ಅಭಿವೃದ್ಧಿ ರಾಜಕಾರಣಕ್ಕೆ ಯುವಸಮೂಹದಿಂದ ಭಾರೀ ಬೆಂಬಲ
ಮಾಲ್ದಾ: ಭಾರತದ ಜೆನ್-ಝಿಗಳಿಗೆ ಬಿಜೆಪಿಯ ಅಭಿವೃದ್ಧಿ ಮಾದರಿಯ ಮೇಲೆ ಪೂರ್ಣ ವಿಶ್ವಾಸವಿದೆ. ಇದನ್ನು ಕಂಡಮೇಲೆ, ಪಶ್ಚಿಮ ಬಂಗಾಳದಲ್ಲಿ ಪಕ್ಷ ಪೂರ್ಣ ಬಹುಮತ ಪಡೆಯುವುದು ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ, ಇಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಹೇಳಿದ್ದಾರೆ.
ಶನಿವಾರ ಇಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ ಮಾತನಾಡಿದ ಪ್ರಧಾನಿ ಮೋದಿ, ‘ಇತ್ತೀಚೆಗೆ ನಡೆದ ವಿವಿಧ ರಾಜ್ಯಗಳ ಚುನಾವಣೆ ಮತ್ತು ಮಹಾರಾಷ್ಟ್ರ, ಕೇರಳ ಪಾಲಿಕೆಯ ಚುನಾವಣಾ ಫಲಿತಾಂಶವನ್ನು ಪ್ರಸ್ತಾಪಿಸಿ, ಈ ಹಿಂದೆ ನಾವು ದುರ್ಬಲವಾಗಿದ್ದ ಪ್ರದೇಶಗಳಲ್ಲೂ ಇದೀಗ ನಮಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ಪಕ್ಷದ ಅಭಿವೃದ್ಧಿ ಮಾದರಿ ಮತದಾರರ ಅದರಲ್ಲೂ ಯುವಸಮೂಹದ ವಿಶ್ವಾಸಗಳಿಸುವಲ್ಲಿ ಯಶಸ್ವಿಯಾಗಿದೆ’ ಎಂದರು.ಇದೇ ವೇಳೆ ನುಸುಳುಕೋರರಿಗೆ ಪಶ್ಚಿಮ ಬಂಗಾಳದ ಟಿಎಂಸಿ ಸರ್ಕಾರ ಆಶ್ರಯ ನೀಡಿದೆ ಎಂದು ಆರೋಪಿಸಿದ ಪ್ರಧಾನಿ, ‘ಅಂಥವರು ರಾಜ್ಯಕ್ಕೆ ಬಹುದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಹಲವು ಕಡೆಗಳಲ್ಲಿ ಜನಸಂಖ್ಯಾ ಅಸಮತೋಲನವನ್ನು ಸ್ಪಷ್ಟವಾಗಿ ನೋಡಬಹುದಾಗಿದೆ. ಇದೇ ಕಾರಣದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಗಲಭೆಗಳು ನಡೆಯುತ್ತಿವೆ. ಇಂತಹ ನುಸುಳುಕೋರರೊಂದಿಗೆ ಟಿಎಂಸಿ ಕೈಜೋಡಿಸಿದೆ’ ಎಂದರು.
ಜತೆಗೆ, ‘ಮುಂದುವರೆದ ಹಾಗೂ ಶ್ರೀಮಂತ ದೇಶಗಳು ಆರ್ಥಿಕವಾಗಿ ಸಮೃದ್ಧವಾಗಿದ್ದರೂ ನುಸುಳುಕೋರರನ್ನು ಹೊರಹಾಕುತ್ತಿವೆ. ಹೀಗಿರುವಾಗ ಒಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ, ಟಿಎಂಸಿಯೊಂದಿಗಿನ ಅಕ್ರಮ ನುಸುಳುಕೋರರ ಮೈತ್ರಿಯನ್ನು ಮುರಿದು, ಅವರನ್ನೆಲ್ಲಾ ಬಂಗಾಳದಿಂದ ಹೊರಹಾಕುತ್ತೇವೆ’ ಎಂದು ಮೋದಿ ಭರವಸೆ ನೀಡಿದರು. ಇದೇ ವೇಳೆ, ನೆರೆಯ ಬಾಂಗ್ಲಾದಲ್ಲಿ ಉಂಟಾಗಿರುವ ಧರ್ಮಾಧರಿತ ಕಿರುಕುಳದಿಂದ ಬೇಸತ್ತು ಬಂಗಾಳಕ್ಕೆ ಬಂದಿರುವ ಮತುವಾಗಳಿಗೆ ಆಶ್ರಯದ ಆಶ್ವಾಸನೆ ನೀಡಿದ್ದಾರೆ.ಅಭಿವೃದ್ಧಿಗೆ ಅಡ್ಡಗಾಲು:
ಬಡವರಿಗಾಗಿ ಮೀಸಲಿರುವ ಕಲ್ಯಾಣ ಯೋಜನೆಗಳ ಲಾಭ ಅವರಿಗೆ ತಲುಪದಂತೆ ಟಿಎಂಸಿ ತಡೆದಿದೆ ಎಂದಿರುವ ಮೋದಿ, ‘ಭ್ರಷ್ಟ ಟಿಎಂಸಿ ಸರ್ಕಾರ ಹೋಗಿ, ಜನಪರ ಬಿಜೆಪಿ ಅಧಿಕಾರಕ್ಕೇರುವುದರಿಂದಷ್ಟೇ ಇದರ ಪರಿಹಾರ ಸಾಧ್ಯ. ಎಲ್ಲಾ ಬಡ ಬಂಗಾಳಿಗಳಿಗೆ ಸ್ವಂತ ಮನೆ, ಅರ್ಹರಿಗೆ ಉಚಿತ ಪಡಿತರ ಸಿಗಬೇಕು ಮತ್ತು ಕೇಂದ್ರದ ಯೋಜನೆಗಳು ಅವರನ್ನು ತಲುಪಬೇಕು ಎಂಬುದೇ ನನ್ನಾಸೆ’ ಎಂದರು.==
ಮೊದಲ ವಂದೇ ಭಾರತ್ ಸ್ಲೀಪರ್‌ಗೆ ಮೋದಿ ಚಾಲನೆಬಂಗಾಳದ ಮಾಲ್ಡಾ- ಅಸ್ಸಾಂನ ಗುವಾಹಟಿ ನಡುವೆ ಸಂಚಾರ
ಬೆಂಗಳೂರಿನ 3 ರೈಲಿಗೂ ಬಂಗಾಳದಲ್ಲಿ ಮೋದಿ ಚಾಲನೆ
ಮಾಲ್ಡಾ: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ ಶನಿವಾರ ಹಸಿರು ನಿಶಾನೆ ತೋರಿದರು. ಜೊತೆಗೆ, 3250 ಕೋಟಿ ರು. ಮೌಲ್ಯದ ರಸ್ತೆ ಮತ್ತು ರೈಲು ಯೋಜನೆಗಳಿಗೆ ವರ್ಚುವಲ್ ಆಗಿ ಚಾಲನೆ ನೀಡಿದರು. ಇದರಲ್ಲಿ ಬೆಂಗಳೂರಿನ 3 ರೈಲುಗಳು ಸೇರಿವೆ.ಸ್ಲೀಪರ್ ವಿಶೇಷತೆ:16 ಕೋಚ್‌ನ ವಂದೇ ಭಾರತ್ ಸ್ಲೀಪರ್‌ನಲ್ಲಿ ಎಲ್ಲ ಕೋಚ್‌ಗಳು ಹವಾನಿಯಂತ್ರಿತವಾಗಿರಲಿವೆ. ಅವುಗಳಲ್ಲಿ ಆರಾಮದಾಯಕ ಆಸನ, ಸ್ವಯಂಚಾಲಿತ ಬಾಗಿಲು, ಚಲಿಸುವ ವೇಳೆ ಉಂಟಾಗುವ ಆಘಾತ ತಪ್ಪಿಸಲು, ಹೊರಗಿನ ಸದ್ದು ಒಳಗಿರುವವರಿಗೆ ತೊಂದರೆಯುಂಟುಮಾಡದಂತೆ ತಡೆಯಲು ವ್ಯವಸ್ಥೆ, ಕವಚ್ ರಕ್ಷಣೆ, ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಸೋಂಕುನಿವಾರಕ ತಂತ್ರಜ್ಞಾನ ಇರಲಿದೆ. ಈ ರೈಲಲ್ಲಿ ವಿಐಪಿ ಕೋಟಾ, ಸಿಬ್ಬಂದಿ ಪಾಸ್ ಇರದೆ, ಸಾಮಾನ್ಯ ಪ್ರಯಾಣಿಕರಿಗಷ್ಟೇ ಸೀಟು ಸಭ್ಯವಿರುವುದು ವಿಶೇಷ.ಬೆಂಗಳೂರು ರೈಲುಗಳು:
ಪಶ್ಚಿಮ ಬಂಗಾಳದ ಅಲಿಪುರ್ದುವರ್‌ನಿಂದ ಬೆಂಗಳೂರಿನ ಎಸ್‌ಎಂವಿಟಿ ನಿಲ್ದಾಣದ ಮಾರ್ಗದಲ್ಲಿ ಚಲಿಸುವ ಅಮೃತ್ ಭಾರತ್ ಎಕ್ಸ್‌ಪ್ರೆಸ್, ಬಲೂರ್ಘಾಟ್-ಬೆಂಗಳೂರು ಮತ್ತು ರಾಧಿಕಾಪುರ್-ಬೆಂಗಳೂರು ಮೇಲ್ ಎಕ್ಸ್‌ಪ್ರೆಸ್‌ಗೆ ಪ್ರಧಾನಿ ಮೋದಿ ಅವರಿಂದ ಚಾಲನೆ ಸಿಕ್ಕಿದೆ.