ಮುಂಬೈ: ದೇಶಾದ್ಯಂತ ಮಂಗಳವಾರ ರಿಲಯನ್ಸ್ ಜಿಯೋ ನೆಟ್‌ವರ್ಕ್ ಡೌನ್ ಆಗಿದ್ದು, ನೆಟ್‌ವರ್ಕ್ ಸಿಗದೇ ಗ್ರಾಹಕರು ಹೈರಾಣಾದರು. ಮುಂಬೈನಲ್ಲಿರುವ ರಿಲಯನ್ಸ್ ಜಿಯೋ ಡೇಟಾ ಸೆಂಟರ್‌ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ನೆಟ್‌ವರ್ಕ್ ಡೌನ್ ಆಗಲು ಪ್ರಮುಖ ಕಾರಣವಾಗಿದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಬೆಳಗ್ಗೆಯಿಂದ 10,000 ಗ್ರಾಹಕರು ನೆಟ್‌ವರ್ಕ್ ಸಮಸ್ಯೆ ಬಗ್ಗೆ ರಿಪೋರ್ಟ್ ಮಾಡಿದ್ದು, ಅದರಲ್ಲಿ ಶೇ.68ರಷ್ಟು ಮಂದಿ ನೆಟ್‌ವರ್ಕ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿದೆ ಎಂದು ರಿಪೋರ್ಟ್ ಮಾಡಿದ್ದಾರೆ. ಇನ್ನು ಶೇ.37 ರಷ್ಟು ಗ್ರಾಹಕರು ಇಂಟರ್ನೆಟ್‌ನಲ್ಲಿ ಸಮಸ್ಯೆ ಇದೆ ಎಂದು ರಿಪೋರ್ಟ್ ಮಾಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಿಯೋ ಸಂಸ್ಥೆ, ನೆಟ್‌ವರ್ಕ್‌ನಲ್ಲಿ ಸಮಸ್ಯೆ ಉಂಟಾಗಿದ್ದು ನಿಜ. ಅದನ್ನು ಈಗಾಗಲೇ ಸರಿಪಡಿಸಿದ್ದೇವೆ ಎಂದು ಹೇಳಿದೆ.
==ಮರಾಠ ಮೀಸಲಿಗೆ ಆಗ್ರಹ: ವರ್ಷದಲ್ಲಿ 6ನೇ ಬಾರಿ ಜಾರಂಗೆ ಉಪವಾಸ ಶುರು
ಛತ್ರಪತಿ ಸಂಭಾಜಿನಗರ: ಮರಾಠಾ ಸಮುದಾಯಕ್ಕೆ ಒಬಿಸಿ ವರ್ಗದ ಅಡಿಯಲ್ಲಿ ಮೀಸಲಾತಿ ಕೊಡುವಂತೆ ಕೋರಿ ಮರಾಠಾ ಕಾರ್ಯಕರ್ತ ಮನೋಜ್ ಜಾರಂಗೆ ಅನಿರ್ದಿಷ್ಟ ಉಪವಾಸ ಘೋಷಿಸಿದ್ದಾರೆ. ಆಂದೋಲನಕ್ಕಿಳಿಯುವ ಮುನ್ನ ಪತ್ರಕರ್ತರೊಂದಿಗೆ ಮಾತನಾಡಿದ ಜಾರಂಗೆ, ‘ಮಹಾರಾಷ್ಟ್ರ ಸರ್ಕಾರ ಉದ್ದೇಶಪೂರ್ವಕವಾಗಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಕೊಡುತ್ತಿಲ್ಲ. ಈ ಸಮಸ್ಯೆಯನ್ನು ಬಗೆಹರಿಸಲು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರಿಗೆ ಇನ್ನೊಂದು ಅವಕಾಶ ಕೊಡುತ್ತಿದ್ದೇವೆ. ನಮ್ಮ ಬೇಡಿಕೆಯನ್ನು ಈಡೇರಿಸದಿದ್ದರೆ ಆಡಳಿತ ಪಕ್ಷವು ಮುಂದಿನ ಚುನಾವಣೆಯಲ್ಲಿ ಅದರ ಫಲ ಅನುಭವಿಸಲಿದೆ’ ಎಂದು ಎಚ್ಚರಿಸಿದರು. ಇದು ಈ ವರ್ಷ ಅವರು ನಡೆಸುತ್ತಿರುವ 6ನೇ ಉಪವಾಸ ಸತ್ಯಾಗ್ರಹ.
==ಬೇಸಿಗೆಯಲ್ಲಿ ಕೋಟು, ಗೌನ್ ಮುಕ್ತಿ ಕೋರಿದ್ದ ಸುಪ್ರೀಂ ವಕೀಲರ ಅರ್ಜಿ ವಜಾ
ನವದೆಹಲಿ: ಬೇಸಿಗೆಯಲ್ಲಿ ಕಪ್ಪು ಕೋಟು ಮತ್ತು ಗೌನ್ ಧರಿಸುವುದರಿಂದ ವಕೀಲರಿಗೆ ವಿನಾಯಿತಿ ನೀಡಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ‘ಇದು ಸಭ್ಯತೆಗೆ ಸಂಬಂಧಿಸಿದ ವಿಷಯವಾಗಿದ್ದು, ವಕೀಲರು ಸರಿಯಾದ ವಸ್ತ್ರವನ್ನು ಧರಿಸಬೇಕು. ಕುರ್ತಾ ಪೈಜಾಮಾ, ಶಾರ್ಟ್ಸ್ ಟೀ-ಶರ್ಟ್ ಧರಿಸಿ ವಾದ ಮಂಡಿಸಲು ಸಾಧ್ಯವಿಲ್ಲ’ ಎಂದು ಮುಖ್ಯ ನ್ಯಾ। ಡಿ.ವೈ. ಚಂದ್ರಚೂಡ್, ನ್ಯಾ। ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ಪೀಠ ಹೇಳಿದೆ. ಅಲ್ಲದೆ ಇಂಥ ವಸ್ತ್ರ ಬದಲಾವಣೆ ಕುರಿತು ಬಾರ್ ಕೌನ್ಸಿಲ್ ಆಫ್ ಇಂಡಿಯಾ, ರಾಜ್ಯ ಬಾರ್ ಕೌನ್ಸಿಲ್ ಮತ್ತು ಕೇಂದ್ರಕ್ಕೆ ಮನವಿ ಮಾಡುವಂತೆ ಅರ್ಜಿದಾರರಿಗೆ ಪೀಠ ಸೂಚಿಸಿದೆ.
==ಬೂಕರ್ ಪ್ರಶಸ್ತಿಗೆ 6 ಜನರ ಅಂತಿಮ ಪಟ್ಟಿ: ಪಟ್ಟೀಲಿ 5 ಸ್ತ್ರೀಯರು
ಲಂಡನ್: ಇಂಗ್ಲಿಷ್ ಭಾಷೆಯಲ್ಲಿ ರಚನೆಯಾಗುವ ಉತ್ತಮ ಸಾಹಿತ್ಯಕ್ಕೆ ನೀಡಲಾಗುವ ಪ್ರತಿಷ್ಠಿತ ಬೂಕರ್ ಪ್ರಶಸ್ತಿಯ ಅಂತಿಮ ಸುತ್ತಿಗೆ ಪ್ರವೇಶ ಪಡೆದ 6 ಜನರ ಹೆಸರು ಪ್ರಕಟಿಸಲಾಗಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಪಟ್ಟಿಯಲ್ಲಿ ಐವರು ಮಹಿಳೆಯರು ಸ್ಥಾನ ಪಡೆದಿದ್ದಾರೆ. ವಿಜೇತರ ಹೆಸರು ನ.12ರಂದು ಪ್ರಕಟವಾಗಲಿದೆ. ಪೆರ್ಸಿವಲ್ ಎವೆರೆಟ್‌ರ ‘ಜೇಮ್ಸ್’, ಸಮಂತಾ ಹಾರ್ವೇ ಅವರ ‘ಆರ್ಬಿಟಲ್’, ಯೇಲ್ ವ್ಯಾನ್ ಡೆರ್ ವುಡೆನ್ ಅವರ ‘ದಿ ಸೇಫ್‌ಕೀಪ್’, ಷಾರ್ಲೆಟ್ ವುಡ್ ಅವರ ‘ಸ್ಟೋನ್ ಯಾರ್ಡ್ ಡಿವೋಷನ್’, ರಾಚೆಲ್ ಕುಶ್ನರ್ ಅವರ ‘ಕ್ರಿಯೇಷನ್ ಲೇಕ್’ ಮತ್ತು ಆ್ಯನ್ನೆ ಅವರ ‘ಹೆಲ್ಡ್’ ಪುಸ್ತಕಗಳು ಅಂತಿಮ ಪಟ್ಟಿಗೆ ಆಯ್ಕೆಯಾಗಿವೆ.
==ಆಗಸ್ಟ್‌ನಲ್ಲಿ 83000 ಕೋಟಿ ಮೊತ್ತದ ಚಿನ್ನದ ಆಮದು: ಕಳೆದ ವರ್ಷಕ್ಕಿಂತ ದ್ವಿಗುಣ
ನವದೆಹಲಿ: ಕಳೆದ ಆಗಸ್ಟ್ ತಿಂಗಳಿನಲ್ಲಿ ಭಾರತ 100 ಶತಕೋಟಿ ಡಾಲರ್ (83000 ಕೋಟಿ ರು.) ಮೊತ್ತದ ಚಿನ್ನ ಆಮದು ಮಾಡಿಕೊಂಡಿದೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಚಿನ್ನ ಆಮದು ಪ್ರಮಾಣ ದ್ವಿಗುಣಗೊಂಡಿದೆ. ಚಿನ್ನದ ಆಮದು ಸುಂಕ ಕಡಿತ ಮಾಡಿರುವುದು ಮತ್ತು ಸಾಲುಸಾಲು ಹಬ್ಬದ ದಿನಗಳ ಹಿನ್ನೆಲೆಯಲ್ಲಿ ಬೇಡಿಕೆ ಹೆಚ್ಚಾದ ಕಾರಣ, ದಾಖಲೆ ಪ್ರಮಾಣದ ಚಿನ್ನ ಆಮದಾಗಿದೆ. ನರೇಂದ್ರ ಮೋದಿ 3.0 ಸರ್ಕಾರದ ಮೊದಲ ಬಜೆಟ್‌ನಲ್ಲಿ ಚಿನ್ನದ ಮೇಲಿನ ಅಮದು ಸುಂಕವನ್ನು ಶೇ.15ರಿಂದ 6 ಗೆ ಕಡಿಮೆ ಮಾಡಿತ್ತು. ಇದರಿಂದ ಚಿನ್ನದ ಬೆಲೆ ಕೊಂಚ ಇಳಿಕೆ ಕಂಡಿತ್ತು.