ತಪ್ಪಿದ ಮತ್ತೊಂದು ದುರಂತ: ಬೆಂಗ್ಳೂರಲ್ಲಿ ಇಂಡಿಗೋ ತುರ್ತು ಭೂಸ್ಪರ್ಶ

KannadaprabhaNewsNetwork |  
Published : Jun 22, 2025, 01:19 AM ISTUpdated : Jun 22, 2025, 05:12 AM IST
ಇಂಡಿಗೋ  | Kannada Prabha

ಸಾರಾಂಶ

ಗುವಾಹಟಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ 168 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಂಧನ ಇರದ ಕಾರಣ ತುರ್ತಾಗಿ ಲ್ಯಾಂಡ್‌ ಮಾಡಿದ ಘಟನೆ ಗುರುವಾರ ನಡೆದಿದೆ.

 ಬೆಂಗಳೂರು: ಗುವಾಹಟಿಯಿಂದ ಚೆನ್ನೈಗೆ ಪ್ರಯಾಣಿಸುತ್ತಿದ್ದ 168 ಪ್ರಯಾಣಿಕರನ್ನು ಹೊತ್ತ ಇಂಡಿಗೋ ವಿಮಾನ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಲ್ಯಾಂಡ್‌ ಮಾಡಿದ ಘಟನೆ ಗುರುವಾರ ನಡೆದಿದೆ.

ವಿಮಾನದಲ್ಲಿ ಸಾಕಷ್ಟು ಇಂಧನ ಇರದ ಕಾರಣ ಪೈಲಟ್‌ ಮೇ ಡೇ (ತುರ್ತು ಸಂದೇಶ) ಘೋಷಿಸಿದ್ದರು. ಆದಾಗ್ಯೂ ಅದು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಬಂದಿಳಿದಿದೆ. ಅಹಮದಾಬಾದ್‌ ವಿಮಾನ ದುರಂತ ಬೆನ್ನಲ್ಲೇ ಈ ಘಟನೆ ನಡೆದಿದ್ದು, ಪ್ರಯಾಣಿಕರು ಕೆಲಕಾಲ ಆತಂಕಿತರಾಗಿದ್ದರು. 

ಆಗಿದ್ದೇನು?:ಸಂಜೆ 4:40ರ ಸುಮಾರಿಗೆ ಗುವಾಹಟಿಯಿಂದ ಹೊರಟ ವಿಮಾನ 7.45ಕ್ಕೆ ಚೆನ್ನೈನ ವಿಮಾನ ನಿಲ್ದಾಣದ ರನ್‌ವೇಗೆ ಇನ್ನೇನು ಸ್ಪರ್ಶಿಸಬೇಕಿತ್ತು. ಚೆನ್ನೈ ರನ್‌ವೇಯಲ್ಲಿ ದಟ್ಟಣೆ ಇದ್ದ ಕಾರಣ ಅದಕ್ಕೆ ಲ್ಯಾಂಡಿಂಗ್‌ಗೆ ಅನುಮತಿ ಸಿಗಲಿಲ್ಲ. ಹೀಗಾಗಿ ಇನ್ನೇನು ಅದರ ಲ್ಯಾಂಡಿಂಗ್‌ ಗೇರ್‌ (ಚಕ್ರಗಳು) ರನ್‌ವೇ ಸ್ಪರ್ಶಿಸಬೇಕು ಎನ್ನುವಷ್ಟರಲ್ಲಿ ಮತ್ತೆ ವಿಮಾನ ಟೇಕ್‌ಆಫ್‌ ಆಯಿತು.

ವಾಸ್ತವವಾಗಿ ಕೆಲವು ಹೊತ್ತು ಆಗಸದಲ್ಲೇ ವಿಮಾನ ಗಿರಕಿ ಹೊಡೆದು 2ನೇ ಬಾರಿ ಲ್ಯಾಂಡಿಂಗ್‌ಗೆ ಯತ್ನಿಸಬೇಕಿತ್ತು. ಆದರೆ ಪೈಲಟ್‌ ಹೀಗೆ ಮಾಡದೇ ಬೆಂಗಳೂರಿನತ್ತ ಹೊರಟರು ಎಂದು ಮೂಲಗಳು ಹೇಳಿವೆ. ಹೀಗೆ ಹೊರಟ ವಿಮಾನ ಬೆಂಗಳೂರಿನಿಂದ 35 ಮೈಲು ದೂರವಿದ್ದಾಗ ಅದರಲ್ಲಿ ಸಾಕಷ್ಟು ಇಂಧನ ಇಲ್ಲದೇ ಇದ್ದುದನ್ನು ಗಮನಿಸಿದ ಪೈಲಟ್‌ ಮೇ ಡೇ ಘೋಷಿಸಿದ್ದರು. ಜೂ.12ರಂದು ಅಹಮದಾಬಾದ್‌ನಲ್ಲಿ ಭೀಕರ ಅಪಘಾತಕ್ಕೆ ತುತ್ತಾದ ಏರ್‌ ಇಂಡಿಯಾ ವಿಮಾನದಲ್ಲೂ ಮೇ ಡೇ ಘೋಷಿಸಲಾಗಿದ್ದ ಕಾರಣ, ಇಂಡಿಗೋ ಪ್ರಯಾಣಿಕರಲ್ಲೂ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು.ಇತ್ತ ಎಟಿಸಿ ಮಾಹಿತಿಯ ಮೇರೆಗೆ, ಬೆಂಗಳೂರು ವಿಮಾನ ನಿಲ್ದಾಣದಲ್ಲಿ ವೈದ್ಯಕೀಯ ಮತ್ತು ಅಗ್ನಿಶಾಮಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅದೃಷ್ಟವಶಾತ್‌ ಇಂಡಿಗೋ ವಿಮಾನವು ರಾತ್ರಿ 8.20ಕ್ಕೆ ಬಂದಿಳಿದಿದ್ದು, ಎಲ್ಲರೂ ಸುರಕ್ಷಿತರಾಗಿದ್ದಾರೆ.

ಚೆನ್ನೈನಲ್ಲಿ 2ನೇ ಸಲ ಲ್ಯಾಂಡಿಂಗ್‌ಗೆ ಯತ್ನಿಸದೇ ಬೆಂಗಳೂರಿನತ್ತ ವಿಮಾನ ತಿರುಗಿಸಿದ್ದಕ್ಕಾಗಿ ವಿಮಾನದಲ್ಲಿದ್ದ ಇಬ್ಬರೂ ಪೈಟಲ್‌ಗಳನ್ನು ಕೆಲಸದಿಂದ ತೆಗೆದುಹಾಕಲಾಗಿದೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಇಂಡಿಗೋ ಅಧಿಕೃತ ಹೇಳಿಕೆ ನೀಡಿಲ್ಲ.

PREV
Read more Articles on

Recommended Stories

65 ಲಕ್ಷ ಬಿಹಾರ ಮತದಾರರ ಕೈಬಿಟ್ಟಿದ್ದೇಕೆ?: ಸುಪ್ರೀಂ ಪ್ರಶ್ನೆ
ಶುಭಾಂಶು ಶುಕ್ಲಾ ವಾರಾಂತ್ಯಕ್ಕೆ ಭಾರತಕ್ಕೆ