ಸೋಮವಾರ ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದು ಸಂಭವಿಸಿದ ರೈಲು ಅಪಘಾತಕ್ಕೆ ಸ್ಟೇಷನ್ ಮಾಸ್ಟರ್ ಮಾಡಿದ ಎಡವಟ್ಟು, ಈ ಅಪಘಾತಕ್ಕೆ ಕಾರಣವಾಗಿದೆ ಎಂದು ರೈಲ್ವೆ ಆಂತರಿಕ ದಾಖಲೆಗಳಲ್ಲಿ ಕಂಡುಬಂದಿದೆ.
ನವದೆಹಲಿ : ಸೋಮವಾರ ಪಶ್ಚಿಮ ಬಂಗಾಳದಲ್ಲಿ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲಿಗೆ ಗೂಡ್ಸ್ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದು ಸಂಭವಿಸಿದ ರೈಲು ಅಪಘಾತಕ್ಕೆ ಕಾರಣ ಏನು ಎಂಬ ಬಗ್ಗೆ ರೈಲ್ವೆ ಸುರಕ್ಷತಾ ಆಯುಕ್ತರು ತನಿಖೆ ನಡೆಸಬೇಕು ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಆದೇಶಿಸಿದ್ದಾರೆ. ಇದರ ನಡುವೆ ಸ್ಟೇಷನ್ ಮಾಸ್ಟರ್ ಮಾಡಿದ ಎಡವಟ್ಟು, ಈ ಅಪಘಾತಕ್ಕೆ ಕಾರಣವಾಗಿದೆ ಎಂದು ರೈಲ್ವೆ ಆಂತರಿಕ ದಾಖಲೆಗಳಲ್ಲಿ ಕಂಡುಬಂದಿದೆ.
ಮೊದಲು ಗೂಡ್ಸ್ ಚಾಲಕ ಸಿಗ್ನಲ್ ಉಲ್ಲಂಘಿಸಿದ್ದೇ ಕಾರಣ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಆಂತರಿಕ ದಾಖಲೆಗಳನ್ನು ಪರಿಶೀಲಿಸಿದ ಬಳಿಕ, ಸ್ವಯಂ ಚಾಲಿತ ಸಿಗ್ನಲ್ ದೋಷದ ಹಿನ್ನೆಲೆಯಲ್ಲಿ ಪ್ರಯಾಣಿಕ ಮತ್ತು ಸರಕು ಎರಡೂ ರೈಲುಗಳು ಸಂಚರಿಸಲು ಸ್ಟೇಷನ್ ಮಾಸ್ಟರ್ ಹೆಚ್ಚೂ ಕಡಿಮೆ ಏಕಕಾಲಕ್ಕೆ ‘ವಿಶೇಷ ಲಿಖಿತ ಅನುಮತಿ ಪತ್ರ’ ನೀಡಿದ್ದು ಖಚಿತಪಟ್ಟಿದೆ. ಹೀಗಾಗಿಯೇ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಆಗಿದ್ದೇನು?:
ಅಪಘಾತ ಸಂಭವಿಸಿದ ದಿಲ್ಲಿ-ಗುವಾಹಟಿ ಮಾರ್ಗದ ಪ.ಬಂಗಾಳದ ನ್ಯೂ ಜಲಪೈಗುರಿ ಭಾಗದಲ್ಲಿ ಬೆಳಗ್ಗೆ 5.50ರಿಂದಲೇ ಸಿಗ್ನಲ್‌ನಲ್ಲಿ ದೋಷ ಕಂಡುಬಂದಿತ್ತು. ಸಿಗ್ನಲ್ ದೋಷ ಇದ್ದರೆ ಎಲ್ಲೇ ರೆಡ್ ಸಿಗ್ನಲ್ ಇದ್ದರೂ ರೈಲು ಮುಂದೆ ಸಾಗಲು ರೈಲಿನ ಚಾಲಕನಿಗೆ ‘ಟಿಎ 912’ ಹೆಸರಿನ ಅನುಮತಿ ಪತ್ರ ನೀಡುವ ಅಧಿಕಾರ ಸಮೀಪದ ರೈಲ್ವೆ ಸ್ಟೇಷನ್ ಮಾಸ್ಟರ್‌ಗೆ ಇರುತ್ತದೆ.
ಹೀಗಾಗಿ ಸಿಗ್ನಲ್ ವೈಫಲ್ಯದ ಕಾರಣ, ರಾಣಿಪತ್ರ ನಿಲ್ದಾಣದ ಸ್ಟೇಷನ್‌ನ ಸ್ಟೇಷನ್ ಮಾಸ್ಟರ್, ಮೊದಲು ಅಗರ್ತಲಾ-ಸಿಯಾಲ್‌ದಹ ಕಾಂಚನಜುಂಗಾ ಕಾಂಚನಜುಂಗಾ ರೈಲಿನ ಚಾಲಕನಿಗೆ ‘ಟಿಎ 912’ ಎಂಬ ಅನುಮತಿ ಪತ್ರ ನೀಡಿದ್ದಾರೆ. ಈ ಪ್ರಕಾರ ಕಾಂಚನಜುಂಗಾ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 13174) ಸೋಮವಾರ ಬೆಳಗ್ಗೆ 8.27ಕ್ಕೆ ರಂಗಾಪಾನಿ ನಿಲ್ದಾಣ ದಾಟಿ ಮುಂದೆ ಸಾಗಿತ್ತು. ಆದರೆ ಮುಂದೆ ಸಾಗಿದ ಬಳಿಕ ರಾಣಿಪತ್ರ ನಿಲ್ದಾಣ ಮತ್ತು ಛತ್ತರ್‌ಹಾಟ್ ನಿಲ್ದಾಣದ ನಡುವಿನ ಪ್ರದೇಶದಲ್ಲಿ ನಿಂತಿದೆ. ಈ ನಿಲ್ದಾಣಗಳ ನಡುವೆ 9 ಸಿಗ್ನಲ್‌ಗಳಿದ್ದು, ಎಲ್ಲ ದೋಷಯುಕ್ತ 9 ಸಿಗ್ನಲ್‌ಗಳ ಜಂಪ್‌ಗೂ ಕಾಂಚನಜುಂಗಾಗೆ ಅನುಮತಿ ಇತ್ತು. ಆದರೂ ರೈಲು ಮಾರ್ಗಮಧ್ಯೆ ಏಕೆ ಇಲ್ಲಿ ನಿಂತಿತು ಎಂಬ ಕಾರಣ ಗೊತ್ತಾಗಿಲ್ಲ.
ಆದರೆ ಇದಾದ ಕೆಲ ಹೊತ್ತಿನಲ್ಲೇ ಅದೇ ಮಾರ್ಗದಲ್ಲಿ ರಂಗಾಪಾನಿ ರೈಲು ನಿಲ್ದಾಣದಿಂದ 8.42ಕ್ಕೆ ಹೊರಟ ಗೂಡ್ಸ್ ರೈಲು ಹೊರಟಿದೆ. ಏಕೆಂದರೆ ಈ ರೈಲು ಚಾಲಕನಿಗೂ ರಾಣಿಪತ್ರ ನಿಲ್ದಾಣದ ಸ್ಟೇಷನ್ ಮಾಸ್ಟರ್ ‘ಟಿಎ 912’ ಅನುಮತಿ ಪತ್ರ ನೀಡಿದ್ದಾರೆ. ಆಗ 9 ಗಂಟೆ ಸುಮಾರಿಗೆ ಹಿಂದಿನಿಂದ ಬಂದ ಗೂಡ್ಸ್ ರೈಲು, ಮಾರ್ಗಮಧ್ಯೆ ನಿಂತಿದ್ದ ಕಾಂಚನಜುಂಗಾ ಎಕ್ಸ್‌ಪ್ರೆಸ್‌ನ ಹಿಂಭಾಗದ ಬೋಗಿಗಳಿಗೆ ಡಿಕ್ಕಿ ಹೊಡೆದಿದೆ.
ಬಹುಶಃ ಕಾಂಚನಜುಂಗಾ ರೈಲು ಮುಂದಿನ ಸ್ಟೇಷನ್ ದಾಟಿ ಹೋಗಿರಬಹುದು ಎಂಬ ಭಾವಿಸಿ ಗೂಡ್ಸ್ ರೈಲಿಗೂ ಸ್ಟೇಷನ್ ಮಾಸ್ಟರ್ ‘ಟಿಎ 912’ ಅನುಮತಿ ಪತ್ರ ನೀಡಿರಬಹುದು. ಅವರಿಗೆ ಕಾಂಚನಜುಂಗಾ ರೈಲು ಮಾರ್ಗಮಧ್ಯೆ ನಿಂತಿದ್ದು ಗೊತ್ತಿರಲಿಕ್ಕಿಲ್ಲ ಎಂದು ಮೂಲಗಳು ಹೇಳಿವೆ.
ಗೂಡ್ಸ್ ಚಾಲಕರ ವೇಗವೂ ಕಾರಣ?:ನಿಯಮಗಳ ಅನ್ವಯ ದೋಷಪೂರಿತ ಸಿಗ್ನಲ್ ಇದ್ದ ಪ್ರದೇಶಗಳಲ್ಲಿ ರೈಲುಗಳನ್ನು 1 ನಿಮಿಷ ನಿಲ್ಲಿಸಬೇಕು ಮತ್ತು 10 ಕಿ.ಮೀ ವೇಗದಲ್ಲಿ ಮಾತ್ರವೇ ಸಾಗಬೇಕು. ಆದರೆ ಸರಕು ಸಾಗಣೆ ರೈಲಿನ ಚಾಲಕರು ಎರಡೂ ನಿಯಮಗಳನ್ನು ಉಲ್ಲಂಘಿಸಿ ವೇಗವಾಗಿ ಬಂದಿದ್ದರು ಎನ್ನಲಾಗಿದೆ. ಆದರೆ ಇದು ತನಿಖೆಯ ನಂತರವಷ್ಟೇ ಬೆಳಕಿಗೆ ಬರಬೇಕಿದೆ. ಏಕೆಂದರೆ ಗೂಡ್ಸ್ ರೈಲಿನ ಚಾಲಕರಿಬ್ಬರೂ ಮೃತಪಟ್ಟಿದ್ದಾರೆ. ಇನ್ನೊಂದೆಡೆ ಪ್ರಯಾಣಿಕ ರೈಲಿನ ಚಾಲಕ ಏಕೆ ಮಾರ್ಗಮಧ್ಯೆ ರೈಲನ್ನು ನಿಲ್ಲಿಸಿದ್ದ ಎಂಬ ವಿಷಯವೂ ಖಚಿತಪಡಬೇಕಿದೆ.