ನವದೆಹಲಿ: 2000ರಿಂದ 2023ರ ಅವಧಿಯಲ್ಲಿ ಭಾರತದ ಶೇ.1ರಷ್ಟು ಟಾಪ್ ಶ್ರೀಮಂತರ ಆಸ್ತಿ ಶೇ.62ರಷ್ಟು ಹೆಚ್ಚಾಗಿದೆ ಎಂದು ಜಿ20 ದೇಶಗಳ ಸಮೂಹ ನಡೆಸಿದ ಅಧ್ಯಯನ ವರದಿಯೊಂದು ಹೇಳಿದೆ.
ನೊಬೆಲ್ ಪ್ರಶಸ್ತಿ ಪುರಸ್ಕೃತ ಜೋಸೆಫ್ ಸ್ಟಿಗ್ಲಿಟ್ಜ್ ನೇತೃತ್ವದಲ್ಲಿ ನಡೆದ ಈ ಅಧ್ಯಯನವು ಅಂತಾರಾಷ್ಟ್ರೀಯ ಅಸಮಾನತೆಯು ‘ತುರ್ತು ಪರಿಸ್ಥಿತಿ’ ಹಂತಕ್ಕೆ ತಲುಪಿದೆ. ಈ ಮೂಲಕ ಪ್ರಜಾಪ್ರಭುತ್ವ, ಆರ್ಥಿಕ ಸ್ಥಿರತೆ ಮತ್ತು ಹವಾಮಾನ ಬದಲಾವಣೆಗೆ ಬೆದರಿಕೆಯಾಗುತ್ತಿದೆ ಎಂದು ಎಚ್ಚರಿಸಿದೆ.
2000ದಿಂದ 2024ರ ನಡುವೆ ಸೃಷ್ಟಿಯಾದ ಸಂಪತ್ತಿನ ಶೇ.41ರಷ್ಟು ಭಾಗ ವಿಶ್ವಾದ್ಯಂತ ಶೇ.1ರಷ್ಟು ಶ್ರೀಮಂತರ ಪಾಲಾಗಿದೆ. ಉಳಿದ ಕೆಳಹಂತದ ಅರ್ಧದಷ್ಟು ಜನ ಕೇವಲ ಶೇ.1ರಷ್ಟು ಆಸ್ತಿ ಗಳಿಸಿದ್ದಾರೆ ಎಂದು ಆರ್ಥಿಕ ತಜ್ಞರಾದ ಜಯತಿ ಘೋಷ್, ವಿನಿ ಬ್ಯಾನಿಮಾ ಮತ್ತು ಇಮ್ರಾನ್ ವಲೋಡಿಯಾ ಅವರಿದ್ದ ಅಂತಾರಾಷ್ಟ್ರೀಯ ಅಸಮಾನತೆಗೆ ಸಂಬಂಧಿಸಿದ ಸ್ವತಂತ್ರ ತಜ್ಞರ ಜಿ20 ದೇಶಗಳ ವಿಶೇಷ ಸಮಿತಿ ಹೇಳಿದೆ.
ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾ, ಭಾರತದಂಥ ದೇಶಗಳಲ್ಲಿನ ತಲಾ ಆದಾಯ ಹೆಚ್ಚಳದಿಂದಾಗಿ ಅಂತಾರಾಷ್ಟ್ರೀಯ ಜಿಡಿಪಿಯಲ್ಲಿ ಹೆಚ್ಚಿನ ಆದಾಯ ಹೊಂದಿರುವ ದೇಶಗಳ ಪಾಲು ಕೊಂಚಮಟ್ಟಿಗೆ ತಗ್ಗಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.
2000-2023ರ ನಡುವೆ ಶೇ.1ರಷ್ಟು ಶ್ರೀಮಂತರು ವಿಶ್ವದ ಅರ್ಧದಷ್ಟು ದೇಶಗಳಲ್ಲಿ ತಮ್ಮ ಸಂಪತ್ತನ್ನು ವೃದ್ಧಿಮಾಡಿಕೊಂಡಿದ್ದಾರೆ. ಇದು ಒಟ್ಟಾರೆ ವಿಶ್ವದ ಸಂಪತ್ತಿನ ಶೇ.74ರಷ್ಟಾಗಿದೆ. ಭಾರತದಲ್ಲಿ ಈ ಅವಧಿಯಲ್ಲಿ ಶೇ.1ರಷ್ಟು ಶ್ರೀಮಂತರು ತಮ್ಮ ಸಂಪತ್ತನ್ನು ಶೇ.62ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಚೀನಾದಲ್ಲಿ ಇದು ಶೇ.54ರಷ್ಟಾಗಿದೆ ಎಂದು ವರದಿ ತಿಳಿಸಿದೆ.
ತೀವ್ರ ಅಸಮಾನತೆ ಎಂಬುದು ಆಯ್ಕೆಯೇ ಹೊರತು ಅನಿವಾರ್ಯತೆ ಅಲ್ಲ. ಬಡವರು-ಶ್ರೀಮಂತರು ಎಂಬ ಅಂತರವು ಮನುಷ್ಯದ ನಿರ್ಧಾರದ ಪರಿಣಾಮ ಆಗಿರುತ್ತದೆ. ಇದನ್ನು ರಾಜಕೀಯ ಇಚ್ಛಾಶಕ್ತಿಯಿಂದ ಬದಲಿಸಲು ಸಾಧ್ಯವಿದೆ. ಅಂತಾರಾಷ್ಟ್ರೀಯ ಸಹಭಾಗಿತ್ವದಿಂದ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ವಿಚಾರದಲ್ಲಿ ಜಿ20 ದೇಶಗಳು ನಿರ್ಣಾಯಕ ಪಾತ್ರವಹಿಸಬಹುದಾಗಿದೆ.
ಹೀಗಾಗಿ ಅಂತಾರಾಷ್ಟ್ರೀಯ ಬದಲಾವಣೆಗಳ ಮೇಲೆ ಮೇಲೆ ನಿಗಾ ಇಡಲು ಹಾಗೂ ನೀತಿ ನಿರೂಪಣೆ ವಿಚಾರವಾಗಿ ಸರ್ಕಾರಕ್ಕೆ ಮಾರ್ಗದರ್ಶನ ನೀಡಲು ಹವಾಮಾನ ಬದಲಾವಣೆ ಕುರಿತ ಅಂತರ್ ಸರ್ಕಾರ ಸಮಿತಿ(ಐಪಿಸಿಸಿ) ಮಾದರಿಯಲ್ಲೇ ಅಸಮಾನತೆಗೆ ಸಂಬಂಧಿಸಿ ಅಂತಾರಾಷ್ಟ್ರೀಯ ಸಮಿತಿ(ಐಪಿಐ)ಯೊಂದನ್ನು ರಚಿಸಲೂ ಈ ವರದಿ ಶಿಫಾರಸು ಮಾಡಿದೆ.
ಈ ಸಮಿತಿಯು ದಕ್ಷಿಣ ಆಫ್ರಿಕಾದ ಅಧ್ಯಕ್ಷತೆಯ ಜಿ20 ದೇಶಗಳ ಶೃಂಗದ ಅವಧಿಯಲ್ಲಿ ರಚನೆಯಾಗಲಿದೆ. ಈ ಮೂಲಕ ಸರ್ಕಾರಗಳಿಗೆ ಅಸಮಾನತೆ ಮತ್ತು ಅದಕ್ಕೆ ಕಾರಣವಾಗುವ ಅಂಶಗಳ ಕುರಿತು ವಿಶ್ವಾಸಾರ್ಹ ಅಂಕಿ-ಅಂಶಗಳನ್ನು ಒದಗಿಸಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಅಸಮಾನತೆ ಹೆಚ್ಚಿರುವ ದೇಶಗಳಲ್ಲಿ ಪ್ರಜಾಪ್ರಭುತ್ವದ ಕುಸಿಯುವ ಆತಂಕವು ಇತರೆ ದೇಶಗಳಿಗೆ ಹೋಲಿಸಿದರೆ 7 ಪಟ್ಟು ಹೆಚ್ಚಿರುತ್ತದೆ ಎಂದೂ ಹೇಳಿರುವ ವರದಿ, 2020ರ ಬಳಿಕ ಅಂತಾರಾಷ್ಟ್ರೀಯ ಬಡತನ ನಿರ್ಮೂಲನೆ ಬಹುತೇಕ ನಿಂತೇ ಹೋಗಿದೆ. 2.3 ಶತಕೋಟಿ ಮಂದಿ ಮತ್ತು ವಿಶ್ವದ ಜನಸಂಖ್ಯೆಯ ಅರ್ಧದಷ್ಟು ಮಂದಿ ಅಗತ್ಯ ಆರೋಗ್ಯ ಸೇವೆಗಳಿಂದ ಇನ್ನೂ ವಂಚಿತರಾಗಿಯೇ ಉಳಿದಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.