ಪಿಟಿಐ
ಬೆಂಗಳೂರು: ಇತ್ತೀಚೆಗೆ ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆ ಇಳಿಸುವಲ್ಲಿ ಯಶಸ್ವಿಯಾಗಿದ್ದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ಇಸ್ರೋ’ ಈಗ ಸೂರ್ಯಯಾನದಲ್ಲೂ ಯಶಸ್ಸು ಕಂಡಿದೆ. ಸೂರ್ಯನ ಅಧ್ಯಯನಕ್ಕೆಂದು ಹಾರಿ ಬಿಟ್ಟಿದ್ದ ‘ಆದಿತ್ಯ ಎಲ್1’ ನೌಕೆಯನ್ನು ನಿಗದಿತ ಗಮ್ಯಸ್ಥಾನವಾದ ಎಲ್1 ಕಕ್ಷೆಯಲ್ಲಿ (ಲ್ಯಾಗ್ರೇಂಜ್ ಪಾಯಿಂಟ್ -1) ಕೂರಿಸುವಲ್ಲಿ ಶನಿವಾರ ಇಸ್ರೋ ಯಶಸ್ವಿಯಾಗಿದೆ. ಅಮೆರಿಕ, ಯುರೋಪ್, ಚೀನಾ ಬಳಿಕ ಈ ಸಾಧನೆ ಮಾಡಿದ ವಿಶ್ವದ 4ನೇ ದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ.
ಉಡಾವಣೆಗೊಂಡು 4 ತಿಂಗಳ ಕಾಲ ಸುಮಾರು 15 ಲಕ್ಷ ಕಿ.ಮೀ. ಸಂಚರಿಸಿದ ಬಳಿಕ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ‘ಆದಿತ್ಯ ಎಲ್1’ ನೌಕೆಯನ್ನು ಎಲ್1 ಕಕ್ಷೆಯಲ್ಲಿ ಕೂರಿಸುವ ಪ್ರಕ್ರಿಯೆಯನ್ನು ಇಸ್ರೋ ವಿಜ್ಞಾನಿಗಳ ತಂಡ ಯಶಸ್ವಿಯಾಗಿ ಮಾಡಿದೆ. ಒಂದು ವೇಳೆ ಎಲ್1 ಬಿಂದುವಿನಲ್ಲಿ ನೌಕೆಯನ್ನು ಕೂರಿಸುವಲ್ಲಿ ವಿಫಲವಾಗಿದ್ದರೆ ನೌಕೆಯು ಸೂರ್ಯನತ್ತ ಪ್ರಯಾಣ ಮುಂದುವರೆಸಿ ಇಡೀ ಉಡ್ಡಯನ ಪ್ರಕ್ರಿಯೆಯೇ ವ್ಯರ್ಥವಾಗುವ ಅಪಾಯವಿತ್ತು.
ಈ ವಿಷಯವನ್ನು ಪ್ರಕಟಿಸಿರುವ ಪ್ರಧಾನಿ ನರೇಂದ್ರ ಮೋದಿ, ಭಾರತೀಯ ವಿಜ್ಞಾನಿಗಳನ್ನು ಕೊಂಡಾಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಅನೇಕ ಗಣ್ಯರು ಈ ಸಾಧನೆಯನ್ನು ಮುಕ್ತಕಂಠದಿಂದ ಹೊಗಳಿದ್ದಾರೆ.‘ಭಾರತವು ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಭಾರತದ ಮೊದಲ ಸೌರ ನೌಕೆಯಾದ ಆದಿತ್ಯ-ಎಲ್1 ತನ್ನ ಗಮ್ಯಸ್ಥಾನವನ್ನು ತಲುಪಿದೆ.
ಹೊಸ ಹೆಗ್ಗುರುತು ಎಂದ ಪ್ರಧಾನಿ ನರೇಂದ್ರ ಮೋದಿ: ಇದು ಅತ್ಯಂತ ಕ್ಲಿಷ್ಟಕರ ಕೆಲಸವಾಗಿತ್ತು. ಆದರೂ ಎಲ್ಲ ಅಡೆತಡೆ ಮೆಟ್ಟಿ ನಿಂತು ವಿಜ್ಞಾನಿಗಳು ಯಶಸ್ಸು ಕಂಡಿದ್ದಾರೆ. ಇದು ನಮ್ಮ ವಿಜ್ಞಾನಿಗಳ ನಿರಂತರ ಸಮರ್ಪಣೆಗೆ ಸಾಕ್ಷಿಯಾಗಿದೆ.ಭಾರತವು ಮತ್ತೊಂದು ಹೆಗ್ಗುರುತನ್ನು ಸೃಷ್ಟಿಸಿದೆ. ಎಲ್ಲ ಅಡೆತಡೆ ಮೆಟ್ಟಿ ನಿಂತು ವಿಜ್ಞಾನಿಗಳು ಯಶಸ್ಸು ಕಂಡಿದ್ದಾರೆ. ಇಡೀ ದೇಶದ ಜನತೆಯ ಜತೆ ನಾನೂ ಇಸ್ರೋವನ್ನು ಅಭಿನಂದಿಸುತ್ತೇನೆ. ‘ಮಾನವತೆಯ ಪ್ರಯೋಜನಕ್ಕಾಗಿ ಇಂಥ ಆವಿಷ್ಕಾರಗಳನ್ನು ಮುಂದುವರಿಸುತ್ತೇವೆ’ ಎಂದು ಟ್ವೀಟ್ ಮಾಡಿದ್ದಾರೆ.
ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಸುದ್ದಿಗಾರರ ಜತೆ ಮಾತನಾಡಿ, ‘ಇದು ನಮಗೆ ತುಂಬಾ ತೃಪ್ತಿ ಹಾಗೂ ಸಂತಸ ತಂದಿದೆ. ಏಕೆಂದರೆ ಇದು ದೀರ್ಘ ಪ್ರಯಾಣದ ಅಂತ್ಯದ ಕ್ಷಣವಾಗಿದೆ. ಉಡಾವಣೆಯಾದ ಬಳಿಕ 126 ದಿನಗಳ ಕಾಲ ನೌಕೆಯು ಪ್ರಯಾಣಿಸಿ ಇಂದು ಅಂತಿಮ ಹಂತವನ್ನು ತಲುಪಿದೆ. ಅಂತಿಮ ಹಂತವನ್ನು ತಲುಪುವ ಸಮಯವು ಯಾವತ್ತೂ ಆತಂಕದ ಕ್ಷಣವಾಗಿರುತ್ತದೆ. ಆದರೆ ಅದು ಸವಾಲಿನದ್ದು ಎಂದೇನೂ ನನಗೇನೂ ಅನ್ನಿಸುವುದಿಲ್ಲ. ನಾವು ಗುರಿ ತಲುಪುವ ಅದಮ್ಯ ವಿಶ್ವಾಸ ಹೊಂದಿದ್ದೆವು. ಎಲ್ಲವೂ ನಾವು ಊಹಿಸಿದಂತೆಯೇ ಆಗಿದೆ. ಇನ್ನು ಆದಿತ್ಯ ಎಲ್-1 ಭೂಮಿಗೆ ದತ್ತಾಂಶ ಕಳಿಸಲಿದೆ ಹಾಗೂ ಅದು ಅತ್ಯಂತ ವಿಶ್ವಾಸಾರ್ಹವಾಗಿರಲಿದೆ’ ಎಂದಿದ್ದಾರೆ.
ಯೋಜನೆಯ ಉದ್ದೇಶವೇನು?
ಆದಿತ್ಯ ಎಲ್-1 ನೌಕೆಯು ಎಲ್-1 ಪಾಯಿಂಟ್‌ನಲ್ಲಿ ಕಾರ್ಯನಿರ್ವಹಿಸುವ 5 ವರ್ಷದ ಅವಧಿಯಲ್ಲಿ ಸೂರ್ಯನ ಕೊರೋನಾ (ಹೊರಭಾಗ) ಬಿಸಿಯಾಗುತ್ತಿರುವ ವಿದ್ಯಮಾನ, ಸೌರಜ್ವಾಲೆ, ಸೌರ ಮಾರುತ, ಬಾಹ್ಯಾಕಾಶದ ಉಷ್ಣಾಂಶಗಳ ಕುರಿತಾಗಿ ಮಾಹಿತಿ ಸಂಗ್ರಹಿಸಿ ಭೂಮಿಗೆ ರವಾನಿಸಲಿದೆ. ನೌಕೆಯಲ್ಲಿನ 4 ಪೇಲೋಡ್‌ಗಳು ಈ ಕುರಿತ ಮಾಹಿತಿ ಸಂಗ್ರಹಿಸಲಿವೆ.
ಎಲ್-1 ಮಹತ್ವವೇನು?
ಆದಿತ್ಯ ಎಲ್-1 ಸೌರ ವ್ಯೋಮನೌಕೆಯ ಗಮ್ಯ ಸ್ಥಾನವಾದ ‘ಎಲ್-1 ಕಕ್ಷೆ’ಯು (ಲ್ಯಾಗ್ರೇಂಜ್ ಪಾಯಿಂಟ್ -1), ನೌಕೆಯ ಅಂತಿಮ ನಿಲ್ದಾಣವಾಗಿದ್ದು, ಅಲ್ಲಿಂದಲೇ ಅದು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಲಿದೆ. ‘ಎಲ್1’ ಎಂಬುದು ನಿರ್ವಾತ ಪ್ರದೇಶವಾಗಿದ್ದು, ಭೂಮಿಯಿಂದ ಸೂರ್ಯನಿಗಿರುವ ಒಟ್ಟು ದೂರದಲ್ಲಿ 100ನೇ 1ರಷ್ಟು ದೂರದಲ್ಲಿದೆ.
ಈ ಸ್ಥಳದಲ್ಲಿ ಯಾವುದೇ ಸೂರ್ಯಗ್ರಹಣ ಹಾಗೂ ಹಗಲು-ರಾತ್ರಿ ಸಂಭವಿಸುವುದಿಲ್ಲ. ಇಲ್ಲಿಂದ ಯಾವುದೇ ಅಡೆತಡೆಯಿಲ್ಲದೆ, ಹಗಲು ರಾತ್ರಿಗಳಿಲ್ಲದೆ, ಗ್ರಹಣಗಳೂ ಇಲ್ಲದೆ ಆದಿತ್ಯ ನೌಕೆಯು ಸೂರ್ಯನನ್ನು ನಿರಂತರವಾಗಿ ಅಧ್ಯಯನ ಮಾಡಬಹುದಾಗಿದೆ. 2023ರ ಸೆ.2ರಂದು ಎಲ್1 ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತು. ಹೀಗಾಗಿ ಶನಿವಾರದ ಕಾರ್ಯಾಚರಣೆ ಇಸ್ರೋಗೆ ಅತ್ಯಂತ ಮಹತ್ವದ್ದಾಗಿತ್ತು. ಆದರೆ ಈಗ ಆ ಎಲ್ಲ ಆತಂಕ ನಿವಾರಣೆ ಆಗಿದೆ.