ನವದೆಹಲಿ : ದೇಶದಲ್ಲಿ ಘಿಬ್ಲಿ ಟ್ರೆಂಡ್ ನಡುವೆ ಭಾರತದಲ್ಲಿನ ಇಸ್ರೇಲ್ ರಾಯಭಾರಿ ಕಚೇರಿಯು ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ನೆತನ್ಯಾಹು ಜೊತೆಯಲ್ಲಿರುವ ಘಿಬ್ಲಿ ಎಐ ಚಿತ್ರ ಹಂಚಿಕೊಂಡಿದೆ.
ಘಿಬ್ಲಿ ಫೋಟೋ ಸೃಷ್ಟಿಗೆ ವಿಶ್ವಾಸಾರ್ಹ ಆ್ಯಪ್ ಬಳಸಿ: ಪೊಲೀಸ್ ಸಲಹೆ
ಪಣಜಿ: ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡ್ ಸೃಷ್ಟಿಸಿರುವ ಘಿಬ್ಲಿ ಬಗ್ಗೆ ಗೋವಾ ಪೊಲೀಸರು ಸಲಹೆಯೊಂದನ್ನು ನೀಡಿದ್ದು, ‘ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಪೋಟೋವನ್ನು ಜನರೇಟ್ ಮಾಡಲು ವಿಶ್ವಾಸಾರ್ಹ ಎಐ ಆ್ಯಪ್‌ಗಳನ್ನು ಮಾತ್ರವೇ ಬಳಸಿ’ ಎಂದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ರಾಜ್ಯ ಪೊಲೀಸರು ಮಾಹಿತಿ ನೀಡಿದ್ದು, ‘ ಎಐ ಆಧಾರಿತ ಘಿಬ್ಲಿಗೆ ಸೇರಿಕೊಳ್ಳುವುದು ಮನರಂಜನೆ ವಿಷಯ. ಆದರೆ ಎಲ್ಲ ಕೃತಕ ಬುದ್ಧಿಮತ್ತೆಯ ಆ್ಯಪ್‌ಗಳು ನಿಮ್ಮ ಖಾಸಗಿತನ ರಕ್ಷಿಸುವುದಿಲ್ಲ. ಘಿಬ್ಲಿ ಕಲೆಯು ಅದರ ಕಲ್ಪನೆಯಿಂದ ಎಲ್ಲರಿಗೂ ಇಷ್ಟವಾಗಿದೆ, ಆದರೆ ನಿಮ್ಮ ವೈಯುಕ್ತಿಕ ಫೋಟೋವನ್ನು ಅಪ್ಲೋಡ್ ಮಾಡುವಾಗ ಯೋಚಿಸಿ. ಫೋಟೋ ಜನರೇಟ್ ಮಾಡಲು ವಿಶ್ವಾಸಾರ್ಹ ಆ್ಯಪ್‌ಗಳನ್ನು ಮಾತ್ರವೇ ಬಳಸಿ’ ಎಂದಿದೆ.
ಮಾರುತಿ ಸುಜುಕಿ ಕಾರು ಬೆಲೆ ₹2,500 ರು.ನಿಂದ 62,000ವರೆಗೂ ಏರಿಕೆ
ನವದೆಹಲಿ: ದೇಶದ ಅತಿ ದೊಡ್ಡ ಕಾರು ಉತ್ಪಾದಕ ಸಂಸ್ಥೆ ಮಾರುತಿ ಸುಜುಕಿ ತನ್ನ ವಿವಿಧ ಮಾದರಿಗಳ ಕಾರುಗಳ ಬೆಲೆಯನ್ನು 2,500-62,000 ರು.ಗಳಷ್ಟು ಏರಿಕೆ ಮಾಡುವುದಾಗಿ ತಿಳಿಸಿದೆ. ಹೊಸ ದರ ಏ.8ರಿಂದ ಜಾರಿಗೆ ಬರಲಿದೆ. ಹೆಚ್ಚುತ್ತಿರುವ ಉತ್ಪಾದನಾ ವೆಚ್ಚವನ್ನು ಸರಿದೂಗಿಸಲು ಈ ಕ್ರಮ ಅನಿವಾರ್ಯ ಎಂದು ಅದು ತಿಳಿಸಿದೆ. ಕಾಂಪ್ಯಾಕ್ಟ್ ಎಸ್‌ಯುವಿ ಫ್ರಾಂಕ್ಸ್ ಬೆಲೆಯನ್ನು 2,500 ರು., ಡಿಜೈರ್ ಟೂರ್ ಎಸ್ ಅನ್ನು 3,000 ರು. ಮತ್ತು ಎಕ್ಸ್‌ಎಲ್ 6 ಹಾಗೂ ಎರ್ಟಿಗಾ ಬೆಲೆಯನ್ನು 12,500 ರು. ಹೆಚ್ಚಿಸುವುದಾಗಿ ತಿಳಿಸಿದೆ. ಫೆ.1ರಿಂದ 32,500 ರು.ಗಳವರೆಗೆ ದರ ಹೆಚ್ಚಿಸಲಾಗಿತ್ತು. ಅದಾಗಿ ಎರಡೇ ತಿಂಗಳಲ್ಲಿ ಮತ್ತೆ ದರ ಪರಿಷ್ಕರಣೆ ಮಾಡಲಾಗಿದೆ.
ಮಹಾದೇವ್ ಬೆಟ್ಟಿಂಗ್ ಆ್ಯಪ್ ಹಗರಣದಲ್ಲಿ ಮಾಜಿ ಸಿಎಂ ಬಘೇಲ್ ಆರೋಪಿ: ಸಿಬಿಐ
ನವದೆಹಲಿ: ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣ ಸಂಬಂಧ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್ ಬಘೇಲ್ ಕೂಡ ಈ ಹಗರಣದ ಫಲಾನುಭವಿಗಳಲ್ಲಿ ಒಬ್ಬರು ಎಂದು ಸಿಬಿಐ ಅಧಿಕಾರಿಗಳು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.ಜಾರಿ ನಿರ್ದೇಶಾನಲಯದ ಅಧಿಕಾರಿಗಳು ನಡೆಸಿದ ತನಿಖೆ ವರದಿ ಆಧರಿಸಿ ಸಿಬಿಐ ಎಫ್‌ಐಆರ್ ದಾಖಲಿಸಿದೆ.
ಪ್ರಕರಣದ 19 ಆರೋಪಿಗಳಲ್ಲಿ ಬಘೇಲ್ ಅವರನ್ನು 6ನೇ ಆರೋಪಿಯನ್ನಾಗಿ ಕೇಂದ್ರೀಯ ತನಿಖಾ ಸಂಸ್ಥೆ ಹೆಸರಿಸಿದೆ. ಸಿಬಿಐ ಕಳೆದ ವರ್ಷ ಡಿ.18ರಂದು ಎಫ್‌ಐಆರ್ ದಾಖಲಿತ್ತ. ಇದೇ ಮಾ.26ರಂದು ಬಘೇಲ್ ನಿವಾಸದಲ್ಲಿ ಶೋಧ ನಡೆಸಿತು. ಮಂಗಳ ವಾರ ಸಿಬಿಐ ಆ ಎಫ್‌ಐಆರ್ ಬಹಿರಂಗಪಡಿಸಿದ್ದು, ಅದರಲ್ಲಿ ಬಘೇಲ್ ಹೆಸರು ಉಲ್ಲೇಖಗೊಂಡಿದೆ. ಆದರೆ ಈ ಆರೋಪವನ್ನು ಬಘೇಲ್ ನಿರಾಕರಿಸಿದ್ದು ಸಿಬಿಐ ಕ್ರಮ ರಾಜಕೀಯ ಪ್ರೇರಿತ ಎಂದಿದ್ದಾರೆ.