ಶಿಂಧೆ, ಅಜಿತ್ ಬಣ ಸೇರಿ: ಪವಾರ್, ಉದ್ಧವ್‌ಗೆ ಮೋದಿ ಆಹ್ವಾನ

KannadaprabhaNewsNetwork | Updated : May 11 2024, 08:40 AM IST

ಸಾರಾಂಶ

‘ಕಾಂಗ್ರೆಸ್ ಪಕ್ಷದ ಜೊತೆಗೆ ವಿಲೀನಗೊಂಡು ‘ಸಾಯುವ ಬದಲು’ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರ ಎನ್‌ಸಿಪಿ ಹಾಗೂ ಶಿವಸೇನೆಗಳನ್ನು ಸೇರಿಕೊಳ್ಳುವಂತೆ, ಎನ್‌ಸಿಪಿ (ಎಸ್‌ಸಿಪಿ) ನಾಯಕ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

ನಂದೂರ್ಬಾರ್‌ (ಮಹಾರಾಷ್ಟ್ರ): ‘ಕಾಂಗ್ರೆಸ್ ಪಕ್ಷದ ಜೊತೆಗೆ ವಿಲೀನಗೊಂಡು ‘ಸಾಯುವ ಬದಲು’ ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಅವರ ಎನ್‌ಸಿಪಿ ಹಾಗೂ ಶಿವಸೇನೆಗಳನ್ನು ಸೇರಿಕೊಳ್ಳುವಂತೆ, ಎನ್‌ಸಿಪಿ (ಎಸ್‌ಸಿಪಿ) ನಾಯಕ ಶರದ್ ಪವಾರ್ ಮತ್ತು ಶಿವಸೇನಾ (ಯುಬಿಟಿ) ನಾಯಕ ಉದ್ಧವ್ ಠಾಕ್ರೆಗೆ ಪ್ರಧಾನಿ ನರೇಂದ್ರ ಮೋದಿ ಸಲಹೆ ನೀಡಿದ್ದಾರೆ.

‘ಮುಂದಿನ ಎರಡು ವರ್ಷಗಳಲ್ಲಿ ಹಲವು ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ ಜೊತೆಗೆ ನಿಕಟ ಸಂಬಂಧವನ್ನು ಹೊಂದಲಿವೆ. ಅಥವಾ ಅವರು ತಮ್ಮ ಪಕ್ಷಕ್ಕೆ ಉತ್ತಮ ಎಂದು ಭಾವಿಸಿದರೆ ಕಾಂಗ್ರೆಸ್ ಜೊತೆಗೆ ವಿಲೀನಗೊಳ್ಳುವ ಆಯ್ಕೆಯನ್ನು ಪರಿಶೀಲಿಸಬಹುದು’ ಎಂದು ಇತ್ತೀಚಿಗಷ್ಟೇ ಶರದ್ ಪವಾರ್ ಹೇಳಿಕೆ ನೀಡಿದ್ದರು. ಇದಕ್ಕೆ ಈಗ ಮೋದಿ ಪ್ರತಿಕ್ರಿಯಿಸಿದ್ದು, ಹೆಸರು ಹೇಳದೆಯೇ ಪರೋಕ್ಷವಾಗಿ ಶರದ್ ಪವಾರ್ ಮತ್ತು ಉದ್ದವ್ ಠಾಕ್ರೆಗೆ ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದ ನಂದೂರ್‌ಬಾರ್‌ನಲ್ಲಿ ಬಿಜೆಪಿ ಸಮಾವೇಶ ಉದ್ದೇಶಿಸಿ ಶುಕ್ರವಾರ ಮಾತನಾಡಿದ ಮೋದಿ, ‘40-50 ವರ್ಷಗಳಿಂದ ರಾಜಕೀಯದಲ್ಲಿ ತೊಡಗಿಕೊಂಡಿರುವ ನಾಯಕರೊಬ್ಬರು (ಶರದ್‌ ಪವಾರ್) ಬಾರಾಮತಿ ಕ್ಷೇತ್ರದ ಚುನಾವಣೆ ಬಳಿಕ ಚಿಂತಿತರಾಗಿದ್ದಾರೆ. ಸಣ್ಣ ರಾಜಕೀಯ ಪಕ್ಷಗಳು ಉಳಿಯಬೇಕೆಂದರೆ ಜೂನ್ 4ರ ಬಳಿಕ ಕಾಂಗ್ರೆಸ್ ಪಕ್ಷದ ಜೊತೆ ವಿಲೀನಗೊಳ್ಳಬೇಕೆಂದು ಹೇಳುತ್ತಾರೆ. ಇದರ ಅರ್ಥ ನಕಲಿ ಎನ್‌ಸಿಪಿ ಮತ್ತು ನಕಲಿ ಶಿವಸೇನೆ ಕಾಂಗ್ರೆಸ್ ಜೊತೆ ವಿಲೀನವಾಗುವುದಕ್ಕೆ ಸಿದ್ಧಗೊಂಡಿವೆ. ಕಾಂಗ್ರೆಸ್ ಜೊತೆ ಸೇರಿಕೊಂಡು ‘ಸಾಯುವ’ ಬದಲು ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ಬಣವನ್ನು ಸೇರಿಕೊಳ್ಳಿ’ ಎಂದು ಪವಾರ್‌ ಹಾಗೂ ಉದ್ಧವ್‌ಗೆ ಚಾಟಿ ಬೀಸಿದರು.

ಕಾಂಗ್ರೆಸ್‌ ಹಿಂದೂ ವಿರೋಧಿ: ಮೋದಿ ಕಿಡಿ

ಕಡಪಾ/ನಂದೂರ್ಬಾರ್‌: ಕಾಂಗ್ರೆಸ್‌ ಪಕ್ಷ ಹಿಂದೂ ವಿರೋಧಿ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ.

ಮಹಾರಾಷ್ಟ್ರದ ನಂದೂರ್ಬಾರ್ ಹಾಗೂ ತೆಲಂಗಾಣದ ಕಡಪಾದಲ್ಲಿ ಬಿಜೆಪಿ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮುಖಂಡ ಸ್ಯಾಮ್ ಪಿತ್ರೋಡಾ ರಾಮಮಂದಿರದ ಬಗ್ಗೆ ನೀಡಿದ್ದ ಹೇಳಿಕೆಯನ್ನು ಉಲ್ಲೇಖಿಸಿ, ‘ಕಾಂಗ್ರೆಸ್ ಹಿಂದೂ ಧರ್ಮವನ್ನು ಕೊನೆಗಾಣಿಸಲು ಪಿತೂರಿ ನಡೆಸುತ್ತಿದೆ. ಕೃಷ್ಣನ ವರ್ಣದವರನ್ನು ಆಫ್ರಿಕನ್ನರು ಎಂದು ಕರೆಯುತ್ತಾರೆ. ರಾಮ ಮಂದಿರ ಮತ್ತು ರಾಮನವಮಿ ವಿಚಾರದಲ್ಲಿ ಕಾಂಗ್ರೆಸ್ ಅಜೆಂಡಾ ಅಪಾಯಕಾರಿಯಾಗಿದೆ. ಕಾಂಗ್ರೆಸ್ ಭಾರತ ವಿರೋಧಿ ಮನಸ್ಥಿತಿ ಹೊಂದಿದೆ. ಸರ್ಕಾರಿ ಇಫ್ತಾರ್‌ಗಳನ್ನು ಆಯೋಜಿಸುತ್ತಾರೆ. ಭಯೋತ್ಪಾದಕರ ಸಮಾಧಿಗಳನ್ನು ಅಲಂಕರಿಸುತ್ತಾರೆ’ ಎಂದು ಗುಡುಗಿದರು.

Share this article