ಪಿಟಿಐ ನವದೆಹಲಿ
ದೇಶದ ಅತ್ಯಂತ ಸ್ವಚ್ಛ ನಗರಿಗಳು ಎಂಬ ಹಿರಿಮೆಗೆ ಮಧ್ಯಪ್ರದೇಶದ ಇಂದೋರ್ ಹಾಗೂ ಗುಜರಾತ್‌ನ ಸೂರತ್ ಭಾಜನವಾಗಿವೆ. ಈ ಎರಡೂ ನಗರಿಗಳಿಗೆ ಪ್ರಥಮ ಸ್ಥಾನ ದೊರೆತಿದೆ.
ವಿಶೇಷ ಎಂದರೆ, ಇಂದೋರ್ ಸತತ 7ನೇ ವರ್ಷವೂ ನಂ.1 ಸ್ವಚ್ಛ ನಗರಿ ಸ್ಥಾನವನ್ನು ಉಳಿಸಿಕೊಂಡಿದೆ.ಮಹಾರಾಷ್ಟ್ರದ ನವಿ ಮುಂಬೈ ಮೂರನೇ ಸ್ಥಾನದಲ್ಲಿದ್ದರೆ, ಕರ್ನಾಟಕದ ಯಾವೊಂದೂ ನಗರವು ಟಾಪ್ 10ರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲವಾಗಿವೆ.
ಮೈಸೂರು ದೇಶವ್ಯಾಪಿ ನಗರಗಳಲ್ಲಿ 23ನೇ ಸ್ಥಾನ ಮತ್ತು ಕರ್ನಾಟಕಕ್ಕೆ ಮೊದಲ ಸ್ಥಾನ ಪಡೆದಿದೆ.ಪ್ರತಿ ವರ್ಷದಂತೆ ಕೇಂದ್ರ ಸರ್ಕಾರವು ಈ ವರ್ಷ ಕೂಡ ಸ್ವಚ್ಛತಾ ಸಮೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
ಅದರ ಪ್ರಕಾರ, ಅತ್ಯುತ್ತಮ ಸಾಧಕ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ ಹಾಗೂ ಛತ್ತೀಸ್‌ಗಢ ನಂತರದ ಎರಡು ಸ್ಥಾನವನ್ನು ಗಳಿಸಿವೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯಲ್ಲಿ ಗುರುವಾರ ಸ್ವಚ್ಛತಾ ಪ್ರಶಸ್ತಿ ವಿಜೇತ ನಗರ, ರಾಜ್ಯಗಳ ಪ್ರತಿನಿಧಿಗಳಿಗೆ ಬಹುಮಾನವನ್ನು ವಿತರಿಸಿದರು.
ಈ ವೇಳೆ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಹರದೀಪ್ ಸಿಂಗ್ ಪುರಿ ಮತ್ತಿತರರು ಇದ್ದರು.1 ಲಕ್ಷಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ನಗರಗಳ ವಿಭಾಗದಲ್ಲಿ ಮಹಾರಾಷ್ಟ್ರದ ಸಾಸ್ವದ್ ಪ್ರಥಮ ಸ್ಥಾನ ಗೆದ್ದುಕೊಂಡಿದೆ.
ಛತ್ತೀಸ್‌ಗಢದ ಪಠಾಣ್ ಹಾಗೂ ಮಹಾರಾಷ್ಟ್ರದ ಲೋನಾವಳ 2 ಮತ್ತು 3ನೇ ಸ್ಥಾನಕ್ಕೆ ಭಾಜನವಾಗಿವೆ. ಅತ್ಯುತ್ತಮ ಹಾಗೂ ಸ್ವಚ್ಛ ಗಂಗಾ ಪಟ್ಟಣ ಎಂಬ ಪ್ರಶಸ್ತಿ ವಾರಾಣಸಿಗೆ ದೊರೆತಿದ್ದರೆ, ಪ್ರಯಾಗರಾಜ್ 2ನೇ ಸ್ಥಾನಕ್ಕೆ ಪಾತ್ರವಾಗಿದೆ.
4447 ನಗರ ಸ್ಥಳೀಯ ಸಂಸ್ಥೆಗಳು ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ-2023ರಲ್ಲಿ ಭಾಗಿಯಾಗಿದ್ದವು. 12 ಕೋಟಿ ನಾಗರಿಕರು ತಮ್ಮ ಪ್ರತಿಕ್ರಿಯೆ ಸಲ್ಲಿಸಿದ್ದರು. ಇದು ವಿಶ್ವದ ಅತಿದೊಡ್ಡ ಸ್ವಚ್ಛತಾ ಸರ್ವೇಯಾಗಿದೆ ಎಂದು ಸರ್ಕಾರ ಹೇಳುತ್ತದೆ.
ಇಂದೋರ್ ಸತತ ಗೆಲುವೇಕೆ?
ಸತತ 7ನೇ ವರ್ಷವೂ ಇಂದೋರ್ ದೇಶದ ನಂ.1 ಸ್ವಚ್ಛ ನಗರಿಯಾಗಿ ಆಯ್ಕೆಯಾಗಿರುವುದಕ್ಕೆ ಆ ನಗರಪಾಲಿಕೆಯ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.
ತ್ಯಾಜ್ಯ ನಿರ್ವಹಣೆಗೆ ಇಂದೋರ್ ಕೈಗೊಂಡಿರುವ ಪರಿಣಾಮಕಾರಿಯಾದ, ಸುಸ್ಥಿರ ಹಾಗೂ ದೀರ್ಘಕಾಲಿನ ಕ್ರಮಗಳೇ ಇದಕ್ಕೆ ಕಾರಣ ಎಂದು ತಿಳಿಸಿದ್ದಾರೆ. ಏಕ ಬಳಕೆಯ ಪ್ಲಾಸ್ಟಿಕ್‌ಗೆ ನಿಷೇಧ ಹೇರಿದ ಬಳಿಕ ಇಂದೋರ್‌ನಲ್ಲಿ ತ್ಯಾಜ್ಯ ಉತ್ಪಾದನೆ ಪ್ರಮಾಣವೇ ಕಡಿಮೆಯಾಗಿದೆ ಎಂದು ತಿಳಿಸಿದ್ದಾರೆ.
ಸ್ವಚ್ಛ ನಗರಗಳಲ್ಲಿ ಮೈಸೂರಿಗೆ 23ನೇ ಸ್ಥಾನ!
ದೇಶದ ಅತ್ಯಂತ ಸ್ವಚ್ಛ ನಗರಿಗಳ ಪಟ್ಟಿಯಲ್ಲಿ ಮೈಸೂರು ನಗರ 23ನೇ ಸ್ಥಾನ ಪಡೆದುಕೊಂಡಿದ್ದು, ರಾಜ್ಯದಲ್ಲೇ ಸ್ವಚ್ಛ ನಗರಿಗಳಲ್ಲಿ ಮೊದದ ಸ್ಥಾನದಲ್ಲಿದೆ.1 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದುಕೊಂಡಿದೆ.
ಇದೇ ವರ್ಗದಲ್ಲಿ ಹುಬ್ಬಳ್ಳಿ ಧಾರವಾಡ ನಗರವೂ ಸಹ 87ನೇ ಸ್ಥಾನದಲ್ಲಿದ್ದು, ಟಾಪ್ 100ರಲ್ಲಿ ಸ್ಥಾನಪಡೆದುಕೊಂಡ ರಾಜ್ಯದ 2 ನಗರಗಳು ಎನಿಸಿಕೊಂಡಿವೆ. ಉಳಿದಂತೆ 1 ಲಕ್ಷದೊಳಗಿನ ನಗರಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ 194 ಮತ್ತು ಬೆಳಗಾವಿ ಜಿಲ್ಲೆಯ ಬೈಲಹೊಂಗಲ 518ನೇ ಸ್ಥಾನ ಪಡೆದುಕೊಂಡಿದೆ.
15ರಿಂದ 25 ಸಾವಿರ ಜನಸಂಖ್ಯೆ ಹೊಂದಿರುವ ದಕ್ಷಿಣ ವಲಯವಾರು ನಗರಗಳಲ್ಲಿ ಹೊಳಲ್ಕೆರೆ 11ನೇ ಸ್ಥಾನ ಹಾಗೂ ಶಿರಾಳಕೊಪ್ಪ 19ನೇ ಸ್ಥಾನ ಪಡೆದುಕೊಂಡಿವೆ.
ಇನ್ನು 25ರಿಂದ 50 ಸಾವಿರ ಜನಸಂಖ್ಯೆ ಹೊಂದಿರುವ ನಗರಗಳಲ್ಲಿ ಕುಂದಾಪುರ 29ನೇ ಸ್ಥಾನದಲ್ಲಿದೆ. ಹಾಗೆಯೇ 50 ಸಾವಿರದಿಂದ 1 ಲಕ್ಷದವರೆಗಿನ ಜನಸಂಖ್ಯೆಯಲ್ಲಿ ಕಾರವಾರ 13ನೇ ಸ್ಥಾನದಲ್ಲಿದ್ದು, ತಿಪಟೂರು 57 ಮತ್ತು ಶಿರಸಿ 60ನೇ ಸ್ಥಾನದಲ್ಲಿವೆ.