ಪ್ರತಿ ಭಾರತೀಯನ ಮೇಲಿದೆ 4.8 ಲಕ್ಷ ಋಣ ಭಾರ!

KannadaprabhaNewsNetwork | Updated : Jul 03 2025, 04:12 AM IST
ಋಣ ಭಾರ  | Kannada Prabha

ಕಳೆದೆರಡು ವರ್ಷಗಳಲ್ಲಿ ಭಾರತದ ಪ್ರತಿ ವ್ಯಕ್ತಿ ಮೇಲಿನ ಋಣ ಭಾರ 4.8 ಲಕ್ಷ ರು.ಗೇರಿದೆ. 2023ರ ಮಾರ್ಚ್‌ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 3.9ಲಕ್ಷ ರು.ನಷ್ಟು ಸಾಲವಿತ್ತು.  ಮಾರ್ಚ್‌ 2025ರ ವೇಳೆಗೆ ಇದು ಶೇ.23ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ)  ಹೇಳಿದೆ.

ನವದೆಹಲಿ: ಕಳೆದೆರಡು ವರ್ಷಗಳಲ್ಲಿ ಭಾರತದ ಪ್ರತಿ ವ್ಯಕ್ತಿ ಮೇಲಿನ ಋಣ ಭಾರ 4.8 ಲಕ್ಷ ರು.ಗೇರಿದೆ. 2023ರ ಮಾರ್ಚ್‌ನಲ್ಲಿ ಪ್ರತಿ ವ್ಯಕ್ತಿ ಮೇಲೆ ತಲಾ 3.9ಲಕ್ಷ ರು.ನಷ್ಟು ಸಾಲವಿತ್ತು. ಎರಡು ವರ್ಷ ಅಂದರೆ ಮಾರ್ಚ್‌ 2025ರ ವೇಳೆಗೆ ಇದು ಶೇ.23ರಷ್ಟು ಹೆಚ್ಚಳ ಕಂಡಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ವಿತ್ತೀಯ ಸ್ಥಿರತೆ ವರದಿ ಹೇಳಿದೆ.

ವರದಿ ಪ್ರಕಾರ ಪ್ರತಿ ಭಾರತೀಯನ ಮೇಲಿನ ಸಾಲದ ಹೊರೆ ಕಳೆದೆರಡು ವರ್ಷದಲ್ಲಿ 90 ಸಾವಿರ ರು.ನಷ್ಟು ಹೆಚ್ಚಾಗಿದೆ. ಹೋಮ್‌ ಲೋನ್‌, ಪರ್ಸನಲ್‌ ಲೋನ್‌, ಕ್ರೆಡಿಟ್‌ ಕಾರ್ಡ್‌ ವೆಚ್ಚ ಮತ್ತು ಇತರೆ ರಿಟೇಲ್‌ ಲೋನ್‌ನಿಂದಾಗಿ ಸಾಲದ ಹೊರೆ ಏರಿಕೆ ಕಂಡಿದೆ. ಗೃಹೇತರ ರಿಟೇಲ್‌ ಲೋನ್‌ನಂಥ ಪರ್ಸನಲ್‌ ಲೋನ್ ಮತ್ತು ಕ್ರೆಡಿಟ್‌ ಕಾರ್ಡ್‌ ಲೋನ್‌ನಲ್ಲಿ ಕಳೆದೆರಡು ವರ್ಷ ಭಾರೀ ಏರಿಕೆಯಾಗಿದೆ. ಈ ಸಾಲ ಒಟ್ಟಾರೆ ದೇಶೀಯ ಸಾಲದ ಶೇ.54.9ರಷ್ಟಿದೆ. ಇನ್ನು ಗೃಹ ಸಾಲದ ಪ್ರಮಾಣ ಶೇ.29ರಷ್ಟಿದೆ.

ಇದೇ ವೇಳೆ ವರದಿಯು ಲೋನ್‌-ಟು-ವ್ಯಾಲ್ಯೂ (ಎಲ್‌ಟಿವಿ) ಪ್ರಮಾಣದಲ್ಲಿನ ಹೆಚ್ಚಳ ಕುರಿತು ತೀವ್ರ ಕಳವಳ ವ್ಯಕ್ತಪಡಿಸಿದ್ದು, ಇದು ಶೇ.70ಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದೆ.

ಇತ್ತೀಚಿನ ವರ್ಷಗಳಲ್ಲಿ ಭಾರತದ ಮನೆಮಂದಿಯ ಸಾಲದ ಪ್ರಮಾಣ ಏರುಗತಿಯಲ್ಲಿದ್ದರೂ 2024ರ ಡಿಸೆಂಬರ್ ಅಂತ್ಯದಲ್ಲಿ ಈ ಸಾಲದ ಪ್ರಮಾಣ ಡಿಜಿಪಿಯ ಶೇ.41.9ರಷ್ಟಿತ್ತು. ಈ ಪ್ರಮಾಣ ಇತರೆ ಬೆಳೆಯುತ್ತಿರುವ ಆರ್ಥಿಕತೆಗಳಿಗೆ ಹೋಲಿಸಿದರೆ ಕಡಿಮೆ ಎಂದು ಹೇಳಿದೆ.

ಅಚ್ಛೇದಿನದ ಸಾಲ-ಕಾಂಗ್ರೆಸ್‌ ಟೀಕೆ:

ಸಾಲದ ಹೊರೆ ಹೆಚ್ಚಳವಾಗುತ್ತಿರುವುದಕ್ಕೆ ಪ್ರತಿಪಕ್ಷ ಕಾಂಗ್ರೆಸ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇಂದ್ರ ಸರ್ಕಾರ ಅಂಕಿ-ಅಂಶಗಳು ಮತ್ತು ತಜ್ಞರ ನೆರವಿಂದ ವಾಸ್ತವಾಂಶ ಮುಚ್ಚಿಹಾಕಲು ಯತ್ನಿಸುತ್ತಿದೆ. ಆದರೆ, ‘ಮೋದಿ ರಾಜ್‌’ನಲ್ಲಿ ಸಾಲದ ಹೊರೆ ಗರಿಷ್ಠ ಮಟ್ಟಕ್ಕೆ ತಲುಪಿದೆ. ಕೇಂದ್ರ ಸರ್ಕಾರ 11 ವರ್ಷಗಳಲ್ಲಿ ದೇಶದ ಆರ್ಥಿಕತೆ ಹಾಳುಗೆಡವಿದೆ. ಇದು ಅಚ್ಛೇ ದಿನದ ಸಾಲ ಎಂದು ಪಕ್ಷದ ಹಿರಿಯ ಮುಖಂಡ ಜೈರಾಂ ರಮೇಶ್‌ ಕಿಡಿಕಾರಿದ್ದಾರೆ.

  • 2 ವರ್ಷದ ಹಿಂದೆ ಪ್ರತಿ ಪ್ರಜೆ ಮೇಲಿತ್ತು 3.9 ಲಕ್ಷ ಸಾಲ
  • ಇದೀಗ ಅದು 90,000ದಷ್ಟು ಏರಿಕೆ: ಆರ್‌ಬಿಐ ವರದಿ

Read more Articles on