ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಜೈಪುರ ಸಾಹಿತ್ಯೋತ್ಸವ ಶುರು

Published : Jan 16, 2026, 08:14 AM IST
Jaipura

ಸಾರಾಂಶ

ಗದಗುಡುವ ಚಳಿ ನಡುವೆಯೂ ಸಾಗರದಂತೆ ಬಂದಿದ್ದ ಸಾಹಿತ್ಯಾಭಿಮಾನಿಗಳ ನಡುವೆ ಜೈಪುರ ಸಾಹಿತ್ಯೋತ್ಸವದ 19ನೇ ಸಂಚಿಕೆಯನ್ನು ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಉದ್ಘಾಟಿಸಿದರು. ಸಾಹಿತ್ಯಾಸಕ್ತರನ್ನು ಸ್ವಾಗತಿಸಿದ ಭಜನ್‌ಲಾಲ್ ಶರ್ಮಾ

 ಜೋಗಿ

 ಜೈಪುರ :  ಗದಗುಡುವ ಚಳಿ ನಡುವೆಯೂ ಸಾಗರದಂತೆ ಬಂದಿದ್ದ ಸಾಹಿತ್ಯಾಭಿಮಾನಿಗಳ ನಡುವೆ ಜೈಪುರ ಸಾಹಿತ್ಯೋತ್ಸವದ 19ನೇ ಸಂಚಿಕೆಯನ್ನು ರಾಜಸ್ಥಾನದ ಮುಖ್ಯಮಂತ್ರಿ ಭಜನ್‌ಲಾಲ್ ಶರ್ಮ ಉದ್ಘಾಟಿಸಿದರು. ‘ಪಧಾರೋ ಮಾರೇ ದೇಸ್’ ಎಂದು ರಾಜಾಸ್ಥಾನಿ ಜನಪದ ಗೀತೆ ಸಾಲನ್ನು ಉದ್ಗರಿಸುತ್ತಾ ಸಾಹಿತ್ಯಾಸಕ್ತರನ್ನು ಸ್ವಾಗತಿಸಿದ ಭಜನ್‌ಲಾಲ್ ಶರ್ಮಾ, ‘ಜಗತ್ತಿನ ಮೂಲೆಮೂಲೆಗಳಿಂದ ಸಾಹಿತಿಗಳೂ, ಪ್ರಾಜ್ಞರೂ ರಾಜಸ್ಥಾನಕ್ಕೆ ಬರುತ್ತಾರೆ. ಇದು ಕಲೆ ಮತ್ತು ಪಾಂಡಿತ್ಯದ ನೆಲೆ. ಮಾತು ಮತ್ತು ಚಿಂತನೆಗಳ ಸಂಗಮಸ್ಥಾನವಾಗಿರುವ ರಾಜಸ್ಥಾನ ಸಾಹಿತಿಗಳ ಪಾಲಿಗಷ್ಟೇ ಅಲ್ಲ, ಸಾಹಿತ್ಯಾಸಕ್ತರಿಗೂ ಅಚ್ಚುಮೆಚ್ಚಿನ ತಾಣ. ಸಾಹಿತ್ಯ ಮನುಷ್ಯ-ಮನುಷ್ಯರನ್ನು ಸಹಾನುಭೂತಿ ಮತ್ತು ಪ್ರೀತಿಯಿಂದ ಬೆಸೆಯುತ್ತದೆ’ ಎಂದು ಹೇಳಿದರು.

ಗುರುವಾರದಿಂದ ಐದು ದಿನ ಜೈಪುರದ ಕ್ಲಾರ್ಸ್ ಅಮೀರ್ ಹೋಟೆಲಿನ ಅಂಗಳದಲ್ಲಿ ನಡೆಯಲಿರುವ ಜೈಪುರ್ ಲಿಟ್‌ಫೆಸ್ಟ್ ಉದ್ಘಾಟನಾ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ದಿಯಾಕುಮಾರಿ, ಬುಕರ್ ಪುರಸ್ಕೃತೆ ಬಾನು ಮುಷ್ತಾಕ್, ಸಾಹಿತ್ಯೋತ್ಸವದ ನಿರ್ಮಾತೃ ಸಂಜಯ್ ಕೆ.ರಾಯ್, ಸಾಹಿತ್ಯೋತ್ಸವ ನಿರ್ದೇಶಕರಾದ ನಮಿತಾ ಗೋಖಲೆ ಮತ್ತು ವಿಲಿಯಂ ಡಾಲ್ರಿಂಪಲ್ ಪಾಲ್ಗೊಂಡಿದ್ದರು.

‘ಜೈಪುರ ಸಾಹಿತ್ಯೋತ್ಸವ ಕೇವಲ ಲೇಖಕರಿಗಷ್ಟೇ ಅಲ್ಲ, ಅದು ಎಲ್ಲರ ಉತ್ಸವ. ಜಗತ್ತಿನ ಎಲ್ಲಾ ಭಾಗಗಳಿಂದಲೂ ಬಂದವರು ಇಲ್ಲಿದ್ದಾರೆ. ಪ್ರತಿವರ್ಷವೂ ಈ ಅನುಭವಕ್ಕಾಗಿ ಅವರು ಮತ್ತೆ ಮತ್ತೆ ಬರುತ್ತಿರುತ್ತಾರೆ’ ಎಂದು ಸಂಜಯ್ ರಾಯ್ ಹೇಳಿದರು. ‘ರಾಜಸ್ತಾನಿ ಭಾಷೆಯನ್ನು ರಾಜ್ಯದ ಅಧಿಕೃತ ಆಡಳಿತ ಭಾಷೆಯೆಂದು ಘೋಷಿಸಬೇಕು’ ಎಂದು ಲೇಖಕಿ ನಮಿತಾ ಗೋಖಲೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಸಾಹಿತ್ಯ ಅಂದರೆ ಮೌನ ಕ್ರಾಂತಿ-ಬಾನು ಮುಷ್ತಾಕ್‌:

‘ಸಾಹಿತ್ಯ ಅಂದರೆ ಮೌನವಾಗಿ ನಡೆಸುವ ಸಾಮಾಜಿಕ ಚಳವಳಿ. ಅಲ್ಲಿ ಘೋಷಣೆ, ಘರ್ಜನೆ, ಸಂಘರ್ಷಗಳು ಇರುವುದಿಲ್ಲ, ಬದಲಾಗಿ ಏಕಾಂಗಿ ಹೋರಾಟ ಇರುತ್ತದೆ’ ಎಂದು ಬುಕರ್ ಪುರಸ್ಕೃತೆ ಬಾನು ಮುಷ್ತಾಕ್ ಅಭಿಪ್ರಾಯಪಟ್ಟರು. ಅವರು ಜೈಪುರ ಸಾಹಿತ್ಯೋತ್ಸವದ 19ನೇ ಸಂಚಿಕೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಆಶಯ ನುಡಿಗಳನ್ನಾಡಿದರು.

‘ನಮ್ಮ ಬಹುದೊಡ್ಡ ಸಾಮಾಜಿಕ ಬದಲಾವಣೆಗಳು ನಡೆದದ್ದು ದೊಡ್ಡ ದನಿಯಲ್ಲಿ ಅಬ್ಬರಿಸಿದ್ದರಿಂದ ಅಲ್ಲವೇ ಅಲ್ಲ. ಅವೆಲ್ಲ ಮೌನಕ್ರಾಂತಿಗಳು. ಒಂದು ವಾಕ್ಯದ ಚಳವಳಿಗಳು. ಪ್ರಜ್ಞಾಪೂರ್ವಕ ಕೈಗೊಂಡ ನಿರ್ಧಾರಗಳ ಪರಿಣಾಮ’ ಎಂದು ಬಾನು ಹೇಳಿದರು.

‘ಲೇಖಕ ಬೀದಿಯಲ್ಲಿ ನಿಂತು ಕೂಗಾಡುವ ಅಗತ್ಯ ಇಲ್ಲ. ಆತ ತಾನು ಬರೆಯುವ ವಾಕ್ಯಗಳ ನಡುವೆ ನಿಂತು ಗಟ್ಟಿದನಿಯಲ್ಲಿ ಮಾತಾಡಬೇಕು. ಸತ್ಯ ಹೇಳುವ ತನಕ ತನ್ನ ಹಾದಿಬಿಟ್ಟು ಕದಲಬಾರದು. ಎಲ್ಲಾ ದೇಶ-ಕಾಲಗಳಲ್ಲೂ ಲೇಖಕರು ತನ್ನ ಕಾಲದ ನೈತಿಕ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಜಾತಿ, ಜನಾಂಗೀಯ ದ್ವೇಷ, ಪುರುಷ ಪ್ರಾಧಾನ್ಯ, ವಸಾಹತುಶಾಹಿ, ಧಾರ್ಮಿಕ ದ್ವೇಷ ಮುಂತಾದ ಅಸಮಾನತೆ ವಿರುದ್ಧ ಸಿಡಿದೆದ್ದಿದ್ದಾರೆ. ಬಡತನ ಮತ್ತು ಕಡೆಗಣಿಸುವಿಕೆಯನ್ನು ಪ್ರತಿಭಟಿಸಿದ್ದಾರೆ. ಅದಕ್ಕಾಗಿ ಸಾಕಷ್ಟು ವೈಯಕ್ತಿಕ ತೊಂದರೆಗಳನ್ನೂ ಎದುರಿಸಿದ್ದಾರೆ. ಅಂಥವರಿಗೆ ದೇಶಭ್ರಷ್ಟತೆ, ಏಕಾಂತ, ಸಾವಿನಂಥ ಶಿಕ್ಷೆಗಳನ್ನೂ ಕೊಡಲಾಗಿದೆ. ಆದರೂ ಲೇಖಕರು ತಮ್ಮ ದಾರಿಯಿಂದ ಹಿಂದೆ ಸರಿದಿಲ್ಲ’ ಎಂದು ಬಾನು ಹೇಳಿದರು.

‘ವಾಸ್ತವವನ್ನು ವಿಜೃಂಭಿಸುವುದು ಲೇಖಕರ ಉದ್ದೇಶ ಆಗಬಾರದು. ಅವರು ವಾಸ್ತವವನ್ನು ಶೋಧಿಸುವ ಕೆಲಸ ಮಾಡಬೇಕು. ಸಾಮಾಜಿಕ ಅಸಮಾನತೆ, ಲಿಂಗಾಧಾರಿತ ಮೇಲು-ಕೀಳು, ಜಾತಿ ಮತ್ತು ನಂಬಿಕೆಗಳ ಹೆಸರಲ್ಲಿ ಪರಸ್ಪರರ ನಡುವೆ ಕಂದರ ಇರುವಾಗ ಲೇಖಕ ಇದಕ್ಕೂ ತನಗೂ ಸಂಬಂಧ ಇಲ್ಲ ಎಂಬಂತೆ ಬರೆಯುವುದಕ್ಕೆ ಸಾಧ್ಯವೇ ಇಲ್ಲ. ಲೇಖಕರು ದಂತಗೋಪುರದಲ್ಲಿ ವಾಸಮಾಡಬಾರದು. ಕಟಕಟೆಯಲ್ಲಿ ತಮ್ಮನ್ನು ನಿಲ್ಲಿಸಿಕೊಂಡು ಪ್ರಶ್ನೆಗಳಿಗೆ ತುತ್ತಾಗಬೇಕು, ಪಾಟೀಸವಾಲು ಎದುರಿಸಬೇಕು. ಬರವಣಿಗೆ ಪ್ರಣಾಳಿಕೆ ಅಥವಾ ಘೋಷಣೆಗಳಲ್ಲ. ಅವು ಮಾರುವೇಷದಲ್ಲಿರುವ ಕತೆಗಳು. ಕತೆ ಕಾದಂಬರಿಗಳ ಕೆಲಸ ಪರಿಹಾರ ನೀಡುವುದಲ್ಲ, ಅಪಾಯಕಾರಿ ಪ್ರಶ್ನೆಗಳನ್ನು ಕೇಳುವುದು’ ಎಂದು ಅವರು ಅಭಿಪ್ರಾಯಪಟ್ಟರು.

ಜಾವೆದ್ ಅಖ್ತರ್, ಸುಧಾ ಮೂರ್ತಿ, ವೀರ್ ದಾಸ್, ಕಿರಣ್ ದೇಸಾಯಿ, ವಿಶ್ವನಾಥನ್ ಆನಂದ್, ಜಿಮ್ಮಿ ವೇಲ್ಸ್, ಡಿ.ವೈ. ಚಂದ್ರಚೂಡ, ಎಸ್ತರ್ ಡಫ್ಲೋ, ಗೌರ್ ಗೋಪಾಲ್ ದಾಸ್, ವಿವೇಕ ಶಾನಭಾಗ ಮುಂತಾದ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದರು.

ಮೊದಲು ಗೋಷ್ಠಿ, ನಂತರ ಉದ್ಘಾಟನೆ

ರಾಜಸ್ಥಾನ ಗುರುವಾರ ಸೈನಿಕ ದಿನಾಚರಣೆಯ ಸಂಭ್ರಮದಲ್ಲಿತ್ತು. ಇದರಿಂದಾಗಿ ಉದ್ಘಾಟನೆಗೆ ಬರಬೇಕಾದ ಅತಿಥಿಗಳು ತಡವಾಗಿ ಬಂದರು. ಹೀಗಾಗಿ ಮೊದಲು ಬಾನು ಮುಷ್ತಾಕ್ ಜತೆಗಿನ ಸಂವಾದ ನಡೆಸಲಾಯಿತು. ನಂತರ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಇದರಿಂದಾಗಿ ಅನೇಕ ಸಾಹಿತ್ಯಗೋಷ್ಠಿಗಳ ಸಮಯ ಏರುಪೇರಾಯಿತು. ಜೈಪುರ ಸಾಹಿತ್ಯೋತ್ಸವದ 18 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಈ ಬಗೆಯ ಗೊಂದಲ ಕಂಡುಬಂದಿದೆ ಎಂದು ಸಂಜಯ್ ರಾಯ್ ಹೇಳಿ, ಸಹೃದಯರ ಕ್ಷಮೆ ಯಾಚಿಸಿದರು.

ಮೈಸೂರು ದಸರಾ ಉದ್ಘಾಟನೆಯ ಗೊಂದಲ

ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ವಿದೇಶದಿಂದ ಬಂದಿದ್ದ ಸಭಿಕರೊಬ್ಬರು ಬಾನು ಮುಷ್ತಾಕ್ ಅವರನ್ನು ಮೈಸೂರು ದಸರಾ ಉದ್ಘಾಟನೆ ಸಂದರ್ಭದಲ್ಲಿ ನಡೆದ ಗೊಂದಲಗಳ ಬಗ್ಗೆ ಪ್ರಶ್ನೆ ಕೇಳಿದರು. ಬಾನು ಮುಷ್ತಾಕ್ ಆ ದಿನಗಳಲ್ಲಿ ತನಗೆ ಎದುರಾದ ಸಮಸ್ಯೆಗಳನ್ನು ತೆರೆದಿಟ್ಟು, ಸಾಮಾಜಿಕ ಜಾಲತಾಣಗಳು ತನ್ನನ್ನು ಹಿಂಸಿಸಿದ ರೀತಿ ವಿವರಿಸಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಮಸ್ಕತ್ ತಲುಪಿದ ಎಂಜಿನ್‌ ಇಲ್ಲದ ಭಾರತದ ನೌಕೆ!
ಮುಂಬೈ ಪಾಲಿಕೆ ಚುನಾವಣೆಯಲ್ಲಿ ಅಳಿಸದ ಇಂಕ್‌ ಅಳಿಸಿದ ವಿವಾದ