ಕಾಠ್ಮಂಡು : ಯುವಜನರ ದಂಗೆಯಿಂದ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿರುವ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಅವರು ಭಾರತ ವಿರೋಧಿ ಹಾಗೂ ಚೀನಾ ಪರವಾಗಿ ಗುರುತಿಸಿಕೊಂಡವರು. ಭಾರತದ ಜತೆಗೆ ಆತ್ಮೀಯ ಸಂಬಂಧ ಹೊಂದಿದ್ದ ನೇಪಾಳವನ್ನು ಬಹುತೇಕ ಚೀನಾದ ತೆಕ್ಕೆಯಲ್ಲಿಟ್ಟಿದ್ದೇ ಓಲಿ ಅವರ ಅತೀ ದೊಡ್ಡ ಸಾಧನೆ.
ಹಿರಿಯ ರಾಜಕಾರಣಿ, ಕಮ್ಯುನಿಸ್ಟ್ ನಾಯಕನಾಗಿರುವ ಮೂರು ಬಾರಿ ನೇಪಾಳದ ಪ್ರಧಾನಿಯಾಗಿ ಅಧಿಕಾರ ನಿರ್ವಹಿಸಿದವರು. ಮೂರನೇ ಬಾರಿ ಕೇವಲ 11 ತಿಂಗಳಷ್ಟೇ ಅಧಿಕಾರದಲ್ಲಿದ್ದರು. ನೇಪಾಳದಲ್ಲಿ ಪ್ರಧಾನಿಯಾಗಿ ಯಾರೇ ಅಧಿಕಾರಕ್ಕೆ ಬಂದರೂ ನೆರೆಯ ಭಾರತಕ್ಕೆ ಮೊದಲ ಭೇಟಿ ನೀಡುವುದು ಸಹಜ. ಆದರೆ, ಓಲಿ ಅವರು ಮೂರು ಬಾರಿ ಪ್ರಧಾನಿಯಾಗಿದ್ದರೂ ಭಾರತಕ್ಕೆ ಭೇಟಿ ನೀಡಿದ್ದು 2 ಬಾರಿ ಮಾತ್ರ. ಅದೂ 2016 ಮತ್ತು 2018ರಲ್ಲಿ. ಈ ಬಾರಿ ಅವರು ಚೀನಾಗೆ ಭೇಟಿ ನೀಡಿದ್ದರೂ ಭಾರತಕ್ಕೆ ಬಂದಿರಲಿಲ್ಲ.
ಕಮ್ಯುನಿಸ್ಟ್ ಸಿದ್ಧಾಂತವಾದಿಯಾಗಿರುವ ಓಲಿ ಹಿಂದಿನಿಂದಲೂ ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳನ್ನು ವಿರೋಧಿಸುತ್ತಲೇ ಬಂದವರು. ಹೀಗಾಗಿ ಅವರು ಚೀನಾದತ್ತ ಹೆಚ್ಚಿನ ಒಲವು ಹೊಂದಿದ್ದರು. ಅನೇಕ ಬಾರಿ ಬಹಿರಂಗವಾಗಿಯೇ ಭಾರತದ ವಿರುದ್ಧ ಹೇಳಿಕೆಗಳನ್ನು ನೀಡಿ ಸುದ್ದಿಯೂ ಆಗಿದ್ದರು.
ಭಾರತ ನೇಪಾಳದ ಆಂತರಿಕ ವಿಚಾರದಲ್ಲಿ ಕೈಯಾಡಿಸುತ್ತಿದೆ ಎಂದು ಅನೇಕ ಬಾರಿ ಹೇಳಿಕೆ ನೀಡಿದ್ದರು. ಲಿಪುಲೇಖ ಮತ್ತು ಕಾಲಾಪಾನಿ ಹಾಗೂ ಲಿಮ್‌ಪಿಯಾನಂಧುರಾ ಪ್ರದೇಶಗಳನ್ನು ನೇಪಾಳದ ಹೊಸ ರಾಜಕೀಯ ನಕ್ಷೆಗೆ ಸೇರಿಸಿ ಅದಕ್ಕೆ ಸಂಸತ್ತಿನ ಒಪ್ಪಿಗೆಯನ್ನೂ ಓಲಿ ಪಡೆದಿದ್ದರು. ಇದು ಭಾರತದ ಕೆಂಗಣ್ಣಿಗೆ ಕಾರಣವಾಗಿತ್ತು. ಇದರ ವಿರುದ್ಧ ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಲಿಪುಲೇಖ ವಿಚಾರವಾಗಿ ಭಾರತದ ವಿರುದ್ಧ ಚೀನಾಗೂ ದೂರು ನೀಡಿದ್ದರು.
ಹೆಸರಿಗಷ್ಟೇ ಭಾರತ ಮತ್ತು ಚೀನಾದ ನಡುವೆ ಸಮಾನ ಸಂಬಂಧ ಎಂದು ಹೇಳುತ್ತಿದ್ದ ಓಲಿ, ಅಸಲಿಗೆ ಚೀನಾ ಪರವಾಗಿದ್ದವರು. ನೆನೆಗುದಿಗೆ ಬಿದ್ದಿದ್ದ ಚೀನಾ ಜತೆಗಿನ ಬಿಆರ್‌ಐ ಯೋಜನೆಗೆ ಪುನರುಜ್ಜೀವನ ನೀಡುವ ಪ್ರಯತ್ನವನ್ನೂ ಅವರು ಇತ್ತೀಚೆಗೆ ಮಾಡಿದ್ದರು. ಪ್ರಧಾನಿಯಾದ ಬಳಿಕ ಚೀನಾಗೆ ಮೊದಲ ಭೇಟಿ ನೀಡಿದ್ದರು.
ಕಾಠ್ಮಂಡು ಪೋಸ್ಟ್ ಪತ್ರಿಕೆಯ ಇತ್ತೀಚಿನ ಸಂಪಾದಕೀಯದಲ್ಲೂ ಓಲಿ ಅವರು ಭಾರತ ಮತ್ತು ಪಾಶ್ಚಿಮಾತ್ಯ ದೇಶಗಳ ದೂರ ಮಾಡಿ ಚೀನಾ ಜತೆಗೆ ಆತ್ಮೀಯ ಸಂಬಂಧ ಹೊಂದಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿತ್ತು.
ನೇಪಾಳಕ್ಕೆ ಹೋಗ್ಬೇಡಿ: ಭಾರತೀಯರಿಗೆ ಕೇಂದ್ರ ಸೂಚನೆ
ನವದೆಹಲಿ : ನೇಪಾಳದಲ್ಲಿ ಯುವ ಸಮುದಾಯದವರ ಪ್ರತಿಭಟನೆ ಭಾರೀ ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ಸದ್ಯಕ್ಕೆ ನೇಪಾಳಕ್ಕೆ ಪ್ರಯಾಣ ಕೈಗೊಳ್ಳದಿರಿ ಎಂದು ಕೇಂದ್ರ ಸರ್ಕಾರ ಭಾರತೀಯರಿಗೆ ಸಲಹೆ ನೀಡಿದೆ. ಜತೆಗೆ ನಾವು ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದೇವೆ ಎಂದಿದೆ. ಇದಲ್ಲದೆ ನೇಪಾಳ-ಭಾರತ ಗಡಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ನೆರೆ ರಾಷ್ಟ್ರ ನೇಪಾಳದಲ್ಲಿ ಪರಿಸ್ಥಿತಿ ಬಿಗಡಾಯಿಸುತ್ತಿರುವುದರಿಂದ ಎಚ್ಚರವಾಗಿರುವಂತೆ ಭಾರತ ಸರ್ಕಾರ ಸೂಚಿಸಿದ್ದು, ಅನಗತ್ಯ ಪ್ರಯಾಣ ಮುಂದೂಡಿ ಎಂದಿದೆ. ಅಗತ್ಯವಿದ್ದಲ್ಲಿ ಸಹಾಯದ ಅಗತ್ಯವಿರುವ ಭಾರತೀಯರು ರಾಯಭಾರಿ ಕಚೇರಿ ಸಂಪರ್ಕಿಸಬಹುದು ಎಂದು +977–980 860 2881, +977–981 032 6134 ಹೆಲ್ಪ್‌ಲೈನ್ ಬಿಡುಗಡೆ ಮಾಡಿದೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ವಿದೇಶಾಂಗ ಇಲಾಖೆ ‘ನೇಪಾಳದಲ್ಲಿ ಸೋಮವಾರದಿಂದ ಆಗುತ್ತಿ ರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಅನೇಕರು ಜೀವ ಕಳೆದುಕೊಂಡಿರುವುದಕ್ಕೆ ವಿಷಾದಿಸುತ್ತೇವೆ. ಕಾಠ್ಮಂಡು ಹಾಗೂ ನೇಪಾಳದ ಹಲವಾರು ನಗರಗಳಲ್ಲಿ ಕರ್ಫ್ಯೂ ವಿಧಿಸಲಾಗಿದೆ, ನೇಪಾಳದಲ್ಲಿರುವ ಭಾರತೀಯರು ಎಚ್ಚರಿಕೆಯಿಂದಿರಿ ಮತ್ತು ಅಲ್ಲಿನ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಪಾಲಿಸಿ’ ಎಂದು ಸಲಹೆ ನೀಡಿದೆ.
ವಿಮಾನಗಳು ರದ್ದು:
ನೇಪಾಳದಲ್ಲಿ ಹಿಂಸಾಚಾರ ಹಿನ್ನೆಲೆಯಲ್ಲಿ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ರಾಷ್ಟ್ರ ರಾಜಧಾನಿ ದೆಹಲಿಯಿಂದ ಕಾಠ್ಮಂಡುಗೆ ಪ್ರಯಾಣಿಸುವ 4 ವಿಮಾನದ ಸಂಚಾರವನ್ನು ರದ್ದುಗೊಳಿಸಿದೆ. ನೇಪಾಳದ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಾತ್ಕಾಲಿಕವಾಗಿ ಮುಚ್ಚಲಾಗಿರುವುದರಿಂದ ಇಂಡಿಗೋ ಮತ್ತು ನೇಪಾಳ ಏರ್ಲೈನ್ಸ್ ಕೂಡ ದೆಹಲಿಯಿಂದ ಕಾಠ್ಮಂಡುವಿಗೆ ಹೋಗುವ ವಿಮಾನಗಳ ಹಾರಾಟ ರದ್ದುಗೊಳಿಸಿದೆ.