ಇಂಫಾಲ: ರಾಷ್ಟ್ರಮಟ್ಟದಲ್ಲಿನ ಎನ್‌ಡಿಎ ಅಂಗಪಕ್ಷವಾದ ಜೆಡಿಯು, ಮಣಿಪುರದ ಬಿಜೆಪಿ ನೇತೃತ್ವದ ಬಿರೇನ್ ಸಿಂಗ್ ಸರ್ಕಾರಕ್ಕೆ ತನ್ನ ಬೆಂಬಲವನ್ನು ಹಿಂತೆಗೆದುಕೊಂಡು, ನಂತರ ಮತ್ತೆ ಬೆಂಬಲ ನೀಡುತ್ತೇವೆ ಎಂದು ಹೇಳಿದ ಹೈಡ್ರಾಮಾ ನಡೆದಿದೆ.
ಬೆಂಬಲ ಹಿಂಪಡೆದಿದ್ದೇವೆ ಎಂದು ಮಣಿಪುರ ಜೆಡಿಯು ಅಧ್ಯಕ್ಷ ‘ಕ್ಷ’ ಬಿರೇನ್ ಸಿಂಗ್ ಮೊದಲು ಪ್ರಕಟಿಸಿದ್ದರು. ಆದರೆ ಇದರ ಬೆನ್ನಲ್ಲೆ, ’ಬೆಂಬಲವನ್ನು ಹಿಂತೆಗೆದುಕೊಂಡಿಲ್ಲ’ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ರಾಷ್ಟ್ರೀಯ ಹೈಕಮಾಂಡ್ ಸ್ಪಷ್ಟಪಡಿಸಿದೆ ಹಾಗೂ ಏಕಪಕ್ಷೀಯ ನಿರ್ಧಾರ ತೆಗದುಕೊಂಡ ‘ಕ್ಷ’ ಬಿರೇನ್ ಸಿಂಗ್ ಅವರನ್ನು ವಜಾ ಮಾಡಿದೆ.ಆಗಿದ್ದೇನು?:
ಇದು ದೇಶಮಟ್ಟದಲ್ಲಿ ಸುದ್ದಿ ಮಾಡಿ, ಬಿಜೆಪಿ-ನಿತೀಶ್ ಸಂಬಂಧ ಹಳಸಿದೆ ಎಂದು ಪ್ರತಿಪಕ್ಷಗಳು ಟೀಕಿಸತೊಡಗಿದವು. ಆಗ ‘ಕ್ಷ’ ಸಿಂಗ್ ಅವರ ನಿರ್ಧಾರಕ್ಕೆ ಕೆಂಡಾಮಂಡಲವಾದ ಜೆಡಿಯು ಹೈಕಮಾಂಡ್, ‘ನಮ್ಮನ್ನು ಕೇಳದೇ ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿದ್ದಾರೆ’ ಎಂದು ಹೇಳಿ ಅವರನ್ನು ಸ್ಥಾನದಿಂದ ವಜಾಗೊಳಿಸಿದೆ.
ಈ ಕುರಿತು ಮಾತನಾಡಿರುವ ಜೆಡಿಯು ರಾಷ್ಟ್ರೀಯ ವಕ್ತಾರ ರಾಜೀವ್ ರಂಜನ್ ಪ್ರಸಾದ್, ‘ಇದು ಮಣಿಪುರದ ಜನರನ್ನು ತಪ್ಪುದಾರಿಗೆಳೆಯುವ ನಡೆಯಾಗಿದ್ದು, ರಾಜ್ಯ ಸರ್ಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದಿರುವ ವರದಿಗಳು ಆಧಾರರಹಿತ. ಮಣಿಪುರಕ್ಕೆ ಸಂಬಂಧಿಸಿದಂತೆ ಏಕಪಕ್ಷೀಯ ನಿರ್ಧಾರ ಕೈಗೊಂಡ ಪಕ್ಷದ ಮಣಿಪುರ ಘಟಕದ ಅಧ್ಯಕ್ಷರನ್ನು ಅವರ ಸ್ಥಾನದಿಂದ ವಜಾಗೊಳಿಸಲಾಗಿದೆ. ನಾವು ಮಣಿಪುರದಲ್ಲಿ ಎನ್‌ಡಿಎಗೆ ಬೆಂಬಲ ನೀಡಿದ್ದೇವೆ ಮತ್ತು ನಮ್ಮ ಬೆಂಬಲವನ್ನು ಮುಂದುವರೆಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.