ಬಾಹ್ಯಾಕಾಶ ಡಾಕಿಂಗ್‌ ಪ್ರಯೋಗಕ್ಕೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಸಜ್ಜು !

KannadaprabhaNewsNetwork | Updated : Dec 23 2024, 04:43 AM IST

ಸಾರಾಂಶ

2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಗುರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದಕ್ಕೆ ಪೂರಕವಾದ ಬಾಹ್ಯಾಕಾಶ ನೌಕೆ ಡಾಕಿಂಗ್‌ (ತಂಗುವ) ಪ್ರಯೋಗಕ್ಕೆ ಸಜ್ಜಾಗಿದೆ.

ನವದೆಹಲಿ: 2035ರ ವೇಳೆಗೆ ತನ್ನದೇ ಆದ ಬಾಹ್ಯಾಕಾಶ ಕೇಂದ್ರ ಸ್ಥಾಪನೆ ಗುರಿ ಹೊಂದಿರುವ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ), ಇದಕ್ಕೆ ಪೂರಕವಾದ ಬಾಹ್ಯಾಕಾಶ ನೌಕೆ ಡಾಕಿಂಗ್‌ (ತಂಗುವ) ಪ್ರಯೋಗಕ್ಕೆ ಸಜ್ಜಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಇದೇ ಡಿ.30ಕ್ಕೆ ಇಂಥದ್ದೊಂದು ಐತಿಹಾಸಿಕ ಪ್ರಯೋಗಕ್ಕೆ ಅಗತ್ಯವಾದ ಎರಡು ನೌಕೆ (ಉಪಗ್ರಹ)ಗಳನ್ನು ಇಸ್ರೋ ಹಾರಿ ಬಿಡಲಿದೆ.

ಸ್ಪಾಡೆಕ್ಸ್‌ ಹೆಸರಿನ ಈ ಉಡ್ಡಯನದಲ್ಲಿ ಚೇಸರ್‌ (ಎಸ್‌ಡಿಎಕ್ಸ್‌01) ಮತ್ತು ಟಾರ್ಗೆಟ್‌ (ಎಸ್‌ಡಿಎಕ್ಸ್‌02) ಎಂಬ ಎರಡು ಉಪಗ್ರಹಗಳಿದ್ದು, ಅವುಗಳನ್ನು ಪಿಎಸ್‌ಎಲ್‌ವಿ -ಸಿ60 ರಾಕೆಟ್‌ ಹೊತ್ತೊಯ್ಯಲಿದೆ. ಹೀಗೆ ಹೊತ್ತೊಯ್ದ ಉಪಗ್ರಹಗಳನ್ನು ಕೆಲ ಹಂತದ ಕಕ್ಷೆಯಲ್ಲಿ ಕೂರಿಸಿ, ಬಳಿಕ ಒಂದರಲ್ಲಿ ಇನ್ನೊಂದು ತಂಗುವಂಥ ಪ್ರಯೋಗವನ್ನು ಇಸ್ರೋ ನಡೆಸಲಿದೆ.

ಒಂದು ವೇಳೆ ಈ ಪ್ರಯೋಗ ಯಶಸ್ವಿಯಾದರೆ, ಅಮೆರಿಕ, ರಷ್ಯಾ, ಚೀನಾದ ಬಳಿಕ ಇಂಥ ಸಾಧನೆ ಮಾಡಿದ ವಿಶ್ವದ 4ನೇ ದೇಶವೆಂಬ ಹಿರಿಮೆಗೆ ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸ್ರೋ ಪಾತ್ರವಾಗಲಿದೆ. ಡಿ.30ಕ್ಕೆ ಉಡ್ಡಯನದ ಉದ್ದೇಶ ಹೊಂದಿದ್ದರೂ, ವಾತಾವರಣ ಅಥವಾ ತಾಂತ್ರಿಕ ಸಮಸ್ಯೆ ಎದುರಾದರೆ 2025ರ ಜ.13ರವರೆಗಿನ ಇತರೆ ಹಲವು ದಿನಾಂಕಗಳನ್ನೂ ಇಸ್ರೋ ಸಿದ್ಧಪಡಿಸಿಕೊಟ್ಟುಕೊಂಡಿದೆ.

ಈ ಕುರಿತು ಮಾಹಿತಿ ಹಂಚಿಕೊಂಡಿರುವ ಇಸ್ರೋ, ‘ಸ್ಪಾಡೆಕ್ಸ್‌ನ ಜೋಡಣೆ, ಪರೀಕ್ಷೆಗಳು ಮುಗಿದಿದ್ದು, ಬಾಹ್ಯಾಕಾಶ ನೌಕೆಯನ್ನು ಶ್ರೀಹರಿ ಕೋಟಾದ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರಕ್ಕೆ ಕಳಿಸಲಾಗಿದೆ. ಈಗ ಉಡಾವಣೆಯ ತಯಾರಿ ನಡೆಯುತ್ತಿದೆ’ ಎಂದು ತಿಳಿಸಿದೆ.

ಬಾಹ್ಯಾಕಾಶದಲ್ಲಿ ಹಸಿರು ಚಿಗುರಿಸಲು ಇಸ್ರೋ ಯತ್ನ

ಬಾಹ್ಯಾಕಾಶದಲ್ಲಿ ಸಸಿಗಳು ಚಿಗುರುವ ಬಗ್ಗೆಯೂ ಈ ಉಡ್ಡಯನದ ವೇಳೆ ಸಂಶೋಧನೆ ನಡೆಸಲಾಗುವುದು. ವಿಕ್ರಂ ಸಾರಾಬಾಯ್‌ ಬಾಹ್ಯಾಕಾಶ ಕೇಂದ್ರವು ಕ್ರಾಪ್ಸ್‌ ಹೆಸರಿನ ಯೋಜನೆಯಡಿ ಆಗಸದಲ್ಲೇ ಉಳಿಯಲಿರುವ ಕಡೆಯ ಹಂತದ ರಾಕೆಟ್‌ನಲ್ಲಿ ಸಸಿಗಳ ಬೆಳವಣಿಗೆ ಕುರಿತ ಪ್ರಯೋಗವನ್ನೂ ನಡೆಸಲಿದೆ.

 ಯೋಜನೆಯ ಭಾಗವಾಗಿ ಮುಚ್ಚಿದ ಬಾಕ್ಸ್‌ ಒಂದರಲ್ಲಿ ಹಲಸಂದೆ ಬೀಜಗಳನ್ನು ಇಡಲಾಗಿದ್ದು ಅದು ಮೊಳಕೆಯೊಡೆದು, 2 ಎಲೆಗಳಾಗಿ ಅರಳುವ ತನಕದ ಮಾಹಿತಿ ಸಂಗ್ರಹಿಸಿ ಸಂಶೋಧನೆಗೆ ಒಳಪಡಿಸಲಿಎ. ಜೊತೆಗೆ ಅಂತೆಯೇ, ಪೋಮ್-4 ಮಿಷನ್‌ನ ಅಡಿಯಲ್ಲಿ ಬಾಹ್ಯಾಕಾಶದಲ್ಲಿ ತೇಲುತ್ತಿರುವ ತ್ಯಾಜ್ಯವನ್ನು ಸಂಗ್ರಹಿಸುವ ರೋಬೋಟ್‌ ಹಾಗೂ ನೌಕೆಗಳಿಗೆ ಇಂಧನ ತುಂಬುವ ಪರೀಕ್ಷೆ ನಡೆಸಲಾಗುವುದು.

Share this article