ಫೋಟೋ, ಫಾರಿನ್‌ ಟೂರ್‌, ಬೆನ್ಜ್‌ ಕಾರಿಗಾಗಿ ಧನಕರ್‌ ಪಟ್ಟು, ಬಿಕ್ಕಟ್ಟು

KannadaprabhaNewsNetwork |  
Published : Jul 25, 2025, 12:31 AM ISTUpdated : Jul 25, 2025, 04:33 AM IST
Jagdeep Dhankar

ಸಾರಾಂಶ

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರ ರಾಜೀನಾಮೆ ದಿಢೀರ್‌ ಎಂದು ಆಗಿದ್ದಲ್ಲ. ಸರ್ಕಾರ ಮತ್ತು ಧನಕರ್ ನಡುವೆ ಸುದೀರ್ಘ ಸಮಯದಿಂದ ನಾನಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು.  

ನವದೆಹಲಿ: ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರ ರಾಜೀನಾಮೆ ದಿಢೀರ್‌ ಎಂದು ಆಗಿದ್ದಲ್ಲ. ಸರ್ಕಾರ ಮತ್ತು ಧನಕರ್ ನಡುವೆ ಸುದೀರ್ಘ ಸಮಯದಿಂದ ನಾನಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು. ಕೊನೆಗೆ ಕಳಂಕಿತ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರ ವಿರುದ್ಧ ಪ್ರತಿಪಕ್ಷಗಳ ನಿರ್ಣಯ ಮಂಡನೆಗೆ ಮೊದಲ ದಿನವೇ ಒಪ್ಪಿಗೆ ನೀಡಿದ ಕ್ರಮ ರಾಜೀನಾಮೆಗೆ ದಾರಿಮಾಡಿಕೊಟ್ಟಿತು ಎಂದು ಮೂಲಗಳು ತಿಳಿಸಿವೆ.

ಸವಲತ್ತು, ಗೌರವಕ್ಕೆ ಬೇಡಿಕೆ:

ಸರ್ಕಾರಿ ಕಚೇರಿಗಳಲ್ಲಿ ರಾಷ್ಟ್ರಪತಿ, ಪ್ರಧಾನಿ ಜೊತೆ ತಮ್ಮ ಫೋಟೋ ಕೂಡಾ ಇರಿಸಬೇಕೆಂಬ ಸಲಹೆಯನ್ನು ಧನಕರ್‌ ಬಹಳ ಹಿಂದೆಯೇ ಸರ್ಕಾರಕ್ಕೆ ನೀಡಿದ್ದರು. ಆದರೆ ಅದು ಸ್ವೀಕೃತವಾಗಿರಲಿಲ್ಲ. ತಮಗೆ ಹಾಗೂ ತಮಗೆ ನೀಡಿರುವ ಬೆಂಗಾವಲು ವಾಹನಗಳಿಗೆ ಬೆನ್ಜ್‌ ಕಾರು ಒದಗಿಬೇಕೆಂಬ ಬೇಡಿಕೆಯೂ ಧನಕರ್‌ ಅವರಿಂದ ವ್ಯಕ್ತವಾಗಿತ್ತು. ಜೊತೆಗೆ ಸರ್ಕಾರದ ಕಾರ್ಯಕ್ರಮಗಳು, ವಿದೇಶಿ ಗಣ್ಯರ ಆಗಮನದ ವೇಳೆ ತಮಗೆ ಸೂಕ್ತ ಗೌರವ ಸಿಗುತ್ತಿಲ್ಲ, ಶಿಷ್ಟಾಚಾರ ಪಾಲನೆಯಾಗುತ್ತಿಲ್ಲ ಎಂಬುದು ಧನಕರ್‌ ಅವರನ್ನು ಹಲವು ಬಾರಿ ಸಿಟ್ಟಿಗೆಬ್ಬಿಸಿತ್ತು.

ಇನ್ನು ಅಮೆರಿಕ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್‌ ಭಾರತ ಭೇಟಿ ವೇಳೆ ತಾವೇ ಅವರ ಜತೆ ಉನ್ನತಮಟ್ಟದ ಸಭೆ ನಡೆಸುವುದಾಗಿ ಧನಕರ್‌ ಹೇಳಿಕೊಂಡಿದ್ದರು. ಬಳಿಕ ಹಿರಿಯ ಸಚಿವರೊಬ್ಬರು ವ್ಯಾನ್ಸ್ ಉಪರಾಷ್ಟ್ರಪತಿ ಆಗಿರಬಹುದು, ಆದರೆ ಅವರು ಪ್ರಧಾನಿ ಮೋದಿ ಅವರಿಗೆ ಅಮೆರಿಕ ಅಧ್ಯಕ್ಷರ ಸಂದೇಶ ಹೊತ್ತು ತಂದಿದ್ದಾರೆ ಎಂದು ಸಭೆಯ ಅವಕಾಶ ನಿರಾಕರಿಸಿದ್ದರು. ಜೊತೆಗೆ ಕಳೆದ 3 ವರ್ಷಗಳಲ್ಲಿ ತಮಗೆ ಕೇವಲ 4 ಮಾತ್ರವೇ ವಿದೇಶಗಳ ಭೇಟಿಗೆ ಅವಕಾಶ ನೀಡಲಾಗಿದೆ ಎಂಬುದು ಕೂಡಾ ಧನಕರ್‌ ಸಿಟ್ಟಿಗೆ ಕಾರಣವಾಗಿತ್ತು ಎನ್ನಲಾಗಿದೆ.

ಕಾಂಗ್ರೆಸ್‌ ಸಂಪರ್ಕ:

ಪ್ರತಿಪಕ್ಷಗಳ ನೇತೃತ್ವದಲ್ಲಿ ನ್ಯಾ.ಯಶವಂತ್‌ ವರ್ಮಾ ಅವರ ವಾಗ್ದಂಡನೆ ಪ್ರಸ್ತಾಪ ಮುಂದಿಡುವ ಪ್ರಯತ್ನ ನಡೆಸಿದಾಗ ಸ್ವಲ್ಪ ತಾಳ್ಮೆಯಿಂದಿರುವಂತೆ ಧನಕರ್‌ರಿಗೆ ಹೇಳಲಾಗಿತ್ತು. ಜಂಟಿ ವಾಗ್ದಂಡನೆ ಮಂಡಿಸಲು ಒಮ್ಮತಾಭಿಪ್ರಾಯ ರೂಪಿಸುವ ಕೆಲಸಗಳು ಆಗುತ್ತಿವೆ. ಹೀಗಾಗಿ ಪ್ರತಿಪಕ್ಷಗಳ ನಿರ್ಣಯ ಏಕಾಏಕಿ ಒಪ್ಪಬೇಡಿ ಎಂದು ಸಚಿವರಾದ ಕಿರಣ್‌ ರಿಜಿಜು, ಅರ್ಜುನ್ ಮೇಘಾವಲ್‌ ಮತ್ತು ಜೆ.ಪಿ.ನಡ್ಡಾ ಅವರು ಉಪರಾಷ್ಟ್ರಪತಿಗೆ ಮನವಿ ಮಾಡಿದ್ದರು. ಆದರೆ ಈ ನಿರ್ಣಯಕ್ಕೆ ಮೊದಲ ದಿನವೇ ಅಂಗೀಕಾರ ನೀಡಿ ಅಚ್ಚರಿ ಮೂಡಿಸಿದ್ದರು. ಇದು ಅವರ ನಿರ್ಗಮನಕ್ಕೆ ವೇದಿಕೆ ಕಲ್ಪಿಸಿತು ಎನ್ನಲಾಗಿದೆ.

PREV
Read more Articles on

Recommended Stories

ಇಂದು ಕಾರ್ಗಿಲ್‌ ವಿಜಯ ದಿವಸ : 3 ಯೋಜನೆಗೆ ಚಾಲನೆ
ಬಿಹಾರ: 65.2 ಲಕ್ಷ ಅನರ್ಹ ಮತದಾರರು ಪತ್ತೆ