ಅನಾಮಿಕ ವ್ಯಕ್ತಿಯೊಬ್ಬನ ದಾಳಿಗೊಳಗಾದ ಸೈಫ್‌ ಈಗ ಸೇಫ್‌ : 2 ಸಾಮಾನ್ಯ, 2 ಮಧ್ಯಮ, 2 ಆಳವಾದ ಇರಿತ

KannadaprabhaNewsNetwork |  
Published : Jan 17, 2025, 12:48 AM ISTUpdated : Jan 17, 2025, 04:46 AM IST
ಬಾಂದ್ರಾ | Kannada Prabha

ಸಾರಾಂಶ

ಅನಾಮಿಕ ವ್ಯಕ್ತಿಯೊಬ್ಬ ನಡೆಸಿದ ಚೂರಿ ಇರಿತದಿಂದ ನಟ ಸೈಫ್ ಅಲಿಖಾನ್‌ಗೆ ಒಟ್ಟು 6 ಕಡೆ ಗಾಯಗಳಾಗಿದೆ. ಈ ಪೈಕಿ 2 ಸಾಮಾನ್ಯ, 2 ಮಧ್ಯಮ, 2 ಆಳವಾದ ಇರಿತಗಳಾಗಿದೆ.

ಮುಂಬೈ: ಅನಾಮಿಕ ವ್ಯಕ್ತಿಯೊಬ್ಬ ನಡೆಸಿದ ಚೂರಿ ಇರಿತದಿಂದ ನಟ ಸೈಫ್ ಅಲಿಖಾನ್‌ಗೆ ಒಟ್ಟು 6 ಕಡೆ ಗಾಯಗಳಾಗಿದೆ. ಈ ಪೈಕಿ 2 ಸಾಮಾನ್ಯ, 2 ಮಧ್ಯಮ, 2 ಆಳವಾದ ಇರಿತಗಳಾಗಿದೆ.

- ಬಾಂದ್ರಾದ ಸತ್‌ಗುರು ಶರಣ್‌ ಕಟ್ಟಡದ 11ನೇ ಮಹಡಿಯಲ್ಲಿ ಪತ್ನಿ, ಮಕ್ಕಳ ಜೊತೆ ಸೈಫ್‌ ವಾಸ. ಕಳ್ಳತನ ಉದ್ದೇಶದಿಂದ ಆರೋಪಿಯು ಪಕ್ಕದ ಕಟ್ಟಡದ ಕಾಂಪೌಂಡ್‌ ಪ್ರವೇಶಿಸಿದ್ದು, ಅಲ್ಲಿಂದ ಗೋಡೆ ಹತ್ತಿ ತಡರಾತ್ರಿ ಸೈಫ್‌ ಆಲಿಖಾನ್‌ ಅವರಿದ್ದ ಕಟ್ಟಡದ ಕಾಂಪೌಂಡ್‌ಗೆ ಜಿಗಿದಿದ್ದ.

- ಬಳಿಕ ಆರೋಪಿ ಕಟ್ಟಡದ ಹಿಂಭಾಗದ ಮೆಟ್ಟಿಲುಗಳ ಮೂಲಕ ನಟ ವಾಸಿಸುತ್ತಿದ್ದ ಮನೆಗೆ ಪ್ರವೇಶಿಸಿದ್ದಾನೆ. ಮೊದಲಿಗೆ ಆರೋಪಿಯನ್ನು ಮನೆಯ ಕೆಲಸದಾಳುಗಳೇ ಕರೆಸಿದ್ದಿರಬಹುದು ಎಂದು ಹೇಳಲಾಗಿದ್ದರೂ ಸಿ.ಸಿ.ಟೀವಿ ದೃಶ್ಯಾವಳಿ ಪರಿಶೀಲಿಸಿದ ಬಳಿಕ ಆತ ತುರ್ತು ನಿರ್ಗಮನ ದ್ವಾರದ ಮೂಲಕ ಪ್ರವೇಶಿಸಿದ್ದ ಎನ್ನುವುದು ಖಚಿತವಾಗಿದೆ.

- ರಾತ್ರಿ 2 ಗಂಟೆ ವೇಳೆಗೆ ಶೌಚಾಲಯದ ಬಳಿ ಸದ್ದು ಕೇಳಿಬಂದಿದೆ. ಮೊದಲಿಗೆ ಕರೀನಾ ಬಂದಿರಬಹುದು ಎಂದು ಸೈಫ್‌ ಪುತ್ರ ಜೆಹಾಂಗೀರ್‌ ಆರೈಕೆ ಇರುವ ಎಲಿಯಮ್ಮ ಅಂದಾಜಿಸಿದ್ದಾರೆ. ಕೆಲ ಹೊತ್ತಿನ ಬಳಿಕ ಮತ್ತೆ ಸದ್ದಾದಾಗ ಎದ್ದು ನೋಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ಬಾತ್‌ರೂಂನಿಂದ ಜೆಹಾಂಗೀರ್‌ ಇರುವ ಕೊಠಡಿ ಕಡೆಗೆ ತೆರಳಿದ್ದು ಕಂಡುಬಂದಿದೆ.- ಈ ವೇಳೆ ನೀನ್ಯಾರು ಎಂದು ಪ್ರಶ್ನಿಸಿದಾಗ ಜೋರಾಗಿ ಕೂಗದಂತೆ ಎಚ್ಚರಿಸಿದ್ದಾನೆ. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದು 1 ಕೋಟಿ ಹಣ ನೀಡುವಂತೆ ಆರೋಪಿ ಬೇಡಿಕೆ ಇಟ್ಟಿದ್ದಾನೆ. ಅಪಾಯ ಅರಿತ ಆಕೆ ಜೋರಾಗಿ ಕೂಗಿದ್ದಾಳೆ. ಈ ವೇಳೆ ಆರೋಪಿ ಆಕೆಯ ಕೈಗೂ ಇರಿದಿದ್ದಾನೆ.

- ಈ ನಡುವೆ ಕಿರುಚಿದ ಸದ್ದು ಕೇಳಿ ಸೈಫ್‌, ಕರೀನಾ ಹಾಗೂ ಮನೆಯ ಭದ್ರತಾ ಸಿಬ್ಬಂದಿ ಎದ್ದುಬಂದಿದ್ದಾರೆ. ಈ ವೇಳೆ ಆರೋಪಿ ಸೈಫ್‌ ಅವರಿಗೆ 6 ಬಾರಿ ಇರಿದು ಪರಾರಿಯಾಗಿದ್ದಾನೆ.- ಇನ್ನೊಂದೆಡೆ ದಾಳಿಕೋರನ ಇರಿತದಿಂದಾಗಿ ಚಾಕು ಸೈಫ್‌ ದೇಹದಲ್ಲೇ ಸಿಕ್ಕಿಹಾಕಿಕೊಂಡು ರಕ್ತಸ್ರಾವವಾಗಿದೆ. ಕೂಡಲೇ ಅವರ ಪುತ್ರ ಇಬ್ರಾಹಿಂ, ತಂದೆಯನ್ನು ಆಟೋದಲ್ಲಿ ಕೂರಿಸಿ ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬೆಳಗ್ಗೆ 10 ಗಂಟೆ ವೇಳೆಗೆ ಸೈಫ್‌ಗೆ ಶಸ್ತ್ರಚಿಕಿತ್ಸೆ ನಡೆಸುವ ಮೂಲಕ ಅಪಾಯವನ್ನು ದೂರ ಮಾಡಲಾಗಿದೆ.- ದಾಳಿಯಲ್ಲಿ ಸೈಫ್‌ ಎಡಗೈ, ಕುತ್ತಿಗೆ ಭಾಗಕ್ಕೂ ಚಾಕು ಇರಿತದಿಂದ ಗಂಭೀರ ಗಾಯವಾಗಿದ್ದು, ಪ್ಲಾಸ್ಟಿಕ್‌ ಸರ್ಜರಿ ತಂಡವು ಅದನ್ನು ಸರಿಪಡಿಸಿದೆ ಎಂದು ಲೀಲಾವತಿ ಆಸ್ಪತ್ರೆಯ ವೈದ್ಯ ನಿತಿನ್‌ ದಾಂಗೆ ಅವರು ತಿಳಿಸಿದ್ದಾರೆ. ಘಟನೆಯಲ್ಲಿ ಕೆಲಸದಾಕೆಯ ಕೈಗಳಿಗೂ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

- ಘಟನೆ ಹಿಂದೆ ಕ್ರಿಮಿನಲ್‌ಗಳ‍ ಕೈವಾಡದ ಕುರಿತು ಸಂದೇಶ ವ್ಯಕ್ತವಾಗಿತ್ತಾದರೂ ಪ್ರಾಥಮಿಕ ತನಿಖೆಯ ಬಳಿಕ ಪೊಲೀಸರು ಅಂಥ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ. ಕಳ್ಳತನದ ಉದ್ದೇಶದಿಂದ ಆತ ಸೈಫ್‌ ಆಲಿ ಖಾನ್‌ ಮನೆಗೆ ನುಗ್ಗಿದ್ದ ಎಂದು ಹೇಳಿದ್ದಾರೆ. ಆರೋಪಿಗಳ ಬಂಧನಕ್ಕೆ ಪೊಲೀಸರು 20 ಮಂದಿ ತಂಡವನ್ನು ರಚಿಸಿದ್ದಾರೆ.

1 ಕೋಟಿ ರು.ಗೆ ಡಿಮ್ಯಾಂಡ್‌ ಮಾಡಿದ್ದ ಆರೋಪಿ

ಸೈಫ್‌ ಅಲಿಖಾನ್‌ಗೆ ಚಾಕು ಇರಿದ ವ್ಯಕ್ತಿ, ಅದಕ್ಕೂ ಮೊದಲು ಮಕ್ಕಳ ಆರೈಕೆಗೆ ಇರುವ ಸಿಬ್ಬಂದಿಯಿಂದ 1 ಕೋಟಿ ರು. ಒತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದ ಎನ್ನುವ ವಿಷಯ ಬೆಳಕಿಗೆ ಬಂದಿದೆ. ವೇಳೆ ಸೈಫ್‌- ಕರೀನಾರ ಪುತ್ರ ಜೆಹಾಂಗೀರ್‌ ಅರೈಕೆಗೆ ಇರುವ ಎಲಿಯಮ್ಮ ಪೊಲೀಸ್‌ ವಿಚಾರಣೆ ಈ ಮಾಹಿತಿ ನೀಡಿದ್ದಾರೆ. ಮೊದಲಿಗೆ ಎಲಿಯಮ್ಮಗೆ ಆರೋಪಿ ಎದುರಾಗಿದ್ದ. ಈ ವೇಳೆ ಆತನನ್ನು ಎಲಿಯಮ್ಮ ಪ್ರಶ್ನಿಸಿದಾಗ ಆತ ಜೋರಾಗಿ ಕೂಗದಂತೆ ಮತ್ತು 1 ಕೋಟಿ ರು. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಅಪಾಯ ಅರಿತು ಆಕೆ ಕೂಗಿಕೊಂಡಾಗ ಆಕೆಯ ಮೇಲೂ ಚೂರಿಯಿಂದ ದಾಳಿ ನಡೆಸಿದ್ದಾನೆ.

2 ಸಾಮಾನ್ಯ, 2 ಮಧ್ಯಮ, 2 ಆಳವಾದ ಇರಿತ

ಮುಂಬೈ: ಅನಾಮಿಕ ವ್ಯಕ್ತಿಯೊಬ್ಬ ನಡೆಸಿದ ಚೂರಿ ಇರಿತದಿಂದ ನಟ ಸೈಫ್ ಅಲಿಖಾನ್‌ಗೆ ಒಟ್ಟು 6 ಕಡೆ ಗಾಯಗಳಾಗಿದೆ. ಈ ಪೈಕಿ 2 ಸಾಮಾನ್ಯ, 2 ಮಧ್ಯಮ, 2 ಆಳವಾದ ಇರಿತಗಳಾಗಿದೆ. ಸದ್ಯ ಅವರಿಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿ, 2.5 ಇಂಚು ಉದ್ದದ ಚೂರಿಯನ್ನು ಹೊರಕ್ಕೆ ತೆಗೆಯಲಾಗಿದೆ. ಸದ್ಯ ಸೈಫ್‌ ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ಸ್ಪಷ್ಪ ಪಡಿಸಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಸೈಫ್ ದಾಖಲಾಗಿರುವ ಮುಂಬೈನ ಲೀಲಾವತಿ ಆಸ್ಪತ್ರೆಯ ವೈದ್ಯರು, ‘ಚಾಕು ಇರಿತದಿಂದ ಬೆನ್ನು ಮೂಳೆಗೆ ಗಾಯಗಳಾಗಿವೆ. ಬೆನ್ನು ಮೂಳೆಯಿಂದ 2.5 ಇಂಚಿನ ಚಾಕುವನ್ನು ತೆಗೆದು ಹಾಕಿದ್ದೇವೆ. ನಟನಿಗೆ ಎರಡು ತೀವ್ರ, ಎರಡು ಮಧ್ಯಮ ಮತ್ತು ಎರಡು ಆಳವಾದ ಇರಿತಗಳಾಗಿವೆ. ಗಾಯಗಳು ಆಳವಾಗಿದ್ದವು, ಆದರೂ ಆಸ್ಪತ್ರೆಯ ವೈದ್ಯರು ಶಸ್ತ್ರಚಿಕಿತ್ಸೆಯನ್ನು ಉತ್ತಮವಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದರು. ಅವರಿಗೆ ನ್ಯೂರೋಸರ್ಜರಿ ಮತ್ತು ಪ್ಲಾಸ್ಟಿಕ್ ಸರ್ಜರಿ ನಡೆಸಲಾಗಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಸದ್ಯ ಐಸಿಯುನಲ್ಲಿದ್ದು, ಒಂದೆರೆಡು ದಿನಗಳಲ್ಲಿ ವಾರ್ಡ್‌ಗೆ ಸ್ಥಳಾಂತರಿಸಲಾಗುವುದು’ ಎಂದಿದ್ದಾರೆ.

ಇರಿತದ ತನಿಖೆ ಹೊಣೆ ಕನ್ನಡಿಗ ಎನ್ಕೌಂಟರ್ ದಯಾನಾಯಕ್‌ಗೆ

ಮುಂಬೈ: ಸೈಫ್‌ ಅಲಿ ಖಾನ್‌ ಮೇಲಿನ ಹಲ್ಲೆಯ ತನಿಖೆ ಹೊಣೆಯನ್ನು ಎನ್ಕೌಂಟರ್‌ ಸ್ಪೆಷಲಿಸ್ಟ್‌ ಎಂದೇ ಖ್ಯಾತಿ ಹೊಂದಿರುವ ಕನ್ನಡಿಗ ದಯಾನಾಯಕ್‌ಗೆ ವಹಿಸಲಾಗಿದೆ. ಈ ಹಿನ್ನೆಲೆಯಲ್ಲಿ ಅವರು ಗುರುವಾರವೇ ಕ್ರೈಂ ಬ್ರಾಂಚ್‌ ಅಧಿಕಾರಿಗಳ ತಂಡದೊಂದಿಗೆ ಅವರ ನಿವಾಸಕ್ಕೆ ಆಗಮಿಸಿ ಪರಿಶೀಲಲನೆ ನಡೆಸಿದ್ದಾರೆ. 80 ಅಧಿಕ ಕುಖ್ಯಾತ ಭೂಗತ ಗ್ಯಾಂಗ್‌ಸ್ಟರ್‌ಗಳ ಎನ್‌ಕೌಂಟರ್‌ ಮಾಡಿದ ಖ್ಯಾತಿಯ ನಾಯಕ್‌, ಸೈಫ್‌ ಮೇಲಿನ ಹಲ್ಲೆ ಪ್ರಕರಣದ ತನಿಖೆಗೆ ಇಳಿದಿದ್ದಾರೆ.

ಕಾರ್‌ ಸಿದ್ಧವಿರದ ಕಾರಣ ಆಟೋದಲ್ಲಿ ತಂದೆ ಸೈಫ್‌ ಆಸ್ಪತ್ರೆಗೆ ಕರೆದೊಯ್ದ ಪುತ್ರ

ಮುಂಬೈ: ಆಗಂತುಕನ ದಾಳಿಗೆ ತುತ್ತಾಗಿ ತೀವ್ರವಾಗಿ ಗಾಯಗೊಂಡಿದ್ದ ಸೈಫ್‌ ಅವರನ್ನು ಸ್ವತಃ ಅವರ ಪುತ್ರ ಇಬ್ರಾಹಿಂ ಅಟೋದಲ್ಲಿ ಕರೆದೊಯ್ದು ಲೀಲಾವತಿ ಆಸ್ಪತ್ರೆಗೆ ದಾಖಲಿಸಿದ್ದರು. ಘಟನೆ ನಡೆದ ಬಳಿಕ ತಕ್ಷಣವೇ ಸೈಫ್‌ರನ್ನು ಕರೆದೊಯ್ಯಲು ಯತ್ನಿಸಿದ ವೇಳೆ ಮನೆಯಲ್ಲಿದ್ದ ಯಾವುದೇ ಕಾರುಗಳು ನಾನಾ ಕಾರಣದಿಂದ ಲಭ್ಯವಾಗಲಿಲ್ಲ. ಹೀಗಾಗಿ ಮನೆಯ ಹೊರಗಿದ್ದ ಆಟೋ ಮೂಲಕ ಸೈಫ್‌ರನ್ನು ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಯ್ತು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

2025 ಸುಧಾರಣೆಗಳ ಸಾರ್ಥಕ ವರ್ಷ: ಮೋದಿ ಹರ್ಷ
ಪತ್ರಕರ್ತರ ಹಿತರಕ್ಷಣೆಗೆ ಐಎಫ್‌ಡಬ್ಲ್ಯುಜೆ ಆಗ್ರಹ