ನವದೆಹಲಿ: ಸುಪ್ರೀಂಕೋರ್ಟ್ ನೂತನ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ।ಸೂರ್ಯಕಾಂತ್ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು, ದೇಶದ 53ನೇ ಮುಖ್ಯ ನ್ಯಾಯಮೂರ್ತಿಗೆ ಗೌಪ್ಯತೆಯ ಪ್ರಮಾಣವಚನ ಬೋಧಿಸಿದರು.
ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಮಾಜಿ ಉಪರಾಷ್ಟ್ರಪತಿ ಜಗದೀಪ್ ಧನಕರ್ ಸೇರಿ ಹಲವರು ಭಾಗಿಯಾಗಿದ್ದರು. ನ್ಯಾ. ಗವಾಯ್ ನಿವೃತ್ತಿಯ ಹಿನ್ನೆಲೆಯಲ್ಲಿ ಆ ಸ್ಥಾನ ತುಂಬಿರುವ ನ್ಯಾ.ಸೂರ್ಯಕಾಂತ್ ಮುಂದಿನ 15 ತಿಂಗಳು ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ.
ಹರ್ಯಾಣ ಮೂಲದವರಾದ ನ್ಯಾ। ಸೂರ್ಯಕಾಂತ್ ಪಂಜಾಬ್, ಹರ್ಯಾಣ ಹೈಕೋರ್ಟ್ ನ್ಯಾಯಾಧೀಶರಾಗಿ, ಹಿಮಾಚಲ ಹೈಕೋರ್ಟ್ ಸಿಜೆ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.2019ರಲ್ಲಿ ಸುಪ್ರೀಂ ನ್ಯಾಯಾಧೀಶರಾಗಿ ಭಡ್ತಿ ಪಡೆದರು. ಆ ಬಳಿಕ ಅವರು 370ನೇ ವಿಧಿ ರದ್ಧತಿ, ವಾಕ್ ಸ್ವಾತಂತ್ರ್ಯ ಮತ್ತು ಪೌರತ್ವ ಕುರಿತಾದ ಹಕ್ಕುಗಳ ತೀರ್ಪು, ಒನ್ ರ್‍ಯಾಂಕ್ ಒನ್ ಪೆನ್ಷನ್ (ಒಆರ್‌ಒಪಿ) ಯೋಜನೆಯ ಸಿಂಧುತ್ವ ಎತ್ತಿಹಿಡಿದ ತೀರ್ಪಿಗೆ ಸಾಕ್ಷಿಯಾಗಿದ್ದರು.
ವಸಾಹತುಶಾಹಿ ಕಾಲದ ದೇಶದ್ರೋಹದ ಕಾನೂನಿನ ಮರುಪರಿಶೀಲನೆ, ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸೇರಿದಂತೆ ವಕೀಲರ ಸಂಘಗಳಲ್ಲಿ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಮೀಸಲಾತಿ, ಮಾತ್ರವಲ್ಲದೇ ಇತ್ತೀಚೆಗೆ ದೇಶದಲ್ಲಿ ಭಾರಿ ಸಂಚಲನಕ್ಕೆ ಕಾರಣವಾಗಿದ್ದ ವಿಶೇಷ ಮತಪಟ್ಟಿ ಪರಿಷ್ಕರಣೆಯ ಅರ್ಜಿಗಳ ವಿಚಾರಣೆಯನ್ನೂ ನಡೆಸಿದ್ದರು.