ಇಸ್ರೇಲಿ ರಾಯಭಾರಿ ರುವೆನ್‌ ಪತ್ನಿ ಸಮೇತ ಅಯೋಧ್ಯೆಗೆ

KannadaprabhaNewsNetwork |  
Published : Oct 17, 2024, 12:06 AM IST
ಇಸ್ರೇಲ್ ರಾಯಭಾರಿ | Kannada Prabha

ಸಾರಾಂಶ

ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ತಮ್ಮ ಪತ್ನಿಯೊಂದಿಗೆ ಬುಧವಾರ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ.

ಅಯೋಧ್ಯೆ: ಭಾರತದಲ್ಲಿನ ಇಸ್ರೇಲ್ ರಾಯಭಾರಿ ರುವೆನ್ ಅಜರ್ ಅವರು ತಮ್ಮ ಪತ್ನಿಯೊಂದಿಗೆ ಬುಧವಾರ ಅಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ಮಂಗಳವಾರ ಲಖನೌದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ರುವೆನ್‌ ಬುಧವಾರ ಆಯೋಧ್ಯೆಯ ರಾಮಮಂದಿರಕ್ಕೆ ಭೇಟಿ ನೀಡಿದ್ದಾರೆ. ನಂತರ ಬಸ್ತಿ ಜಿಲ್ಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಹಾಜರಾಗಿದ್ದರು.

==

ಮಾಲ್ಡೀವ್ಸ್‌ನಲ್ಲಿ ಆರ್ಥಿಕ ಬಿಕ್ಕಟ್ಟು: ವಿವಿಧ ಇಲಾಖೆಗೆ ನೇಮಿಸಿದ್ದ 228 ಜನ ವಜಾ

ಮಾಲೆ: ಭಾರತದ ಜೊತೆ ಸಂಬಂಧ ಕೆಡಿಸಿಕೊಂಡ ಬಳಿಕ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿರುವ ಮಾಲ್ಡೀವ್ಸ್‌, ಇದೀಗ ವೆಚ್ಚ ಕಡಿತದ ಭಾಗವಾಗಿ ವಿವಿಧ ಇಲಾಖೆಗೆ ನೇಮಕ ಮಾಡಿದ್ದ 288 ಜನರನ್ನು ವಜಾ ಮಾಡಿದೆ. ಈ ಬಗ್ಗೆ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್ ಮುಯಿಜು ಟ್ವೀಟ್‌ ಮಾಡಿದ್ದು, ‘ಸರ್ಕಾರದ ಮೇಲಿನ ವೆಚ್ಚದ ಹೊರೆಯನ್ನು ಇಳಿಸಲು ಮುಂದಿನ 15 ದಿನಗಳಲ್ಲಿ ವಿವಿಧ ಇಲಾಖೆಗಳಿಗೆ ನೇಮಕ ಮಾಡಿದ್ದ 228 ಮಂದಿಯನ್ನು ತೆಗದುಹಾಕಲು ನಿರ್ಧರಿಸಲಾಗಿದೆ. ಇದರಲ್ಲಿ 7 ರಾಜ್ಯದ ಮಂತ್ರಿಗಳು, 43 ಉಪಮಂತ್ರಿಗಳು, 109 ಹಿರಿಯ ರಾಜಕೀಯ ನಿರ್ದೇಶಕರು ಹಾಗೂ 69 ರಾಜಕೀಯ ನಿರ್ದೇಶಕರು ಸೇರಿದ್ದಾರೆ’ ಎಂದು ತಿಳಿಸಿದ್ದಾರೆ.

==

ಬಿಹಾರದಲ್ಲಿ ನಕಲಿ ಮದ್ಯ ಸೇವಿಸಿ 6 ಸಾವು, 14 ಜನ ಆಸ್ಪತ್ರೆಗೆ ದಾಖಲು

ಸಿವಾನ್‌/ಸರಣ್‌: ಬಿಹಾರದ ಸಿವಾನ್‌ ಹಾಗೂ ಸರಣ್‌ ಜಿಲ್ಲೆಯಲ್ಲಿ ನಕಲಿ ಮದ್ಯ ಸೇವಿಸಿ ಬುಧವಾರ ಕನಿಷ್ಠ 6 ಜನ ಸಾವನ್ನಪ್ಪಿದ್ದು, 14 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿವಾನ್‌ ಜಿಲ್ಲೆಯಲ್ಲಿ ನಾಲ್ವರು ಮತ್ತು ಸರಣ್‌ ಜಿಲ್ಲೆಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ನಕಲಿ ಮದ್ಯ ಸೇವನೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, 2 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಘಟನೆ ಕುರಿತು ತನಿಖೆಗೆ ಆದೇಶಿಸಿದ್ದಾರೆ. 2016 ರಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟ ಹಾಗೂ ಸೇವನೆಗೆ ನಿಷೇಧ ಹೇರಿತ್ತು. ಆದರೂ ನಿಷೇಧದ ಬಳಿಕ ಇದುವರೆಗೂ ರಾಜ್ಯದಲ್ಲಿ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

==

ನೈಜೀರಿಯಾ ಪೆಟ್ರೋಲ್‌ ಟ್ಯಾಂಕರ್‌ ಸ್ಫೋಟಕ್ಕೆ 90 ಸಾವು, 50 ಮಂದಿ ಗಾಯ

ಅಬುಜಾ: ಪೆಟ್ರೋಲ್‌ ಟ್ಯಾಂಕರ್‌ ಸ್ಫೋಟಗೊಂಡು ಕನಿಷ್ಠ 90 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, 50 ಮಂದಿ ಗಾಯಗೊಂಡ ದುರ್ಘಟನೆ ನೈಜೀರಿಯಾದ ಜಿಗಾವಾ ರಾಜ್ಯದ ಮಜಿಯಾದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ. ಮಜಿಯಾ ಪಟ್ಟಣದಲ್ಲಿನ ವಿಶ್ವವಿದ್ಯಾನಿಲಯದ ಸಮೀಪದ ಹೆದ್ದಾರಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪೆಟ್ರೋಲ್‌ ಟ್ಯಾಂಕರ್‌ ಉರುಳಿ ಬಿದ್ದಿತ್ತು. ಹೀಗೆ ಉರುಳಿ ಬಿದ್ದ ಟ್ಯಾಂಕರ್‌ನಿಂದ ಪೆಟ್ರೋಲ್‌ ಅನ್ನು ಸಂಗ್ರಹಿಸಲು ಅಲ್ಲಿನ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಒಮ್ಮೆಲೆ ಆಗಮಿಸಿದ್ದರು. ಇದರಿಂದಲೇ ಸ್ಫೋಟ ಸಂಭವಿಸಿದೆ. ಈ ಘಟನೆಯಲ್ಲಿ ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

==

ಭಾರತದಲ್ಲಿ 12.9 ಕೋಟಿ ಕಡು ಬಡವರು: ವಿಶ್ವಬ್ಯಾಂಕ್‌

ನವದೆಹಲಿ: ಭಾರತದಲ್ಲಿ 12.9 ಕೋಟಿ ನಾಗರಿಕರು ತೀವ್ರ ಬಡತನದಲ್ಲಿ ಜೀವನ ನಡೆಸುತ್ತಿದ್ದಾರೆ ಎಂದು ವಿಶ್ವ ಬ್ಯಾಂಕ್ ವರದಿ ಹೇಳಿದೆ. ಆದರೆ 2021ಕ್ಕೆ ಹೋಲಿಸಿದರೆ ಈ ಪ್ರಮಾಣ 3.8 ಕೋಟಿಯಷ್ಟು ಕಡಿಮೆಯಾಗಿದೆ ಎಂದು ವಿಶ್ವ ಬ್ಯಾಂಕ್ ಅಂಕಿ ಅಂಶ ಹೇಳಿದೆ.

ವರದಿ ಪ್ರಕಾರ, ‘ಭಾರತದಲ್ಲಿ ಪ್ರಸ್ತಕ ವರ್ಷದಲ್ಲಿ 12.9 ಕೋಟಿ ಜನರು ದಿನಕ್ಕೆ 181 ರು.ಗಿಂತಲೂ ಕಡಿಮೆ ಆದಾಯವನ್ನು ಹೊಂದಿದ್ದಾರೆ. 2021ರಲ್ಲಿ ಭಾರತದಲ್ಲಿ ಬಡತನದ ಪ್ರಮಾಣ 16.7 ಕೋಟಿಯಷ್ಟಿತ್ತು. ಆದರೆ 2 ವರ್ಷಗಳಲ್ಲಿ ಈ ಪ್ರಮಾಣ 3.8 ಕೋಟಿಯಷ್ಟು ಇಳಿಕೆಯಾಗಿದೆ. ಈ ಪ್ರಮಾಣ ಮುಂದಿನ ದಿನಗಳಲ್ಲಿ ಮತ್ತಷ್ಟು ಕಡಿಮೆಯಾಗಲಿದೆ’ ಎಂದು ಹೇಳಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಕಾರು ಬುಕ್‌ ಮಾಡುವಾಗಲೇ ಟಿಪ್ಸ್‌ ಕೇಳುವುದಕ್ಕೆ ನಿಷೇಧ!
ರೈಲ್ವೆ ಪರಿಷ್ಕೃತ ದರ ಇಂದಿನಿಂದ ಜಾರಿಗೆ