡಿಮೆಯಾಗುತ್ತದೆ. ಡಿಆರ್‌ಡಿಒ 2 ಮಾದರಿಯ ಕ್ಷಿಪಣಿಗಳನ್ನು ತಯಾರಿಸುತ್ತಿದ್ದು, ಒಂದು ನೆಲದ ಮೇಲಿನ ಗುರಿಗಳನ್ನು ಉಡಾಯಿಸಿದರೆ, ಇನ್ನೊಂದು ನೆಲವನ್ನು ಭೇದಿಸಿ ಸ್ಫೋಟಿಸುತ್ತದೆ. ಇದಕ್ಕೆ ಬಳಸಲಾಗುವ ಪ್ರತಿ ಸಿಡಿತಲೆ 8 ಟನ್‌ ತೂಗುತ್ತದೆ. ಇವುಗಳನ್ನು ಚೀನಾ ಮತ್ತು ಪಾಕಿಸ್ತಾನದ ನಿಯಂತ್ರಣ ಕೇಂದ್ರ, ಕ್ಷಿಪಣಿ ಸಂಗ್ರಹಗಾರ, ಸೇನಾ ಮೂಲಸೌಕರ್ಯಗಳನ್ನು ಧ್ವಂಸಗೊಳಿಸಲು ಬಾರತ ಬಳಸುವ ಸಾಧ್ಯತೆಯಿದೆ.

ಇರಾನ್‌ನ ಭೂಗತ ಅಣುಕೇಂದ್ರಗಳ ಮೇಲಿನ ದಾಳಿ ಇಸ್ರೇಲ್‌ನಿಂದ ಸಾಧ್ಯವಾಗಿರಲಿಲ್ಲ. ಆದರೆ ಅಮೆರಿಕ ಅವುಗಳ ಮೇಲೆ ಬಂಕರ್‌ ಬಸ್ಟರ್‌ಗಳಿಂದ ದಾಳಿ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

4 ವರ್ಷದಲ್ಲಿ 52 ಕಣ್ಗಾವಲು ಉಪಗ್ರಹ ಉಡ್ಡಯನದ ಗುರಿ

ನವದೆಹಲಿ: ಆಪರೇಷನ್‌ ಸಿಂದೂರ ಕಾರ್ಯಾಚರಣೆ ಬಳಿಕ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಇದೀಗ ಚೀನಾ, ಪಾಕಿಸ್ತಾನ ಗಡಿ ಮತ್ತು ಹಿಂದೂಮಹಾಸಾಗರದ ಮೇಲೆ ಹೆಚ್ಚಿನ ಕಣ್ಗಾವಲು ಇಡುವ 52 ಉಪಗ್ರಹಗಳ ಉಡ್ಡಯನ ಕಾರ್ಯಕ್ಕೆ ವೇಗ ನೀಡಲು ನಿರ್ಧರಿಸಿದೆ. ಮಿಲಿಟರಿ ಉದ್ದೇಶಕ್ಕೆಂದೇ ಈ ಕಣ್ಗಾವಲು ಉಪಗ್ರಹಗಳನ್ನು ನಾಲ್ಕು ವರ್ಷದಲ್ಲಿ ಪೂರ್ಣಗೊಳಿಸಲು ಸರ್ಕಾರ ನಿರ್ಧರಿಸಿದೆ.

26,968 ಕೋಟಿ ರು. ವೆಚ್ಚದ ಈ ಕಣ್ಗಾವಲು ಉಪಗ್ರಹಗಳ ಯೋಜನೆಯಡಿ ಗಡಿ ಮೇಲೆ ಹೆಚ್ಚಿನ ನಿಗಾ ಇಡಲು ಸಾಧ್ಯವಾಗಲಿದೆ. ಹೆಚ್ಚುತ್ತಿರುವ ಚೀನಾದ ಬಾಹ್ಯಾಕಾಶ ಸಾಮರ್ಥ್ಯವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ರೂಪಿಸಲಾಗಿದೆ.ಖಾಸಗಿಯಿಂದಲೂ ಉಡ್ಡಯನ:

ಬಾಹ್ಯಾಕಾಶ ಆಧರಿತ ಕಣ್ಗಾವಲು ಕಾರ್ಯಕ್ರಮ(ಎಸ್‌ಬಿಎಸ್‌)ದ ಮೂರನೇ ಹಂತದಲ್ಲಿ ಒಟ್ಟು 52ರಲ್ಲಿ ಇಸ್ರೋ 21 ಉಪಗ್ರಹಗಳನ್ನು ಹಾರಿಬಿಡಲಿದ್ದು, ಉಳಿದ 31 ಉಪಗ್ರಹಗಳನ್ನು ಖಾಸಗಿ ಕಂಪನಿಗಳು ಅಭಿವೃದ್ಧಿಪಡಿಸಿ ಕಕ್ಷೆಯಲ್ಲಿ ಕೂರಿಸಲಿವೆ. ಮೊದಲ ಉಪಗ್ರಹವನ್ನು ಮುಂದಿನ ಏಪ್ರಿಲ್‌ನಲ್ಲಿ ಹಾರಿಬಿಡುವ ಉದ್ದೇಶವಿದೆ.2029ರೊಳಗೆ ಎಲ್ಲಾ 52 ಉಪಗ್ರಹಗಳನ್ನು ಕಕ್ಷೆಯಲ್ಲಿ ಕೂರಿಸುವ ಗುರಿ ಇದ್ದು, ಡಿಫೆನ್ಸ್‌ ಸ್ಪೇಸ್‌ ಏಜೆನ್ಸಿ(ಡಿಎಸ್‌ಎ)ಯು ಈ ಯೋಜನೆಯ ಉಸ್ತುವಾರಿ ವಹಿಸಲಿದೆ.

PREV
Read more Articles on

Recommended Stories

ಗುಂಡಿ ಬಿದ್ದ ಹೆದ್ದಾರಿಯಲ್ಲಿ ಸುಂಕ ವಸೂಲಾತಿ ಇಲ್ಲ: ಸುಪ್ರೀಂ ತೀರ್ಪು
ಆರೋಗ್ಯ, ಜೀವ ವಿಮೆಗೆ ಶೂನ್ಯ ಜಿಎಸ್‌ಟಿಗೆ ಸರ್ಕಾರದ ಒಲವು