ಅಯೋಧ್ಯೆಯ ರಾಮಮಂದಿರ ಮತ್ತು ಗುಜರಾತ್‌ನ ಸೋಮನಾಥ ಮೇಲೆ ದಾಳಿಗೆ ಸಂಚು : ಶಂಕಿತ ಉಗ್ರ ಸೆರೆ

KannadaprabhaNewsNetwork | Updated : Mar 04 2025, 07:24 AM IST

ಸಾರಾಂಶ

ಅಯೋಧ್ಯೆಯ ರಾಮಮಂದಿರ ಮತ್ತು ಗುಜರಾತ್‌ನ ವಿಶ್ವಪ್ರಸಿದ್ಧ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎನ್ನಲಾದ ಶಂಕಿತ ಉಗ್ರನೊಬ್ಬನನ್ನು ಹರ್ಯಾಣ ಮತ್ತು ಗುಜರಾತ್‌ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫರೀದಾಬಾದ್‌ನಲ್ಲಿ ಬಂಧಿಸಲಾಗಿದೆ.

 

 

 ನವದೆಹಲಿ: ಅಯೋಧ್ಯೆಯ ರಾಮಮಂದಿರ ಮತ್ತು ಗುಜರಾತ್‌ನ ವಿಶ್ವಪ್ರಸಿದ್ಧ ಸೋಮನಾಥ ದೇಗುಲದ ಮೇಲೆ ದಾಳಿಗೆ ಸಂಚು ರೂಪಿಸಿದ್ದ ಎನ್ನಲಾದ ಶಂಕಿತ ಉಗ್ರನೊಬ್ಬನನ್ನು ಹರ್ಯಾಣ ಮತ್ತು ಗುಜರಾತ್‌ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಫರೀದಾಬಾದ್‌ನಲ್ಲಿ ಬಂಧಿಸಲಾಗಿದೆ.

ಬಂಧಿತ ವ್ಯಕ್ತಿಯನ್ನು ಅಬ್ದುಲ್‌ ರೆಹಮಾನ್‌ (19) ಎಂದು ಗುರುತಿಸಲಾಗಿದೆ. ಈತ ವಿಶ್ವದ ಕುಖ್ಯಾತ ಉಗ್ರ ಸಂಘಟನೆಯಾದ ಐಸಿಸ್‌ ನಂಟು ಹೊಂದಿದ್ದು, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐನ ಸೂಚನೆಯಂತೆ ದಾಳಿಗೆ ಸಂಚು ರೂಪಿಸಲಾಗಿದ್ದ ಎಂದು ಹೇಳಲಾಗಿದೆ.

ಬಂಧನದ ಬೆನ್ನಲ್ಲೇ ರೆಹಮಾನ್‌ ನೀಡಿದ ಸುಳಿವಿನ ಮೇರೆಗೆ ಆತನ ಮನೆಯಿಂದ ಎರಡು ಗ್ರೆನೇಡ್‌ ವಶಕ್ಕೆ ಪಡೆಯಲಾಗಿದೆ. ಭಾನುವಾರವೇ ಅಬ್ದುಲ್‌ನನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಆತನನ್ನು ಸೋಮವಾರ ಗುಜರಾತ್‌ಗೆ ಕರೆದೊಯ್ಯಲಾಗಿದೆ. ಈತನ ಬಂಧನದೊಂದಿಗೆ ದೊಡ್ಡ ಉಗ್ರ ಸಂಚೊಂದು ವಿಫಲವಾದಂತಾಗಿದೆ.

ನಿಖರ ಮಾಹಿತಿ:

ಕೇಂದ್ರೀಯ ಗುಪ್ತಚರ ಸಂಸ್ಥೆಗಳು ನೀಡಿದ ಖಚಿತ ಮಾಹಿತಿ ಅನ್ವಯ ಭಾನುವಾರ ಕಾರ್ಯಾಚರಣೆ ನಡೆಸಿದ್ದ ಗುಜರಾತ್‌ ಭಯೋತ್ಪಾದನಾ ನಿಗ್ರಹ ದಳ ಮತ್ತು ಹರ್ಯಾಣದ ಫರೀದಾಬಾದ್‌ನ ವಿಶೇಷ ಕಾರ್ಯಪಡೆ ಸಿಬ್ಬಂದಿ, ಉತ್ತರಪ್ರದೇಶದ ಫೈಜಾಬಾದ್‌ನಲ್ಲಿ ಮಟನ್‌ ಶಾಪ್‌ ಇಟ್ಟುಕೊಂಡಿರುವ ಅಬ್ದುಲ್‌ ರೆಹಮಾನ್‌ನನ್ನು ಬಂಧಿಸಿದ್ದಾರೆ.

ಅಬ್ದುಲ್‌, ಫರೀದಾಬಾದ್‌ನಲ್ಲಿ ವ್ಯಕ್ತಿಯೊಬ್ಬರಿಂದ ಎರಡು ಗ್ರೆನೇಡ್‌ ಪಡೆದು ಅಯೋಧ್ಯೆಗೆ ತೆರಳುತ್ತಿದ್ದ ವೇಳೆ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ವೇಳೆ ಆತನ ಬಳಿ ಇದ್ದ ಎರಡು ಗ್ರೆನೇಡ್‌ ವಶಪಡಿಸಿಕೊಂಡಿರುವ ಪೊಲೀಸರು ಅದನ್ನು ನಿಷ್ಕ್ರಿಯಗೊಳಿಸಿದ್ದಾರೆ.

ವಿಚಾರಣೆ ವೇಳೆ ತಾನು ಅಯೋಧ್ಯೆ ರಾಮಮಂದಿರ, ಸೋಮನಾಥ ದೇಗುಲದ ಬಗ್ಗೆ ಸಂಚರಿಸಿ ಸಾಕಷ್ಟು ಮಾಹಿತಿ ಕಲೆ ಹಾಕಿರುವ ವಿಷಯವನ್ನು ರೆಹಮಾನ್‌ ಬಾಯಿಬಿಟ್ಟಿದ್ದಾನೆ. ಅಲ್ಲದೆ ಆತನ ಬಳಿ ಆತ ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ಕುರಿತು ಸಾಕಷ್ಟು ಮಹತ್ವದ ದಾಖಲೆ ಕೂಡಾ ಲಭ್ಯವಾಗಿದೆ ಎಂದು ವರದಿಗಳು ಹೇಳಿವೆ.

ಇಷ್ಟು ಮಾತ್ರವಲ್ಲದೇ, ಆತ ನೀಡಿದ ಮಾಹಿತಿ ಮೇರೆಗೆ ಫೈಜಾಬಾದ್‌ನ ಆತನ ಮನೆಯ ಮೇಲೆ ದಾಳಿ ನಡೆಸಿ ಶಸ್ತ್ರಾಸ್ತ್ರ ಕೂಡಾ ವಶಪಡಿಸಿಕೊಂಡಿದ್ದಾರೆ. ಜೊತೆಗೆ ನಿರ್ವಸಿತ ಮನೆಯೊಂದರಿಂದ ಎರಡು ಗ್ರೆನೇಡ್‌ ಕೂಡಾ ವಶಪಡಿಸಿಕೊಳ್ಳಲಾಗಿದೆ.

ಶಂಕಿತ ಉಗ್ರನ ಸಂಚು

- ಅಯೋಧ್ಯೆ ರಾಮಮಂದಿರ, ಗುಜರಾತ್‌ ಸೋಮನಾಥ ದೇಗುಲ ಬಗ್ಗೆ ಸಾಕಷ್ಟು ಮಾಹಿತಿ ಸಂಗ್ರಹ

- ಐಸಿಸ್‌ ನಂಟು ಹಾಗೂ ಪಾಕ್‌ ಐಎಸ್‌ಐ ಸೂಚನೆ ಮೇರೆಗೆ ಅಬ್ದುಲ್‌ ರೆಹಮಾನ್‌ ಕಾರ್ಯಾಚರಣೆ

- ನಿಖರ ಮಾಹಿತಿ ಮೇರೆಗೆ ಹರ್ಯಾಣದ ಪರೀದಾಬಾದ್‌ನಲ್ಲಿ ಬಂಧನ । ವಿಚಾರಣೆಗಾಗಿ ಗುಜರಾತ್‌ಗೆ

- ಫೈಜಾಬಾದ್‌ನ ಆತನ ಮನೆಯ ಮೇಲೆ ಪೊಲೀಸ್ ದಾಳಿ । ಗ್ರೆನೇಡ್‌ ಸೇರಿ ಶಸ್ತ್ರಾಸ್ತ್ರ ಕೂಡ ವಶಕ್ಕೆ

- ವಿಚಾರಣೆ ವೇಳೆ ಆತ ಸಾಕಷ್ಟು ಉಗ್ರ ಸಂಘಟನೆಗಳೊಂದಿಗೆ ನಂಟು ಹೊಂದಿರುವ ವಿವರ ಲಭ್ಯ

Share this article