ನವದೆಹಲಿ : ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಅಂದರೆ ಅಮೆರಿಕದ ತೆರಿಗೆ ಹೇರಿಕೆಗೂ ಮುನ್ನ ಭಾರತದ ಆರ್ಥಿಕತೆಯು ಶೇ.7.8ರಷ್ಟು ಬೆಳವಣಿಗೆ ದಾಖಲಿಸಿದೆ. ಇದು ಕಳೆದ 5 ತ್ರೈಮಾಸಿಕದ ದಾಖಲೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದು ಶೇ.6.5ರಷ್ಟಿತ್ತು.
‘ವಿಶ್ವದ ಪ್ರಮುಖ ಆರ್ಥಿಕತೆಗಳಲ್ಲಿ ಭಾರತವೇ ಈ ವಿತ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಉತ್ತಮ ಬೆಳವಣಿಗೆ ಸಾಧಿಸಿದ ರಾಷ್ಟ್ರವಾಗಿದೆ. ಇದೇ ಅವಧಿಯಲ್ಲಿ ಚೀನಾ ಜಿಡಿಪಿ ಶೇ.5.2ರಷ್ಟು ಬೆಳವಣಿಗೆ ಸಾಧಿಸಿದೆ. ಭಾರತವು ಈ ರೀತಿಯ ಬೆಳವಣಿಗೆ ಸಾಧಿಸುವಲ್ಲಿ ಕೃಷಿ ಕ್ಷೇತ್ರದ ಕೊಡುಗೆ ಸಾಕಷ್ಟಿದೆ’ ಎಂದು ಸರ್ಕಾರದ ಅಂಕಿ-ಅಂಶಗಳು ಹೇಳಿವೆ.
ಭಾರತವು ಈ ಹಿಂದೆ 2024ರ ಜನವರಿ-ಮಾರ್ಚ್ ನಡುವೆ ಶೇ.8.4ರಷ್ಟು ಆರ್ಥಿಕ ಬೆಳವಣಿಗೆ ದಾಖಲಿಸಿತ್ತು. ನಂತರ ಕೊಂಚ ಇಳಿಕೆ ಕಂಡಿತ್ತು.
ಕೃಷಿ ಕ್ಷೇತ್ರದ ಸಾಧನೆ:
ಮೊದಲ ತ್ರೈಮಾಸಿಕದಲ್ಲಿ ಕೃಷಿ ಕ್ಷೇತ್ರವು ಶೇ.3.7ರಷ್ಟು ಬೆಳವಣಿಗೆ ಸಾಧಿಸಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಶೇ.1.5ರಷ್ಟು ಹೆಚ್ಚಾಗಿದೆ. ಆದರೆ ಉತ್ಪಾದನಾ ಕ್ಷೇತ್ರದ ಬೆಳವಣಿಗೆ ಮಾತ್ರ ಕೊಂಚ ಮಟ್ಟಿಗಷ್ಟೇ ಏರಿಕೆಯಾಗಿದೆ. ಈ ಬಾರಿ ಅದು ಶೇ.7.7ರಷ್ಟಿದ್ದರೆ, ಕಳೆದ ವರ್ಷದ ಇದೇ ತ್ರೈಮಾಸಿಕ ಅವಧಿಯಲ್ಲಿ ಶೇ.7.6ರಷ್ಟಿತ್ತು.
ಈ ವಿತ್ತೀಯ ವರ್ಷದ ನೈಜ ಜಿಡಿಪಿ ಬೆಳವಣಿಗೆ ದರ ಶೇ.6.5ರಷ್ಟಿರಲಿದೆ ಎಂದು ಆರ್‌ಬಿಐ ಅಂದಾಜಿಸಿತ್ತು. ಮೊದಲ ತ್ರೈಮಾಸಿಕದಲ್ಲಿ ಅದು ಶೇ.6.5ರಷ್ಟಿರಲಿದೆ ಎಂದೂ ಹೇಳಿತ್ತು.