ನವದೆಹಲಿ: ಪ್ರಯಾಗ್‌ರಾಜ್‌ನಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಒಂದು ನಿರ್ದಿಷ್ಟ ಧರ್ಮದ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದ ಅಲಹಾಬಾದ್ ಹೈಕೋರ್ಟ್ ನ್ಯಾ। ಶೇಖರ್ ಕುಮಾರ್ ಯಾದವ್, ತಮ್ಮ ಹೇಳಿಕೆ ಕುರಿತು ವಿವರವನ್ನು ನೀಡಲು ಸುಪ್ರೀಂ ಕೋರ್ಟ್ ಕೊಲಿಜಿಯಂ ಮುಂದೆ ಹಾಜರಾಗುವ ಸಾಧ್ಯತೆಯಿದೆ.
ಡಿ.10 ರಂದು ಸುಪ್ರೀಂ ಕೋರ್ಟ್ ಈ ಘಟನೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಅಲಹಾಬಾದ್ ಹೈಕೋರ್ಟ್‌ಗೆ ಸೂಚನೆ ನೀಡಿತ್ತು. ಹೀಗಾಗಿ ತಮ್ಮ ವಿವರಣೆ ಸಲ್ಲಿಸಲು ನ್ಯಾ। ಯಾದವ್ ಕೊಲಿಜಿಯಂ ಮುಂದೆ ಶೀಘ್ರದಲ್ಲಿ ಹಾಜರಾಗಲಿದ್ದಾರೆ ಎನ್ನಲಾಗಿದೆ.
ಡಿ.8ರಂದು ನಡೆದ ಕಾರ್ಯಕ್ರಮವೊಂದರಲ್ಲಿ ನ್ಯಾ। ಯಾದವ್ ‘ಹಿಂದುಸ್ತಾನದಲ್ಲಿ ಬಹುಸಂಖ್ಯಾತರ ಇಚ್ಛೆಗಳಂತೆ ಕೆಲಸ ನಡೆಯುತ್ತದೆ. ಅದಕ್ಕೇ ಏಕರೂಪ ಸಂಹಿತೆ ಅಗತ್ಯ’ ಎಂದಿದ್ದರು ಹಾಗೂ ಒಂದು ನಿರ್ದಿಷ್ಟ ಧರ್ಮದ ಆಚರಣೆಗಳನ್ನು ಟೀಕಿಸಿದ್ದರು.