ಸೂರ್ಯನ ಕೌತುಕಗಳ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಆದಿತ್ಯ-ಎಲ್1 ನೌಕೆಯು ಇತ್ತೀಚೆಗೆ ಭಾಸ್ಕರನ ಅಂಗಳದಲ್ಲಿ ಎದ್ದಿದ್ದ ಸೌರಜ್ಞಾಲೆಯ ದೃಶ್ಯಗಳನ್ನು ಸೆರೆ ಹಿಡಿದಿದೆ.
ಬೆಂಗಳೂರು : ಸೂರ್ಯನ ಕೌತುಕಗಳ ಅಧ್ಯಯನಕ್ಕಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಿರುವ ಆದಿತ್ಯ-ಎಲ್1 ನೌಕೆಯು ಇತ್ತೀಚೆಗೆ ಭಾಸ್ಕರನ ಅಂಗಳದಲ್ಲಿ ಎದ್ದಿದ್ದ ಸೌರಜ್ಞಾಲೆಯ ದೃಶ್ಯಗಳನ್ನು ಸೆರೆ ಹಿಡಿದಿದೆ.
ಆದಿತ್ಯ ನೌಕೆಯಲ್ಲಿನ ಸೋಲಾರ್ ಅಲ್ಟ್ರಾ ವಯಲೆಟ್ ಇಮೇಜಿಂಗ್ ಟೆಲಿಸ್ಕೋಪ್ (ಸೂಟ್) ಹಾಗೂ ವಿಸಿಬಲ್ ಎಮಿಶ್ಶನ್ ಲೈನ್ ಕೊರೊನಾಗ್ರಾಫ್ (ವಿಇಎಲ್‌ಸಿ) ಎಂಬ ಸೂಕ್ಷ್ಮ ಸಂವೇದಿ ಉಪಕರಣಗಳು 2024ರ ಮೇ ತಿಂಗಳಿನಲ್ಲಿ ಕಂಡುಬಂದ ಚಲನಶೀಲ ಚಟುವಟಿಕೆಗಳನ್ನು ಸೆರೆ ಹಿಡಿದಿವೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ. ಈ ದೃಶ್ಯಗಳನ್ನು ಸಂಸ್ಥೆ ಬಿಡುಗಡೆ ಮಾಡಿದೆ.
ಭಾರತದ ಚೊಚ್ಚಲ ಸೂರ್ಯ ಅಧ್ಯಯನ ನೌಕೆ ಆದಿತ್ಯ- ಎಲ್1 ಅನ್ನು ಇಸ್ರೋ 2023ರ ಸೆಪ್ಟೆಂಬರ್ 2ರಂದು ಉಡಾವಣೆ ಮಾಡಿತ್ತು. ಅದಾದ 127 ದಿನಗಳ ಬಳಿಕ ಅಂದರೆ ಈ ವರ್ಷದ ಜ.6ರಂದು ಆ ನೌಕೆ ಎಲ್-1 ಬಿಂದುವನ್ನು ತಲುಪಿತ್ತು. ಭೂಮಿಯಿಂದ 15 ಲಕ್ಷ ಕಿ.ಮೀ. ದೂರದಲ್ಲಿರುವ ಆ ಬಿಂದುವಿನಲ್ಲಿ ನೆಲೆಗೊಂಡು, ಸೂರ್ಯನನ್ನು ನಿರಂತರವಾಗಿ ವೀಕ್ಷಿಸುವ ಅವಕಾಶವನ್ನು ಆದಿತ್ಯ ಪಡೆದುಕೊಂಡಿದೆ.