ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಯಮ್ಮದ್‌ ಮುಯಿಜುನಿಂದ ಈಗ ಪ್ರಶಂಸೆ

KannadaprabhaNewsNetwork |  
Published : Aug 11, 2024, 01:38 AM ISTUpdated : Aug 11, 2024, 04:27 AM IST
ಮುಯಿಜು | Kannada Prabha

ಸಾರಾಂಶ

ಚೀನಾ ಬಗ್ಗೆ ಒಲವು ಹೊಂದಿರುವ ಕಾರಣಕ್ಕೆ ಪದಗ್ರಹಣ ಮಾಡಿದಾಗಿನಿಂದಲೂ ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಯಮ್ಮದ್‌ ಮುಯಿಜು ಈಗ ಭಾರತವನ್ನು ಹಾಡಿ ಹೊಗಳಿದ್ದಾರೆ.

 ಮಾಲೆ :  ಚೀನಾ ಬಗ್ಗೆ ಒಲವು ಹೊಂದಿರುವ ಕಾರಣಕ್ಕೆ ಪದಗ್ರಹಣ ಮಾಡಿದಾಗಿನಿಂದಲೂ ಭಾರತದ ವಿರುದ್ಧ ದ್ವೇಷ ಕಾರುತ್ತಿದ್ದ ಮಾಲ್ಡೀವ್ಸ್‌ ಅಧ್ಯಕ್ಷ ಮೊಯಮ್ಮದ್‌ ಮುಯಿಜು ಈಗ ಭಾರತವನ್ನು ಹಾಡಿ ಹೊಗಳಿದ್ದಾರೆ. ಭಾರತ ಯಾವತ್ತಿಗೂ ನಮ್ಮ ಪರಮಾಪ್ತ ಮಿತ್ರ ರಾಷ್ಟ್ರಗಳಲ್ಲಿ ಒಂದಾಗಿದೆ. ಬೆಲೆ ಕಟ್ಟಲಾಗದ ಪಾಲುದಾರನಾಗಿದೆ. ನಮಗೆ ಅವಶ್ಯ ಬಿದ್ದಾಗಲೆಲ್ಲಾ ನೆರವು ಕೊಡುತ್ತಾ ಬಂದಿದೆ ಎಂದು ಬಣ್ಣಿಸಿದ್ದಾರೆ.

ಮುಯಿಜು 2023ರ ನವೆಂಬರ್‌ನಲ್ಲಿ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಅವರ ಜತೆ ದ್ವಿಪಕ್ಷೀಯ ಮಾತುಕತೆ ನಡೆಸಲು ಭಾರತದ ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಮಾಲ್ಡೀವ್ಸ್‌ಗೆ ಬಂದಿಳಿದಿದ್ದಾರೆ. ಶನಿವಾರ ಮುಯಿಜು ಅವರನ್ನು ಶನಿವಾರ ಭೇಟಿ ಮಾಡಿದ ಅವರು, ಭಾರತ- ಮಾಲ್ಡೀವ್ಸ್‌ ಸಂಬಂಧವನ್ನು ಮತ್ತಷ್ಟು ತೀವ್ರಗೊಳಿಸುವ ಬದ್ಧತೆಯನ್ನು ವ್ಯಕ್ತಪಡಿಸಿದರು.

ಇದಾದ ಬೆನ್ನಲ್ಲೇ, ಭಾರತದ ನೆರವಿನೊಂದಿಗೆ ಮಾಲ್ಡೀವ್ಸ್‌ನ 28 ದ್ವೀಪ ಪ್ರದೇಶಗಳಲ್ಲಿ ನಿರ್ಮಿಸಲಾಗಿರುವ ನೀರು ಸರಬರಾಜು ಹಾಗೂ ಒಳಚರಂಡಿ ಘಟಕಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಮುಯಿಜು ಅವರು ಭಾರತವನ್ನು ಹೊಗಳಿದರು. ಅಲ್ಲದೆ, ಭಾರತ ಹಾಗೂ ಮಾಲ್ಡೀವ್ಸ್‌ ನಡುವಣ ಐತಿಹಾಸಿಕ ಸಂಬಂಧವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಸಂಪೂರ್ಣ ಬದ್ಧತೆ ಹೊಂದಿರುವುದಾಗಿ ಘೋಷಿಸಿದರು.

ಮಾಲ್ಡೀವ್ಸ್‌ನಲ್ಲೂ ಇನ್ನು ಯುಪಿಐ ಮಾಡಿ

 ಮಾಲೆ ಭಾರತದಲ್ಲಿ ಬಲು ಜನಪ್ರಿಯವಾಗಿರುವ ಯುಪಿಐ ಸೇವೆ ಇದೀಗ ದ್ವೀಪರಾಷ್ಟ್ರ ಮಾಲ್ಡೀವ್ಸ್‌ನಲ್ಲೂ ಲಭ್ಯವಾಗಲಿದೆ. ಈ ಸಂಬಂಧ ಭಾರತ ಹಾಗೂ ಮಾಲ್ಡೀವ್ಸ್‌ ನಡುವೆ ಶನಿವಾರ ಒಪ್ಪಂದವೇರ್ಪಟ್ಟಿದೆ.ಬ್ಯಾಂಕ್‌ ಖಾತೆಗಳ ನಡುವೆ ತ್ವರಿತವಾಗಿ ಹಣ ವರ್ಗಾವಣೆಗಾಗಿ ಭಾರತೀಯ ರಾಷ್ಟ್ರೀಯ ಪೇಮೆಂಟ್‌ ಕಾರ್ಪೋರೇಷನ್‌ (ಎನ್‌ಪಿಸಿಐ) ಅಭಿವೃದ್ಧಿಪಡಿಸಿರುವ ಸೌಲಭ್ಯವೇ ಯುಪಿಐ (ಯುನಿಫೈಡ್‌ ಪೇಮೆಂಟ್ಸ್‌ ಇಂಟರ್‌ಫೇಸ್‌). ಕಳೆದ 8 ವರ್ಷಗಳಿಂದ ಇದು ಭಾರತದಲ್ಲಿ ಕ್ರಾಂತಿ ಮಾಡಿದೆ. ಈಗಾಗಲೇ ವಿಶ್ವದ 7 ದೇಶಗಳಲ್ಲಿ ಈ ಸೇವೆ ಲಭ್ಯವಿದ್ದು, ಮಾಲ್ಡೀವ್ಸ್‌ 8ನೇ ದೇಶವಾಗಿದೆ. ಯುಎಇ, ಶ್ರೀಲಂಕಾ, ಸಿಂಗಾಪುರ, ನೇಪಾಳ, ಮಾರಿಷಸ್‌, ಫ್ರಾನ್ಸ್‌ ಹಾಗೂ ಭೂತಾನ್‌ನಲ್ಲಿ ಯುಪಿಐ ಸೇವೆ ಸಿಗುತ್ತಿದೆ.

ಮೊಹಮ್ಮದ್ ಮುಯಿಜು ಅವರು ಮಾಲ್ಡೀವ್ಸ್‌ ಅಧ್ಯಕ್ಷರಾದ ಬಳಿಕ ಇದೇ ಮೊದಲ ಬಾರಿಗೆ ಆ ದೇಶದ ಪ್ರವಾಸ ಕೈಗೊಂಡಿರುವ ವಿದೇಶಾಂಗ ಸಚಿವ ಜೈಶಂಕರ್‌ ಸಮ್ಮುಖ ಮಾಲ್ಡೀವ್ಸ್‌ನಲ್ಲಿ ಯುಪಿಐ ಸೇವೆ ಆರಂಭಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು.ಇದರಿಂದಾಗಿ ಮಾಲ್ಡೀವ್ಸ್‌ನ ಪ್ರವಾಸೋದ್ಯಮ ಕ್ಷೇತ್ರದ ಮೇಲೆ ಧನಾತ್ಮಕ ಬದಲಾವಣೆಯಾಗಲಿದೆ. ವಿಶ್ವದ ಶೇ.40ರಷ್ಟು ತಕ್ಷಣದ ಡಿಜಿಟಲ್‌ ಪಾವತಿಗಳು ಭಾರತದಲ್ಲೇ ಆಗುತ್ತಿವೆ. ಇದನ್ನು ನಾವು ಕ್ರಾಂತಿಯಾಗಿ ನೋಡುತ್ತೇವೆ. ಈ ಒಪ್ಪಂದದ ಮೂಲಕ ಡಿಜಿಟಲ್‌ ನಾವೀನ್ಯತೆಯನ್ನು ಮಾಲ್ಡೀವ್ಸ್‌ಗೂ ಪರಿಚಯಿಸಿದ್ದೇವೆ ಎಂದು ಜೈಶಂಕರ್‌ ಈ ವೇಳೆ ಹೇಳಿದರು.

ನೈರ್ಮಲೀಕರಣ ಯೋಜನೆ: ಭಾರತ 110 ದಶಲಕ್ಷ ಡಾಲರ್‌ ನೆರವು ನೀಡಿರುವ ನೀರು ಮತ್ತು ನೈರ್ಮಲೀಕರಣ ಯೋಜನೆಯನ್ನೂ ಜೈಶಂಕರ್ ಅವರು ಮಾಲ್ಡೀವ್ಸ್‌ಗೆ ಹಸ್ತಾಂತರಿಸಿದರು. ಇದರಿಂದ ಮಾಲ್ಡೀವ್ಸ್‌ನ ಶೇ.28ರಷ್ಟು ಭೂಭಾಗದ ಶೇ.7 ಜನರಿಗೆ ನೆರವಾಗಲಿದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ಇಸ್ರೋ ಹೊಸ ಮೈಲುಗಲ್ಲು-6100 ಕೆಜಿ ತೂಕದ ಉಪಗ್ರಹ 15 ನಿಮಿಷದಲ್ಲಿ ಕಕ್ಷೆಗೆ
ಶತ್ರು- ಮಿತ್ರರಿಗೆ ಮಹಾ ಸಹೋದರರ ಸವಾಲ್‌!