ಬೆಂಬಲಕ್ಕೆ ನಿಲ್ಲದ ರಾಜಕಾರಣ, ಚಿತ್ರರಂಗ: ಕಂಗನಾ ಕಿಡಿ

KannadaprabhaNewsNetwork | Updated : Jun 09 2024, 08:25 AM IST

ಸಾರಾಂಶ

ಕಂಗನಾಗೆ ಸಿಐಎಸ್‌ಎಫ್‌ ಪೇದೆಯಿಂದ ಕಪಾಳಮೋಕ್ಷ ಮಾಡಿದ ಪ್ರಕರಣದಲ್ಲಿ ಕಪಾಳಕ್ಕೆ ಹೊಡೆದಿದ್ದು ಸರಿ ಎಂದವರ ಮೇಲೆ ಬಿಜೆಪಿ ಸಂಸದೆ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ನವದೆಹಲಿ: ತಮಗೆ ಚಂಡೀಗಡ ಏರ್‌ಪೋರ್ಟ್‌ನಲ್ಲಿ ಕಪಾಳಮೀಕ್ಷ ಮಾಡಿದ ಸಿಐಎಸ್‌ಎಫ್‌ ಮಹಿಳಾ ಪೇದೆ ಕುಲ್ವಿಂದರ್‌ ಕೌರ್‌ ಅವರನ್ನು ಬೆಂಬಲಿಸುತ್ತಿರುವ ಜನರು, ಗಣ್ಯರು ಹಾಗೂ ರೈತ ಸಂಘಟನೆಗಳ ವಿರುದ್ಧ ಬಿಜೆಪಿ ಸಂಸದೆ ಹಾಗೂ ನಟಿ ಕಂಗನಾ ರಾಣಾವತ್‌ ತಿರುಗಿಬಿದ್ದಿದ್ದಾರೆ. ‘ಒಬ್ಬ ವ್ಯಕ್ತಿಯ ಮೇಲೆ ಮತ್ಸರವಿದೆಯೆಂದೆ ಆಕೆಯ ಮೇಲೆ ಅತ್ಯಾಚಾರ ಮಾಡಿದರೂ ಸರಿಯೇ?‘ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ಟ್ವೀಟ್‌ ಮಾಡಿರುವ ಕಂಗನಾ, ‘ಒಬ್ಬ ವ್ಯಕ್ತಿ ಕಾರಣವಿಲ್ಲದೆ ಯಾವ ಅಪರಾಧವನ್ನೂ ಮಾಡುವುದಿಲ್ಲ. ಹಾಗಾಗಿಯೇ ಅವರಿಗೆ ನ್ಯಾಯಾಲಯ ಶಿಕ್ಷಿಸುತ್ತದೆ. ಹಾಗಂತ ಒಬ್ಬ ವ್ಯಕ್ತಿಯ ಮೇಲೆ ಆಕ್ರೋಶವಿದೆ ಎಂದು ಕಾನೂನು ಉಲ್ಲಂಘಿಸಿ ಹಲ್ಲೆ ಮಾಡುವುದು ಸರಿ ಎಂದಾದಲ್ಲಿ ಅತ್ಯಾಚಾರ ಮಾಡುವುದೂ ಸರಿಯೇ? ಅದೂ ಸಹ ಕೇವಲ ದೌರ್ಜನ್ಯದ ಮತ್ತೊಂದು ರೂಪವಷ್ಟೇ ಎಂದರೆ.. ಅಂಥ ವಾದ ಸರಿಯೇ?’ ಎಂದು ವಾಗ್ದಾಳಿ ನಡೆಸಿದ್ದಾರೆ.

ಕೃಷಿ ಕಾಯ್ದೆ ವಿರುದ್ಧ ಕೆಲವು ವರ್ಷಗಳ ಹಿಂದೆ ಧರಣಿ ನಡೆಸಿದವರನ್ನು ಕಂಗನಾ ‘ಕೃಷಿ ಕಾಯ್ದೆ ವಿರುದ್ಧ ಹೋರಾಡಿದ ರೈತರು ನಿಜವಾದ ರೈತರಲ್ಲ. ದಿನಕ್ಕೆ 100 ರು. ಹಣ ನೀಡಿ ಅವರನ್ನು ಕರೆತರಲಾಗಿತ್ತು’ ಎಂದು ಈ ಹಿಂದೆ ಕಂಗನಾ ಹೇಳಿದ್ದರು. ಇದರಿಂದ ಕುಪಿತಳಾಗಿದ್ದ ಪೇದೆ ಕುಲ್ವಿಂದರ್‌ ಕೌರ್, ‘ನನ್ನ ಅಮ್ಮನೂ ಪ್ರತಿಭಟನೆಗೆ ಹೋಗಿದ್ದಳು. ಆಕೆ ನಯಾಪೈಸೆ ಪಡೆದಿರಲಿಲ್ಲ’ ಎಂದು ಕಿಡಿಕಾರಿ ಕಂಗನಾ ಕಪಾಳಕ್ಕೆ ಬಾರಿಸಿದ್ದಳು.

ಆದರೆ ರೈತ ಸಂಘಟನೆಗಳು ಈಗ ಕೌರ್‌ ಪರ ಜೂ.9ರಂದು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ಆಕೆಯ ಆಕ್ರೋಶಕ್ಕೆ ಕಾರಣ ಏನು ಎಂದು ಕೂಲಂಕಷವಾಗಿ ಪರಶೀಲಿಸಲು ಆಗ್ರಹಿಸಿದ್ದವು. ಇನ್ನು ಬಾಲಿವುಡ್‌ ಗಾಯಕ ವಿಶಾಲ್‌ ದದ್ಲಾನಿ, ‘ನಾನು ಎಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ, ಆದರೆ ಕೌರ್‌ಗೆ ಕೋಪ ಏಕೆ ಬಂದಿತ್ತೆಂಬುದನ್ನು ನಾನು ನಾನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇನೆ’ ಎಂದು ಹೇಳಿ ಪೇದೆ ಹುದ್ದೆ ಕಳೆದುಕೊಂಡ ಕೌರ್‌ಗೆ ನೌಕರಿ ಆಫ್‌ ನೀಡಿದ್ದರು.

Share this article