ಮಠಾಧೀಶರಿಗೂ, ಮಾಫಿಯಾಗೂ ವ್ಯತ್ಯಾಸವಿಲ್ಲ: ಎಸ್ಪಿ ನೇತಾರ ಅಖಿಲೇಶ್‌ ಯಾದವ್‌ ಮಾತು ವಿವಾದ

KannadaprabhaNewsNetwork |  
Published : Sep 14, 2024, 01:57 AM ISTUpdated : Sep 14, 2024, 06:43 AM IST
ಅಖಿಲೇಶ್‌ ಯಾದವ್‌ | Kannada Prabha

ಸಾರಾಂಶ

ಎಸ್ಪಿ ನಾಯಕ ಅಖಿಲೇಶ್ ಯಾದವ್ ಅವರ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಟಿಸಿಎಸ್ ನೌಕರರಿಗೆ ತೆರಿಗೆ ನೋಟಿಸ್ ನೀಡಲಾಗಿದೆ ಮತ್ತು ಕಠುವಾದಲ್ಲಿ ಎನ್‌ಕೌಂಟರ್ ನಡೆದಿದೆ.

ಲಖನೌ: ‘ಮಠಾಧೀಶರಿಗೂ ಮಾಫಿಯಾಗೂ ವ್ಯತ್ಯಾಸವಿಲ್ಲ’ ಎಂದು ಎಸ್ಪಿ ನೇತಾರ ಅಖಿಲೇಶ್‌ ಯಾದವ್‌ ಆಡಿದ ಮಾತು ವಿವಾದಕ್ಕೀಡಾಗಿದೆ. ‘ಅವರ ಈ ಹೇಳಿಕೆ ಸನಾತನ ಧರ್ಮಕ್ಕೆ ಮಾಡಿದ ಅವಮಾನ’ ಎಂದು ಬಿಜೆಪಿ ಕಿಡಿಕಾರಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಖಿಲೇಶ್ ಇತ್ತೀಚೆಗೆ ಸುಲ್ತಾನ್‌ಪುರದಲ್ಲಿ ನಡೆದ ಮಂಗೇಶ್‌ ಯಾದವ್ ಎಂಬಾತನ ಎನ್ಕೌಂಟರ್‌ ವಿಷಯ ಪ್ರಸ್ತಾಪಿಸಿದರು. ‘ಬಿಜೆಪಿ ಸರ್ಕಾರದ ಅವಧಿಯಲ್ಲಿ ನಕಲಿ ಎನ್‌ಕೌಂಟರ್‌ ನಡೆಯುತ್ತಿದೆ. ಉತ್ತರ ಪ್ರದೇಶವು ನಕಲಿ ಎನ್‌ಕೌಂಟರ್‌ ರಾಜಧಾನಿ ಎನ್ನಿಸಿಕೊಂಡಿದೆ. ಇಲ್ಲಿ ಮಠಾಧೀಶರಿಗೂ ಮಾಫಿಯಾಗೂ ವ್ಯತ್ಯಾಸ ಇಲ್ಲವಾಗಿದೆ’ ಎಂದು ಹೇಳಿ ಸಂತನಾದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಪರೋಕ್ಷವಾಗಿ ಚುಚ್ಚಿದರು.

ಇದೇ ವೇಳೆ, ಬಿಜೆಪಿ ಜತೆಗೆ ಮಠಾಧೀಶರೂ ಅಖಿಲೇಶ್ ಹೇಳಿಕೆಯನ್ನು ಖಂಡಿಸಿದ್ದಾರೆ.

==

ಅತ್ಯಾಚಾರ ಪ್ರಕರಣ: ವಿಂಗ್ ಕಮಾಂಡರ್‌ಗೆ ನಿರೀಕ್ಷಣಾ ಜಾಮೀನು

ಶ್ರೀನಗರ: ಸಹೋದ್ಯೋಗಿ ಅಧಿಕಾರಿ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ವಾಯುಪಡೆಯ ವಿಂಗ್‌ ಕಮಾಂಡರ್‌ಗೆ ಶುಕ್ರವಾರ ಜಮ್ಮು-ಕಾಶ್ಮೀರದ ಹೈಕೋರ್ಟ್‌ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅರ್ಜಿ ವಿಚಾರಣೆಯನ್ನು ನಡೆಸಿದ ನ್ಯಾಯಾಲಯದ ಏಕಸದಸ್ಯ ಪೀಠ, ವಿಂಗ್ ಕಮಾಂಡರ್ ಅವರ ಬಂಧನವು ಅವರ ಘನತೆಗೆ ಹಾಗೂ ವೃತ್ತಿಗೆ ಧಕ್ಕೆ ತರುತ್ತದೆ ಎಂದು ಹೇಳಿ ಜಾಮೀನು ನೀಡಿದೆ.ಈ ಪ್ರಕರಣದ ಬಗ್ಗೆ ತನಿಖೆ ಮುಂದುವರಿಸಲು ನ್ಯಾಯಾಲಯ ಅನುಮತಿ ನೀಡಿದೆ. ಆದರೆ ತನ್ನ ಅನುಮತಿಯಿಲ್ಲದೆ ಆರೋಪಪಟ್ಟಿ ಸಲ್ಲಿಸದಂತೆ ಪೊಲೀಸರಿಗೆ ಆದೇಶಿಸಿದೆ.

ವಿಂಗ್‌ ಕಮಾಂಡರ್‌ ಒಬ್ಬರು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ವಾಯುಪಡೆಯ ಫ್ಲೈಯಿಂಗ್‌ ಆಫೀಸರ್‌ ದರ್ಜೆಯ ಮಹಿಳಾ ಅಧಿಕಾರಿಯೊಬ್ಬರು ಪೊಲೀಸರಿಗೆ ದೂರು ಸಲ್ಲಿಸಿದ್ದರು.

==

40 ಸಾವಿರ ಟಿಸಿಎಸ್‌ ನೌಕರರಿಗೆ 1 ಲಕ್ಷ ರು.ವರೆಗೆ ತೆರಿಗೆ ನೋಟಿಸ್‌

ನವದೆಹಲಿ: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್‌ನ 40 ಸಾವಿರಕ್ಕೂ ಹೆಚ್ಚು ಸಿಬ್ಬಂದಿಗಳಿಗೆ ಆದಾಯ ತೆರಿಗೆ ಇಲಾಖೆಯಿಂದ 50 ಸಾವಿರ ರು.ನಿಂದ 1 ಲಕ್ಷ ರು.ವರೆಗೆ ತೆರಿಗೆ ಪಾವತಿ ಮಾಡುವಂತೆ ನೋಟಿಸ್‌ ನೀಡಲಾಗಿದೆ. ಇದು ಸಿಬ್ಬಂದಿಗಳಿಗೆ ಆತಂಕ ಉಂಟುಮಾಡಿದೆ. ಟ್ಯಾಕ್ಸ್‌ ಡಿಡಕ್ಟಡ್‌ ಅಟ್‌ ಸೋರ್ಸ್‌ (ಟಿಡಿಎಸ್‌) ಕ್ಲೇಮ್‌ ಸಲ್ಲಿಕೆ ವೇಳೆ ಆದ ಗೊಂದಲದಿಂದ ಇಂಥ ನೋಟಿಸ್‌ ಜಾರಿಯಾಗಿದೆ ಎನ್ನಲಾಗಿದೆ.ಸೆ.9ರಂದು ಟಿಸಿಎಸ್‌ ಉದ್ಯೋಗಿಗಳಿಗೆ ರವಾನಿಸಲಾದ ನೋಟಿಸ್‌ನಲ್ಲಿ, ‘2024ನೇ ಹಣಕಾಸು ವರ್ಷದ ಮಾರ್ಚ್ ತಿಂಗಳಲ್ಲಿ ಅರ್ಜಿದಾರರು ಪೂರ್ಣ ಪ್ರಮಾಣದ ಹಣ ಪಾವತಿ ಮಾಡಿದ ದಾಖಲೆಗಳು ಇಲ್ಲ’ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ, ತಾಂತ್ರಿ ಸಮಸ್ಯೆ ಪರಿಣಾಮ ಆದಾಯ ತೆರಿಗೆ ಪೋರ್ಟಲ್‌ನಲ್ಲಿ ಟಿಡಿಎಸ್‌ ಕ್ಲೇಮು ಸರಿಯಾಗಿ ಆಗಿಲ್ಲ. ಹೀಗಾಗಿ ತೆರಿಗೆ ಪಾವತಿಗೆ ನೋಟಿಸ್‌ ರವಾನೆಯಾಗಿದೆ ಎನ್ನಲಾಗಿದೆ.

ಈ ನಡುವೆ ಮುಂದಿನ ಸೂಚನೆವರೆಗೂ ತೆರಿಗೆ ಪಾವತಿ ಮಾಡದಂತೆ ಟಿಸಿಎಸ್‌ ತನ್ನ ಉದ್ಯೋಗಿಗಳಿಗೆ ಸೂಚಿಸಿದೆ. ಮತ್ತೊಂದೆಡೆ ಈ ಗೊಂದಲದ ಕುರಿತು ಟಿಸಿಎಸ್‌, ಆದಾಯ ತೆರಿಗೆ ಇಲಾಖೆ ಗಮನ ಸೆಳೆದಿದೆ.

==

ಕಠುವಾ ಎನ್‌ಕೌಂಟರ್: ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಜಮ್ಮು- ಕಾಶ್ಮೀರದ ಕಿಶ್ತ್ವಾರ್‌ನಲ್ಲಿ ಉಗ್ರರ ಜತೆಗಿನ ಭೀಕರ ಗುಂಡಿನ ಕಾಳಗದಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಇದೇ ವೇಳೆ, ಕಠುವಾದಲ್ಲಿ ನಡೆದ ಪ್ರತ್ಯೇಕ ಎನ್‌ಕೌಂಟರ್‌ನಲ್ಲಿ ರೈಸಿಂಗ್ ಸ್ಟಾರ್ ಕೋರ್‌ ಪಡೆಗಳು ಇಬ್ಬರು ಭಯೋತ್ಪಾದಕರನ್ನು ಹೊಡೆದುರುಳಿಸಿವೆ.

==

ಅಕ್ರಮ ಮಸೀದಿ: ಶಿಮ್ಲಾ ಬಳಿಕ ಮಂಡಿಯಲ್ಲೂ ಪ್ರತಿಭಟನೆ

ಮಂಡಿ/ಶಿಮ್ಲಾ: ಶಿಮ್ಲಾ ಬಳಿಕ ಹಿಮಾಚಲ ಪ್ರದೇಶದ ಮಂಡಿಯಲ್ಲಿ ಕೂಡ ಅಕ್ರಮ ಮಸೀದಿ ವಿರುದ್ಧ ಪ್ರತಿಭಟನೆ ಆರಂಭವಾಗಿದೆ. ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿರುವ ಮಸೀದಿ ತೆರವು ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನಾಕಾರರ ಚದುರಿಸಲು ಪೊಲೀಸರು ಜಲಫಿರಂಗಿ ಬಳಸಿದ್ದಾರೆ.30 ದಿನಗಳೊಳಗಾಗಿ ಅತಿಕ್ರಮಿತ ಪ್ರದೇಶ ತೆರವು ಮಾಡಲು ಮಂಡಿ ಮಹಾನಗರ ಪಾಲಿಕೆ. ಮಸೀದಿ ಆಡಳಿತ ಸಮಿತಿಗೆ ನೋಟಿಸ್‌ ನೀಡಿದೆ. ಇದರ ನಡುವ ‘ಜೈ ಶ್ರೀರಾಂ’ಎಂದು ಕೂಗುತ್ತ ಧರಣಿ ಪ್ರಾರಂಭಿಸಿದ್ದ ಪ್ರತಿಭಟನಾಕಾರರು ಮಸೀದಿಯತ್ತ ಮುಂದುವರೆಯಲು ಯತ್ನಿಸಿದಾಗ ಜಲ ಫಿರಂಗಿ ಬಳಸಿ ಪರಿಸ್ಥಿತಿ ನಿಯಂತ್ರಿಸಲಾಗಿದೆ. ಜೊತೆಗೆ ಪೊಲೀಸ್‌ ಭದ್ರತೆಯನ್ನೂ ಹೆಚ್ಚಿಸಲಾಗಿದ್ದು, ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್ ಸುಖು ಶಾಂತಿ ಕಾಪಾಡುವಂತೆ ಜನರಲ್ಲಿ ಮನವಿ ಮಾಡಿದ್ದಾರೆ.

ಗುರುವಾರ ಮಸೀದಿಯ ಒಂದು ಅಕ್ರಮ ಭಾಗವನ್ನು ಮುಸ್ಲಿಮರೇ ಧ್ವಂಸಗೊಳಿಸಿದ್ದರು.

==

ಮಸೀದಿ ಅಕ್ರಮ ಭಾಗ ನಾವೇ ತೆರವು ಮಾಡ್ತೇವೆ: ಮುಸ್ಲಿಂ ಸಮಿತಿ

ಶಿಮ್ಲಾ: ವಿವಾದಕ್ಕೆ ಕಾರಣವಾಗಿರುವ ಶಿಮ್ಲಾ ಸಂಜೌಲಿ ಮಸೀದಿಯ ಅಕ್ರಮ ಭಾಗವನ್ನುತಾವೇ ತೆರವು ಮಾಡಲು ಅನುಮತಿ ನೀಡಬೇಕು ಎಂದು ಮುಸ್ಲಿಂ ಸಮುದಾಯದ ಸಮಿತಿಯೊಂದು ಶಿಮ್ಲಾ ಮಹಾನಗರ ಪಾಲಿಕೆಗೆ ಮನವಿ ಸಲ್ಲಿಸಿದ್ದಾರೆ.‘ಮಸೀದಿ ನಿರ್ಮಾಣಕ್ಕೆ ಸರ್ಕಾರಿ ಭೂಮಿ ಅತಿಕ್ರಮಿಸಲಾಗಿದೆ. ಅದನ್ನು ಧ್ವಂಸ ಮಾಡಿ’ ಎಂದು ಸ್ಥಳೀಯರು ಮತ್ತು ಹಿಂದೂ ಸಂಘಟನೆಗಳು ಪ್ರತಿಭಟನೆಗೆ ಇಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

‘ಮಸೀದಿಯ ಕೆಲ ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಅನ್ನಿಸಿದಲ್ಲಿ ಅದನ್ನು ಸೀಲ್‌ ಮಾಡಲು ಅಥವಾ ಒಡೆಯಲು ನಮ್ಮ ಸಮುದಾಯಕ್ಕೆ ಅನುವು ಮಾಡಬೇಕು. ಶಾಂತಿ ಹಾಗೂ ಭ್ರಾತೃತ್ವ ನೆಲೆಸುವುದು ನಮಗೆ ಮುಖ್ಯ’ ಎಂದು ಸಂಜೌಲಿ ಮಸೀದಿಯ ಮುಖ್ಯಸ್ಥ ಶೆಹಜಾದಾ ಹೇಳಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕೇಂದ್ರ ಸಚಿವ ಚೌಹಾಣ್‌ ಐಎಸ್‌ಐ ಟಾರ್ಗೆಟ್‌: ಭದ್ರತೆ ಹೆಚ್ಚಳ
ಆನಂದದ ಕ್ಷಣ ದುರಂತದ ಕ್ಷಣವಾಗಿ ಬದಲು!