ನವದೆಹಲಿ: ಭಾರತದಿಂದ ಕೆಲ ವಸ್ತುಗಳ ಆಮದನ್ನು ರದ್ದುಪಡಿಸಿದ್ದ ಬಾಂಗ್ಲಾದೇಶದ ನಡೆಗೆ ಭಾರತ ಇದೀಗ ಅದೇ ಮಾದರಿಯ ತಿರುಗೇಟು ನೀಡಿದೆ. ಇದರ ಭಾಗವಾಗಿ ಸಿದ್ಧ ಉಡುಪು, ಸಂಸ್ಕರಿಸಿದ ಆಹಾರ ಪದಾರ್ಥ ಸೇರಿದಂತೆ ಬಾಂಗ್ಲಾದಿಂದ ಭೂ ಗಡಿಮಾರ್ಗದಲ್ಲಿ ಆಮದಾಗುವ ವಸ್ತುಗಳ ಮೇಲೆ ನಿರ್ಬಂಧ ಹೇರಲಾಗಿದೆ. ನಿರ್ಬಂಧಕ್ಕೆ ಒಳಪಟ್ಟ ವಸ್ತುಗಳು, ದ್ವಿಪಕ್ಷೀಯ ಆಮದಿನ ಶೇ.42ರಷ್ಟಿದ್ದು, ಇದರ ಮೌಲ್ಯ 6500 ಕೋಟಿ ರು.ನಷ್ಟಿದೆ. ಹೀಗಾಗಿ ಭಾರತದ ಈ ಕ್ರಮ ಬಾಂಗ್ಲಾದೇಶಕ್ಕೆ ಭಾರೀ ಹೊಡೆತ ನೀಡಲಿದೆ ಎನ್ನಲಾಗಿದೆ.
ವಿದೇಶಿ ವ್ಯಾಪಾರ ನಿರ್ದೇಶನಾಲಯ ಹೊರಡಿಸಿರುವ ಅಧಿಸೂಚನೆಯ ಪ್ರಕಾರ, ಬಾಂಗ್ಲಾದಿಂದ ಸಿದ್ಧ ಉಡುಪು, ಕಾರ್ಬೊನೇಟೆಡ್ ಪಾನೀಯ, ಸಂಸ್ಕರಿಸಿದ ಆಹಾರ, ಹತ್ತಿ, ಪ್ಲಾಸ್ಟಿಕ್ ಮತ್ತು ಪಿವಿಸಿ ಸರಕು, ವರ್ಣದ್ರವ್ಯ, ಮರದ ಪೀಠೋಪಕರಣಗಳನ್ನು ಅಸ್ಸಾಂ, ಮೇಘಾಲಯ, ತ್ರಿಪುರ, ಮಿಜೋರಾಂ, ಪಶ್ಚಿಮ ಬಂಗಾಳದ ಚಂಗ್ರಬಂಧ ಮತ್ತು ಫುಲ್ಬರಿ ಭೂಗಡಿಯ ಮೂಲಕ ಆಮದು ಮಾಡಿಕೊಳ್ಳುವಂತಿಲ್ಲ. ಆದರೆ, ಇವನ್ನು ನವ ಶೇವಾ ಮತ್ತು ಕೋಲ್ಕತ್ತಾ ಬಂದರುಗಳ ಮೂಲಕ ಆಮದು ಮಾಡಿಕೊಳ್ಳಬಹುದು.
ಈ ನಿರ್ಬಂಧ, ಮೀನು, ಎಲ್‌ಪಿಜಿ, ಖಾದ್ಯ ಎಣ್ಣೆ ಮತ್ತು ಪುಡಿಮಾಡಿದ ಕಲ್ಲಿನ ಆಮದಿಗೆ ಅನ್ವಯಿಸದು. ಅಂತೆಯೇ, ಭಾರತದ ಮೂಲಕ ನೇಪಾಳ ಮತ್ತು ಭೂತಾನ್‌ಗೆ ಹೋಗುವ ವಸ್ತುಗಳಿಗೂ ಅನ್ವಯ ಆಗುವುದಿಲ್ಲ. ಪ್ರಧಾನಿ ಶೇಖ್ ಹಸೀನಾ ನಿರ್ಗಮನದ ಬಳಿಕ ಚೀನಾ ಕಡೆ ವಾಲತೊಡಗಿದ್ದ ಬಾಂಗ್ಲಾ, ಕಳೆದ ತಿಂಗಳು ಭಾರತದಿಂದ ಆಮದಾಗುವ ನೂಲು, ಅಕ್ಕಿ ಸೇರಿದಂತೆ ಕೆಲ ವಸ್ತುಗಳ ಆಮದನ್ನು ನಿರ್ಬಂಧಿಸಿತ್ತು. ಜತೆಗೆ, ಭಾರತೀಯ ಸರಕು ನಿರ್ಗಮನದ ಮೇಲೆ ಸಾರಿಗೆ ಶುಲ್ಕ ವಿಧಿಸಿತ್ತು.
2024-25 ಅವಧಿಯಲ್ಲಿ ಬಾಂಗ್ಲಾದಿಂದ ಒಟ್ಟು 5.7 ಸಾವಿರ ಕೋಟಿ ರು. ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಳ್ಳಲಾಗಿತ್ತು. ಇದರಲ್ಲಿ, ಭೂಗಡಿಯ ಮೂಲಕವೇ 4.4 ಸಾವಿರ ಕೋಟಿ ರು. ಬೆಲೆಯ ವಸ್ತುಗಳು ಭಾರತಕ್ಕೆ ಬಂದಿದ್ದವು.
ಪರಿಣಾಮವೇನು?:
ಬಾಂಗ್ಲಾ ವಸ್ತುಗಳನ್ನು ಆಮದನ್ನು ನಿಲ್ಲಿಸುವ ಬಗ್ಗೆ ಭಾರತೀಯ ವ್ಯಾಪಾರಿಗಳು ಮುಂಚಿನಿಂದಲೂ ಆಗ್ರಹಿಸುತ್ತಿದ್ದರು. ಕಾರಣ, ಚೀನಾದಿಂದ ಸುಂಕರಹಿತ ಬಟ್ಟೆಯನ್ನು ಆಮದು ಮಾಡಿಕೊಳ್ಳುತ್ತಿದ್ದ ಬಾಂಗ್ಲಾ ವ್ಯಾಪಾರಿಗಳಿಗೆ ರಫ್ತು ಸಬ್ಸಿಡಿ ಕೂಡ ಲಭ್ಯವಿತ್ತು. ಇದರಿಂದ ಭಾರತದ ಮಾರುಕಟ್ಟೆಗಳಲ್ಲಿ ಅವರಿಗೆ ಶೇ.10ರಿಂದ 15ರಷ್ಟು ಲಾಭವಾಗುತ್ತಿತ್ತು. ಇದೀಗ ಅವುಗಳ ಮೇಲಿನ ಈ ನಿರ್ಬಂಧದಿಂದ ಭಾರತದ ಸ್ಥಳೀಯ ಜವಳಿ ಮಾರುಕಟ್ಟೆಗೆ, ಅದರಲ್ಲೂ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಅನುಕೂಲವಾಗಲಿದೆ.