ತಾಲೂಕಿನ ಹಿರೀಕಾಟಿ ಬಳಿಯ ಕೆಲ ಕ್ರಷರ್‌ಗಳು ಮಧ್ಯ ರಾತ್ರಿಯ ಸಮಯದಲ್ಲೂ ಜಿಲ್ಲಾ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಸದ್ದು ಮಾಡುತ್ತಿದ್ದು, ಗ್ರಾಮದ ಜನರು ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ
ರಾತ್ರಿಯಿಡೀ, ಬೆಳಗಿನ ಜಾವದ ತನಕ ಕ್ರಷರ್ ಸದ್ದು! । ವೃದ್ಧರು, ಮಕ್ಕಳು, ರೋಗಿಗಳಿಗೆ ನಿದ್ದೆ ಭಂಗ। ಗ್ರಾಮಸ್ಥರಿಂದ ಡಿಸಿಗೆ ದೂರು ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಬಳಿಯ ಕೆಲ ಕ್ರಷರ್‌ಗಳು ಮಧ್ಯ ರಾತ್ರಿಯ ಸಮಯದಲ್ಲೂ ಜಿಲ್ಲಾ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರದ ನಿಯಮ ಉಲ್ಲಂಘಿಸಿ ಸದ್ದು ಮಾಡುತ್ತಿದ್ದು, ಗ್ರಾಮದ ಜನರು ನೆಮ್ಮದಿಯಾಗಿ ನಿದ್ದೆ ಮಾಡಲು ಆಗುತ್ತಿಲ್ಲ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೦ ಗಂಟೆ ತನಕ ಕ್ರಷರ್‌ಗಳು ಕ್ರಷಿಂಗ್ ಮಾಡಲು ಅವಕಾಶವಿದೆ. ಆದರೆ ದುಡ್ಡಿನಾಸೆಗೆ ಕೆಲ ಕ್ರಷರ್‌ಗಳು ನಿಯಮ ಉಲ್ಲಂಘಿಸಿ ಕ್ರಷಿಂಗ್ ಮಾಡುತ್ತಿದ್ದಾರೆ. ವೃದ್ಧರು, ಮಕ್ಕಳು ಹಾಗೂ ರೋಗಿಗಳಿಗೆ ಕ್ರಷರ್ ಸದ್ದು ಮಾರಕವಾಗಿದೆ. ಈ ಸಂಬಂಧ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಅಲ್ಲದೆ ಬೇಗೂರು ಪೊಲೀಸರಿಗೂ ಗ್ರಾಮದ ಕೆಲ ಯುವಕರು ಮೌಖಿಕವಾಗಿ ಕ್ರಷರ್ ಸದ್ದಿನ ಅವಾಂತರದ ಬಗ್ಗೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಕೆಲ ತಿಂಗಳ ಹಿಂದೆ ಹಿರೀಕಾಟಿ ಬಳಿ ಎರಡು ಕ್ರಷರ್ ಮಧ್ಯ ರಾತ್ರಿ ತನಕ ಹಾಗೂ ಕೆಲ ಸಮಯದಲ್ಲಿ ಬೆಳಗಿನ ಮೂರು ಗಂಟೆ ತನಕವೂ ಕ್ರಷರ್ ಕೆಲಸ ನಿರ್ವಹಿಸುವ ಬಗ್ಗೆ ಗ್ರಾಮದ ಯುವಕನೊಬ್ಬ ವೀಡಿಯೋ ಸಮೇತ ಬೇಗೂರು ಪೊಲೀಸರಿಗೆ ಕಳುಹಿಸಿ ಕೊಟ್ಟಿದ್ದಾರೆ. ಗ್ರಾಮಸ್ಥರೊಬ್ಬರು ಕಳುಹಿಸಿದ ವೀಡಿಯೋ ಆಧಾರದ ಮೇಲೆ ರಾತ್ರಿ ಕ್ರಷರ್ ಕಾರ್ಯ ನಿರ್ವಹಿಸುವ ವೇಳೆ ಬೇಗೂರು ಪೊಲೀಸರು ಭೇಟಿ ನೀಡಿದಾಗ ಕ್ರಷರ್ ಸದ್ದು ಮಾಡುತ್ತಿತ್ತು. ಆಗ ಕ್ರಷರ್ ಮಾಲೀಕರಿಗೆ ಮುಂದೆ ರಾತ್ರಿ ಕ್ರಷಿಂಗ್ ಮಾಡೋವಾಗಿಲ್ಲ ಎಂದು ಎಚ್ಚರಿಕೆ ಕೊಟ್ಟು ಕಳುಹಿಸಿದ್ದರು. ನಿಯಮ ಏನು? ರಾತ್ರಿ ೧೦ ಗಂಟೆ ಬಳಿಕ ಕ್ರಷರ್ ಕಾರ್ಯ ನಿರ್ವಹಿಸಿದಲ್ಲಿ ಅಂತಹ ಕ್ರಷರ್ ಘಟಕಗಳ ಮೇಲೆ ಘಟಕಗಳ ಅಧಿನಿಯಮ ಹಾಗೂ ನಿಯಮಾವಳಿಯಂತೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ. ಗ್ರಾಮಸ್ಥರ ದೂರು? ಹಿರೀಕಾಟಿ ಗ್ರಾಮದ ಸುತ್ತ ಮುತ್ತಲಿನ ಕ್ರಷರ್‌ಗಳು ರಾತ್ರಿ ವೇಳೆಯಲ್ಲಿ ನಿರಂತರವಾಗಿ ಸದ್ದು ಮಾಡುವ ಕಾರಣ ಶಬ್ಧ ಮಾಲಿನ್ಯ ಹಾಗೂ ರಾತ್ರಿ ಮಲಗುವುದಕ್ಕೆ ತುಂಬ ತೊಂದರೆಯಾಗಿದೆ. ಗ್ರಾಮಸ್ಥರ ದೂರಿನ ಬಳಿಕ ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳೂ ಆದ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರು ಕಳೆದ ಮೂರು ತಿಂಗಳ ಹಿಂದೆ ಕ್ರಷರ್ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಅಲ್ಲದೆ ಬೆಳಗ್ಗೆ ೬ ರಿಂದ ರಾತ್ರಿ ೧೦ ಗಂಟೆ ತನಕ ಕ್ರಷಿಂಗ್ ಮಾಡಬೇಕು ಎಂದು ಸೂಚನೆ ನೀಡಿ ಬಂದಿದ್ದರು. ಜಿಲ್ಲಾಧಿಕಾರಿಗಳ ಸೂಚನೆ ಬಳಿಕ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪ ನಿರ್ದೇಶಕರು ಅವಧಿ ಮೀರಿ ಕ್ರಷಿಂಗ್ ಮಾಡುವ ಕ್ರಷರ್ ಮಾಲೀಕರಿಗೆ ಎಚ್ಚರಿಕೆ ನೀಡಿ ನೋಟಿಸ್ ನೀಡಿದ್ದರೂ ಹಿರೀಕಾಟಿ ಬಳಿಯ ಎರಡು ಕ್ರಷರ್‌ಗಳು ಮಾತ್ರ ಮಧ್ಯ ರಾತ್ರಿಯಲ್ಲ ಬೆಳಗಿನ ಜಾವ ೩ ಗಂಟೆ ತನಕವೂ ಕಲ್ಲು ಪುಡಿ ಮಾಡುತ್ತಿವೆ ಎಂದು ಜಿಲ್ಲಾ ರೈತ ಕೂಲಿ ಸಂಗ್ರಾಮ ಸಮಿತಿ ಅಧ್ಯಕ್ಷ ಕಂದೇಗಾಲ ಶಿವಣ್ಣ ಆರೋಪಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಮಧ್ಯ ರಾತ್ರಿಯಲ್ಲ, ಬೆಳಗಿನ ಜಾವದ ತನಕ ಸದ್ದು ಮಾಡುವ ಕ್ರಷರ್‌ಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಹಿರೀಕಾಟಿ ಗ್ರಾಮಸ್ಥರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ. ---- ಕೋಟ್ ‘ಅವಧಿ ಮೀರಿ ರಾತ್ರಿ ಸಮಯದಲ್ಲಿ ಕ್ರಷರ್‌ಗಳು ಕಾರ್ಯ ನಿರ್ವಹಿಸುತ್ತಿರುವ ಬಗ್ಗೆ ಕನ್ನಡಪ್ರಭ ನನ್ನ ಗಮನಕ್ಕೆ ತಂದಿದೆ. ಈ ಬಗ್ಗೆ ಕ್ರಷರ್ ಮಾಲೀಕರಿಗೆ ರಾತ್ರಿ ೧೦ ಗಂಟೆ ಬಳಿಕ ಕ್ರಷರ್ ಓಡಿಸದಂತೆ ಸೂಚಿಸುವೆ. - ಪದ್ಮಜ,ಉಪ ನಿರ್ದೇಶಕಿ,ಗಣಿ ಮತ್ತು ಭೂ ವಿಜ್ಞಾನ ಇಲಾಖೆ. ----೧೦ಜಿಪಿಟಿ೩ ಗುಂಡ್ಲುಪೇಟೆ ತಾಲೂಕಿನ ಹಿರೀಕಾಟಿ ಗೇಟ್ ಬಳಿ ಕ್ರಷರ್ ಮಧ್ಯ ರಾತ್ರಿಯ ಬಳಿಕವೂ ಕಲ್ಲು ನುರಿಯುವ ದೃಶ್ಯವನ್ನು ಗ್ರಾಮದ ಯುವಕನೊಬ್ಬ ಮೊಬೈಲ್‌ನಲ್ಲಿ ಸೆರೆ ಹಿಡಿದ ಚಿತ್ರ. ------------- ೧೦ಜಿಪಿಟಿ ರಾತ್ರಿ ೧೦ ಗಂಟೆ ಬಳಿಕ ಕ್ರಷರ್ ಕಲ್ಲು ನುರಿಯುವ ಕಾರ್ಯ ಮಾಡುವಂತಿಲ್ಲ ಎಂದು ಕಲ್ಲು ಪುಡಿ ನಿಯಂತ್ರಣ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕ್ರಷರ್ ಮಾಲೀಕರಿಗೆ ಕಳೆದ ಜು.೭ ರಂದು ನೋಟಿಸ್ ಜಾರಿ ಮಾಡಿದ್ದರು.