ನ್ಯಾ। ವರ್ಮಾ ವಿರುದ್ಧದ ತನಿಖೆಗೆ ಕನ್ನಡಿಗ ಭಟ್

Published : Sep 07, 2025, 05:37 AM IST
Justice Yashwanth Verma

ಸಾರಾಂಶ

ದೆಹಲಿ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ನ್ಯಾ। ಯಶವಂತ್‌ ವರ್ಮಾ ವಿರುದ್ಧ ವಾಗ್ದಂಡನೆ ಪೂರ್ವ ತನಿಖೆಗೆ ನೇಮಿಸಲಾಗಿರುವ ತ್ರಿಸದಸ್ಯ ತಂಡಕ್ಕೆ ಕರ್ನಾಟಕ- ಗೋವಾ ವಲಯದ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರಾಗಿದ್ದ ಕನ್ನಡಿಗ ಗಣಪತಿ ಭಟ್‌ ಅವರನ್ನು ಕಾರ್ಯದರ್ಶಿಯಾಗಿ ನೇಮಕ

ನವದೆಹಲಿ : ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆಯಾದ ಪ್ರಕರಣ ಸಂಬಂಧ ದೆಹಲಿ ಹೈಕೋರ್ಟ್‌ ನ್ಯಾಯಾಧೀಶರಾಗಿದ್ದ ನ್ಯಾ। ಯಶವಂತ್‌ ವರ್ಮಾ ವಿರುದ್ಧ ವಾಗ್ದಂಡನೆ ಪೂರ್ವ ತನಿಖೆಗೆ ನೇಮಿಸಲಾಗಿರುವ ತ್ರಿಸದಸ್ಯ ತಂಡಕ್ಕೆ ಕರ್ನಾಟಕ- ಗೋವಾ ವಲಯದ ಪ್ರಧಾನ ಮುಖ್ಯ ಆದಾಯ ತೆರಿಗೆ ಆಯುಕ್ತರಾಗಿದ್ದ ಕನ್ನಡಿಗ ಗಣಪತಿ ಭಟ್‌ ಅವರನ್ನು ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ಉತ್ತರ ಕನ್ನಡ ಮೂಲದ, 1989ನೇ ಬ್ಯಾಚಿನ ಐಆರ್‌ಎಸ್‌ ಅಧಿಕಾರಿಯಾಗಿರುವ ಗಣಪತಿ ಭಟ್‌ ಅವರನ್ನು ನೇಮಕ ಮಾಡಿ ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಆದೇಶ ಹೊರಡಿಸಿದ್ಧಾರೆ.

ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಅರವಿಂದ ಕುಮಾರ್‌, ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿ ಮಣೀಂದ್ರ ಮೋಹನ್‌ ಶ್ರೀವಾಸ್ತವ ಹಾಗೂ ಹಿರಿಯ ವಕೀಲ ಬಿ.ವಿ. ಆಚಾರ್ಯ ಅವರನ್ನು ಒಳಗೊಂಡ ತ್ರಿಸದಸ್ಯ ಸಮಿತಿ ಇದಾಗಿದೆ. ಈ ಪೈಕಿ ನ್ಯಾ। ಅರವಿಂದ ಕುಮಾರ್‌ ಹಾಗೂ ಬಿ.ವಿ. ಆಚಾರ್ಯ ಅವರು ಕನ್ನಡಿಗರು. ಇದೀಗ ಸಮಿತಿಯ ಕಾರ್ಯದರ್ಶಿಯಾಗಿ ನೇಮಕಗೊಂಡಿರುವ ಗಣಪತಿ ಭಟ್‌ ಅವರಿಂದಾಗಿ ನ್ಯಾ। ವರ್ಮಾ ವಾಗ್ದಂಡನೆ ಪ್ರಕ್ರಿಯೆಯಲ್ಲಿ ಮೂವರು ಕನ್ನಡಿಗರು ಪಾಲ್ಗೊಂಡಂತೆ ಆಗಿದೆ.

ಆದಾಯ ತೆರಿಗೆ ಇಲಾಖೆಯಲ್ಲಿ ಮೂರು ದಶಕಗಳ ಕಾಲ ಸೇವೆ ಸಲ್ಲಿಸಿರುವ ಗಣಪತಿ ಭಟ್‌ ಅವರು ಆದಾಯ ತೆರಿಗೆ (ಅಂತಾರಾಷ್ಟ್ರೀಯ ತೆರಿಗೆ) ಇಲಾಖೆಯ ಪ್ರಧಾನ ಮುಖ್ಯ ಆಯುಕ್ತರಾಗಿ ನವದೆಹಲಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಆದಾಯ ತೆರಿಗೆ ತನಿಖೆ (ಕರ್ನಾಟಕ, ಗೋವಾ, ಕೇರಳ) ವಿಭಾಗದ ಮಹಾನಿರ್ದೇಶಕರಾಗಿಯೂ ಅವರು ಕಾರ್ಯನಿರ್ವಹಿಸಿದ್ದಾರೆ.

ಲೋಕಸಭೆ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿಯಾಗಿ, ಅಭಿವೃದ್ಧಿಶೀಲ ರಾಷ್ಟ್ರಗಳ ಟ್ರಾನ್ಸ್‌ಫರ್‌ ಪ್ರೈಸಿಂಗ್ ಮ್ಯಾನ್ಯುಯಲ್‌ಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಕರಡು ರಚನಾ ಸಮಿತಿಯ ಸದಸ್ಯರಾಗಿಯೂ ಭಟ್‌ ಅವರು ಸೇವೆ ಸಲ್ಲಿಸಿದ್ದಾರೆ.

ದೇಶದ ಮೂರು ಅಂಗಗಳಾದ ಶಾಸಕಾಂಗ, ಕಾರ್ಯಾಂಗ ಹಾಗೂ ನ್ಯಾಯಾಂಗದ ನಡುವಣ ಸಂಬಂಧ ಕುರಿತು ಪುಸ್ತಕ ರಚನೆ ಮಾಡಲು 2017ರಲ್ಲಿ ಭಟ್‌ ಅವರು ಫೆಲೋಶಿಪ್‌ ಪಡೆದಿದ್ದರು. ತೆರಿಗೆ ನೀತಿ ಹಾಗೂ ಎಫ್‌ಡಿಐ ಎಂಬ ಪುಸ್ತಕವನ್ನು 2012ರಲ್ಲಿ ಅವರು ರಚಿಸಿದ್ದರು. ಹಲವು ಸಂಶೋಧನಾ ಪ್ರಬಂಧಗಳ ಕರ್ತೃ ಕೂಡ ಅವರಾಗಿದ್ದಾರೆ.

PREV
Read more Articles on

Recommended Stories

ಉಪರಾಷ್ಟ್ರಪತಿ ಹುದ್ದೆಗೆ ಸಂಬಳವಿಲ್ಲ!
ಮೋದಿ ಜನ್ಮದಿನಕ್ಕೆ‘ನಮೋ ಯುವ ರನ್‌’ ಅಭಿಯಾನ