ವಾಷಿಂಗ್ಟನ್: 13 ವರ್ಷಕ್ಕಿಂತ ಕಿರಿಯರ ಬಳಕೆಗೆ ಅನುಮತಿಸದ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಇದೀಗ ಹದಿಹರೆಯದವರು ನಕಲಿ ವಯಸ್ಸು ದಾಖಲಿಸಿ ವಯಸ್ಕರ ಖಾತೆಯನ್ನು ಹೊಂದುವುದನ್ನು ಪತ್ತೆ ಮಾಡಲು ಕೃತಕ ಬುದ್ಧಿಮತ್ತೆಯನ್ನು ಬಳಸಲು ಸಿದ್ಧತೆ ನಡೆಸಿದೆ.
ಅಪ್ರಾಪ್ತ ಬಳೆಕೆದಾರರು ಉದ್ದೇಶಪೂರ್ವಕವಾಗಿ ತಮ್ಮ ಸುಳ್ಳು ಜನ್ಮದಿನಾಂಕವನ್ನು ದಾಖಲಿಸಿ ‘ವಯಸ್ಕ’ ಎಂದು ಬಿಂಬಿಸಿಕೊಂಡದ್ದು ಕಂಡುಬಂದಲ್ಲಿ, ಅದನ್ನು ಎಐ ಮೂಲಕ ಪತ್ತೆ ಮಾಡಲಾಗುವುದು ಎಂದು ಇನ್ಸ್‌ಟಾಗ್ರಾಂನ ಮಾತೃಸಂಸ್ಥೆ ಮೆಟಾ ತಿಳಿಸಿದೆ. ಆದರೆ ಇದನ್ನು ಯಾವ ಆಧಾರದಲ್ಲಿ ಪತ್ತೆ ಮಾಡಲಾಗುವುದು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
ಟೀನ್ ಖಾತೆ ಮೇಲಿನ ನಿರ್ಬಂಧಗಳು : ಖಾತೆಯು ಹದಿಹರೆಯದವರಿಗೆ ಸೇರಿದ್ದು ಎಂದು ಕಂಡುಬಂದಲ್ಲಿ, ಅದನ್ನು ಸ್ವಯಂಚಾಲಿತವಾಗಿ ‘ಖಾಸಗಿ’ ಖಾತೆಯನ್ನಾಗಿ ಪರಿವರ್ತಿಸಲಾಗುವುದು. ಅಂತೆಯೇ, ಪರಸ್ಪರ ಹಿಂಬಾಲಿಸುವವರು ಮಾತ್ರ ಸಂದೇಶ ಕಳಿಸಲು ಅನುಮತಿಸಲಾಗುವುದು. ಕ್ರೌರ್ಯ, ಸೌಂದರ್ಯವರ್ಧಕಗಳಿಗೆ ಸಂಬಂಧಿಸಿದ ವಿಷಯಗಳು ಆ ಖಾತೆಯನ್ನು ತಲುಪದಂತೆ ತಡೆಹಿಡಿಯಲಾಗುತ್ತದೆ. ದಿನದಲ್ಲಿ 60 ನಿಮಿಷಗಳಿಗಿಂತ ಅಧಿಕ ಕಾಲ ಟೀನ್ ಖಾತೆಗಳು ಸಕ್ರಿಯವಾಗಿದ್ದಲ್ಲಿ, ನೋಟಿಫಿಕೇಷನ್‌ಗಳ ಮೂಲಕ ಎಚ್ಚರಿಸಲಾಗುವುದು. ಅಂತೆಯೇ, ರಾತ್ರಿ 10 ಗಂಟೆಯಿಂದ ಬೆಳಗ್ಗೆ 7ರ ವರೆಗೆ ಸ್ಲೀಪ್ ಮೋಡ್‌ನಲ್ಲಿರಲಿದ್ದು, ಈ ವೇಳೆ ಸಂದೇಶಗಳಿಗೆ ಸ್ವಯಂಚಾಲಿತ ಪ್ರತಿಕ್ರಿಯೆಗಳನ್ನು ರವಾನಿಸಲಾಗುತ್ತದೆ.
ಮತ್ತೆ 240 ನೌಕರರಿಗೆ ಇನ್ಫೋಸಿಸ್ ಗೇಟ್‌ಪಾಸ್
ನವದೆಹಲಿ: ಫೆಬ್ರವರಿಯಲ್ಲಿ ತನ್ನ 300 ಮೈಸೂರು ಕ್ಯಾಂಪಸ್ ಉದ್ಯೋಗಿಗಳನ್ನು ಏಕಾಏಕಿ ವಜಾಗೊಳಿಸಿದ್ದ ಹೆಸರಾಂತ ಐಟಿ ಕಂಪನಿಯಾದ ಇನ್ಫೋಸಿಸ್ ಇದೀಗ ಮತ್ತೆ ಮೈಸೂರಿನಲ್ಲಿನ 240 ಆರಂಭಿಕ ಹಂತದ ಉದ್ಯೋಗಿಗಳನ್ನು, ಆಂತರಿಕ ಮೌಲ್ಯಮಾಪನ ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ಕಾರಣ ನೀಡಿ ವಜಾಗೊಳಿಸಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ಈ ಬಗ್ಗೆ ಟ್ರೈನಿಗಳಿಗೆ ಕಳಿಸಲಾದ ಇ-ಮೇಲ್‌ನಲ್ಲಿ, ಒಂದು ತಿಂಗಳ ಸಂಬಳ ಪಾವತಿ, ಬೇರೆಲ್ಲಾದರೂ ಉದ್ಯೋಗಾವಕಾಶಗಳನ್ನು ಅರಸಲು ಸಹಾಯವಾಗುವಂತೆ ಎನ್‌ಐಐಟಿ ಮತ್ತು ಅಪ್‌ಗ್ರೇಡ್ ಜತೆಗೂಡಿ ತರಬೇತಿ ನೀಡಲಾಗುವುದು. 1 ತಿಂಗಳು ಮೈಸೂರಿನ ತರಬೇತಿ ಕೇಂದ್ರದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಕಲ್ಪಿಸಲಾಗುವುದು ಹಾಗೂ ಬೆಂಗಳೂರು ಅಥವಾ ಹುಟ್ಟೂರಿಗೆ ಮರಳಲು ಭತ್ಯೆಗಳಂತಹ ಸೌಲಭ್ಯಗಳನ್ನು ಕಂಪನಿಯ ವತಿಯಿಂದ ಒದಗಿಸಲಾಗುವುದು ಎಂದು ಭರವಸೆ ನೀಡಿಲಾಗಿದೆ.
ಪೋಸ್ಟ್ ಲೈಕ್ ಮಾಡಿದರೆ ಅಪರಾಧವಲ್ಲ: ಹೈಕೋರ್ಟ್
ಪ್ರಯಾಗ್‌ರಾಜ್: ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ಪೋಸ್ಟ್‌ಗೆ ಲೈಕ್ (ಮೆಚ್ಚುಗೆ) ಕೊಟ್ಟಲ್ಲಿ, ಅದು ಆ ಪೋಸ್ಟ್ ಅನ್ನು ಪ್ರಕಟಿಸಿದಂತೆ ಆಗುವುದಿಲ್ಲ ಹಾಗೂ ಅಶ್ಲೀಲ ವಿಷಯವನ್ನು ಹಂಚಿಕೊಂಡಿದ್ದಕ್ಕಾಗಿ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ನೀಡಲಾಗುವ ಶಿಕ್ಷೆಯ ವ್ಯಾಪ್ತಿಗೆ ಬರುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ಫೇಸ್ಬುಕ್ ಪೋಸ್ಟ್ ಒಂದಕ್ಕೆ ಲೈಕ್ ನೀಡಿದ ಕಾರಣ ಇಮ್ರಾನ್ ಖಾನ್ ಎಂಬಾತ ಆರೋಪಿಯಾಗಿರುವ ಪ್ರಕರಣದ ವಿಚಾರಣೆ ವೇಳೆ ನ್ಯಾ. ಸೌರಭ್ ಶ್ರೀವಾತ್ಸವ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಗ್ರಾ ಜಿಲ್ಲಾಧಿಕಾರಿಗಳ ಕಚೇರಿಯೆದುರು ನಡೆಯಲಿದ್ದ ಪ್ರತಿಭಟನಾ ಸಭೆಯನ್ನು ಪ್ರಸ್ತಾವಿಸಿ ಚೌಧುರಿ ಫರ್ಹಾನ್ ಉಸ್ಮಾನ್ ಎಂಬಾತ ಫೇಸ್‌ಬುಕ್‌ನಲ್ಲಿ ಮಾಡಿದ್ದ ಪೋಸ್ಟ್‌ಗೆ ಇಮ್ರಾನ್ ಖಾನ್ ಲೈಕ್ ಒತ್ತಿದ್ದ. ಪ್ರಚೋದನಕಾರಿಯಾಗಿದ್ದ ಆ ಪೋಸ್ಟ್ 600-700 ಮುಸ್ಲಿಮರು ಜಮಾವಣೆಯಾಗಿ, ಅನುಮತಿ ಪಡೆಯದೆ ಮೆರವಣಿಗೆ ನಡೆಸಲು ಕಾರಣವಾಯಿತು ಎಂದು ಇಮ್ರಾನ್ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯಲ್ಲದೆ, ಗಲಭೆ ಹಾಗೂ ಕಾನೂನುಬಾಹಿರ ಜಮಾವಣೆಗೆ ಸಂಬಂಧಿಸಿದ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿತ್ತು.ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ‘ಪ್ರಶ್ನಾರ್ಹವಾದ ಪೋಸ್ಟ್‌ಗೆ ಇಮ್ರಾನ್ ಲೈಕ್ ಮಾತ್ರ ಕೊಟ್ಟಿದ್ದಾರೆ. ಆದ್ದರಿಂದ ಅದು ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 67ರ ಅಡಿ ಅಪರಾಧವೆಂಬುದಾಗಿ ಪರಿಗಣಿಸಲ್ಪಡುವುದಿಲ್ಲ’ ಎಂದಿದದೆ.
ಬಂಗಾಳ ರಾಜ್ಯಪಾಲ ಬೋಸ್‌ಗೆ ಹೃದಯ ಸಮಸ್ಯೆ: ಆಸ್ಪತ್ರೆಗೆ ದಾಖಲು
ಕೋಲ್ಕತಾ: ಪಶ್ಚಿಮ ಬಂಗಾಳದ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರ ಎದೆಯಲ್ಲಿ ಬ್ಲಾಕೇಜ್‌ಗಳು ಕಂಡುಬಂದಿದ್ದು, ಸೋಮವಾರ ಇಲ್ಲಿನ ಕಮಾಂಡ್ ಆಸ್ಪತ್ರೆಗೆ ದಾಖಲಾಗಿದ್ದಾರೆ.ಬೋಸ್ ತಮ್ಮ ಎಂದಿನಂತೆ ಆರೋಗ್ಯ ತಪಾಸಣೆಗೆ ಕಮಾಂಡ್ ಆಸ್ಪತ್ರೆಗೆ ಬಂದಿದ್ದರು. ತಪಾಸಣೆ ವೇಳೆ ಬೋಸ್ ಎದೆಯಲ್ಲಿ ಬ್ಲಾಕೇಜ್ ಕಂಡುಬಂದಿದೆ. ಪರಿಣಾಮ ವೈದ್ಯರು ಸಮಯ ವ್ಯರ್ಥ ಮಾಡದೆ ಬೋಸ್ ಅವರನ್ನು ದಾಖಲಿಸಿದ್ದಾರೆ.
ಬೋಸ್ ಆಸ್ಪತ್ರೆಗೆ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ, ರಾಜ್ಯಪಾಲರ ಆರೋಗ್ಯವನ್ನು ವಿಚಾರಿಸಿದ್ದಾರೆ. ಮತ್ತೆ ಮಂಗಳವಾರ ಭೇಟಿ ನೀಡಿವುದಾಗಿ ಮಮತಾ ಹೇಳಿದ್ದಾರೆ.ಬೋಸ್ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳೆಯ ಕುತ್ತಿಗೆ ಸೀಳಿ, ಪಾದ ಕಡಿದು 2 ಕೆಜಿ ಗೆಜ್ಜೆ ಕಳವು
ಸವಾಯಿ ಮಾಧೋಪುರ್ (ರಾಜಸ್ಥಾನ): ಇಲ್ಲಿನ ಜಾಹಿರಾ ಎಂಬ ಗ್ರಾಮದಲ್ಲಿ ಮಹಿಳೆಯೊಬ್ಬಳನ್ನು ಬರ್ಬರವಾಗಿ ಕೊಲೆ ಮಾಡಿ, ಪಾದವನ್ನು ಕತ್ತರಿಸಿ, 2 ಕೆ.ಜಿ. ತೂಕದ ಬೆಳ್ಳೆ ಗೆಜ್ಜೆಯನ್ನು ಕದ್ದೊಯ್ದ ಭೀಕರ ಘಟನೆ ನಡೆದಿದೆ.ಮೃತಳನ್ನು ಊರ್ಮಿಳಾ ಮೀನಾ (50) ಎಂದು ಗುರುತಿಸಲಾಗಿದೆ. ಭಾನುವಾರ ಕಟ್ಟಿಗೆ ಕಡಿಯಲು ತೆರಳಿದ್ದಾಕೆ ಮರಳದಾಗ ಗಾಬರಿಗೊಂಡ ಮನೆಯವರು ಮೀನಾಗಾಗಿ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಆಕೆಯ ದೇಹದ ತುಂಡುಗಳು ಹೊಲದಲ್ಲಿ ಪತ್ತೆಯಾಗಿದೆ. ಆಕೆಯ ಪಾದಗಳು ಸಮೀಪದ ನೀರಿನ ಟ್ಯಾಂಕ್‌ನಲ್ಲಿ ಸಿಕ್ಕಿದ್ದು, ಕಾಲ್ಗೆಜ್ಜೆಗಳು ಕಾಣೆಯಾಗಿದ್ದವು.ಕೂಡಲೇ ಬಮನ್ವಾಸ್ ಪೊಲೀಸ್ ಠಾಣೆಗೆ ದೂರು ನೀಡಿದ ಗ್ರಾಮಸ್ಥರು, ಮೀನಾಳ ಮೃತದೇಹವನ್ನು ನಡುರಸ್ತೆಯಲ್ಲಿಟ್ಟು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸಿದ್ದಾರೆ.