ಭೋಪಾಲ್: ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದ ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಧ್ಯ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರ ಬಂಡಾಯ ಶಮನವಾಗಿದೆ.
ನಾಥ್ ಅವರು ಮಾ.2 ರಿಂದ ಮಾ.6ರವರೆಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಕಮಲ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿಲ್ಲ ಎಂಬುದು ದೃಢವಾಗಿದೆ.
ಈ ನಡುವೆ ಟ್ವೀಟ್ ಮಾಡಿರುವ ಕಮಲ್ ‘ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ್ ಯಾತ್ರೆಯನ್ನು ಸ್ವಾಗತಿಸಲು ಮಧ್ಯಪ್ರದೇಶದ ಜನರು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಉತ್ಸುಕರಾಗಿದ್ದಾರೆ.
ನಮ್ಮ ನಾಯಕ ರಾಹುಲ್ ಗಾಂಧಿ ಅವರು ದೇಶಾದ್ಯಂತ ಅನ್ಯಾಯ, ದಬ್ಬಾಳಿಕೆ ಮತ್ತು ಶೋಷಣೆಯ ವಿರುದ್ಧ ನಿರ್ಣಾಯಕ ಹೋರಾಟ ಆರಂಭಿಸಿದ್ದಾರೆ’ ಎಂದಿದ್ದಾರೆ.
ನಾಥ್ ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದಾರೆ, ಅವರು ಬಂಡಾಯ ಎದ್ದಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹಬ್ಬಿತ್ತು.