ಕಾಂತಾರ-1 ಸೇರಿ 4 ಭಾರತೀಯ ಚಿತ್ರಗಳು ಆಸ್ಕರ್‌ ರೇಸ್‌ಗೆ

KannadaprabhaNewsNetwork |  
Published : Jan 10, 2026, 02:00 AM IST
Kanthara

ಸಾರಾಂಶ

ಕನ್ನಡದ ಬ್ಲಾಕ್‌ಬಸ್ಟರ್‌ ಕಾಂತಾರ: ಎ ಲೆಜೆಂಡ್ - ಚಾಪ್ಟರ್‌ 1, ಕನ್ನಡ ಸೇರಿ ಬಹುಭಾಷೆಗಳಲ್ಲಿ ಬಿಡುಗಡೆ ಆಗಿದ್ದ ಅನಿಮೇಟೆ ಡ್‌ ಚಿತ್ರ ಮಹಾವತಾರ್‌ ನರಸಿಂಹ ಸೇರಿದಂತೆ 4 ಭಾರತೀಯ ಚಿತ್ರಗಳು 2026ರ ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದಿವೆ.

 ಕನ್ನಡದ ಬ್ಲಾಕ್‌ಬಸ್ಟರ್‌ ಕಾಂತಾರ: ಎ ಲೆಜೆಂಡ್ - ಚಾಪ್ಟರ್‌ 1, ಕನ್ನಡ ಸೇರಿ ಬಹುಭಾಷೆಗಳಲ್ಲಿ ಬಿಡುಗಡೆ ಆಗಿದ್ದ ಅನಿಮೇಟೆ ಡ್‌ ಚಿತ್ರ ಮಹಾವತಾರ್‌ ನರಸಿಂಹ ಸೇರಿದಂತೆ 4 ಭಾರತೀಯ ಚಿತ್ರಗಳು 2026ರ ವಿಶ್ವದ ಪ್ರತಿಷ್ಠಿತ ಚಲನಚಿತ್ರ ಪ್ರಶಸ್ತಿ ರೇಸ್‌ನಲ್ಲಿ ಸ್ಥಾನ ಪಡೆದಿವೆ.

ಆಸ್ಕರ್‌ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ ಆರ್ಟ್ಸ್ ಅಂಡ್ ಸೈನ್ಸಸ್, 98ನೇ ಅಕಾಡೆಮಿ ಪ್ರಶಸ್ತಿಯ ಉತ್ತಮ ಚಲನಚಿತ್ರ ವಿಭಾಗದಲ್ಲಿ ಸ್ಪರ್ಧಿಸಲು ಅರ್ಹವಾಗಿರುವ 201 ಚಲನಚಿತ್ರಗಳ ಪಟ್ಟಿ ಪ್ರಕಟಿಸಿದೆ. ಇದರಲ್ಲಿ ಕಾಂತಾರ ಚಾಪ್ಟರ್‌-1, ಅನುಪಮ್ ಖೇರ್ ನಿರ್ದೇಶನದ ಹಿಂದಿ ಚಲನಚಿತ್ರ ‘ತನ್ವಿ ದಿ ಗ್ರೇಟ್’, ಕನ್ನಡ ಸೇರಿದಂತೆ ವಿವಿಧ ಭಾಷೆಗಳಲ್ಲಿ ಬಿಡುಗಡೆ ಆಗಿದ್ದ ಬಹುಭಾಷಾ ಅನಿಮೇಟೆಡ್ ಚಲನಚಿತ್ರ ‘ಮಹಾವತಾರ್ ನರಸಿಂಹ’ ಮತ್ತು ಮೊದಲ ಬಾರಿಗೆ ಚಲನಚಿತ್ರ ನಿರ್ದೇಶನಕ್ಕೆ ಇಳಿದಿದ್ದ ಅಭಿಶಾನ್ ಜೀವಿಂತ್ ಅವರ ತಮಿಳು ಚಿತ್ರ ‘ಟೂರಿಸ್ಟ್ ಫ್ಯಾಮಿಲಿ’ ಸ್ಪರ್ಧೆಯಲ್ಲಿ ಸ್ಥಾನ ಪಡೆದಿರುವ ಭಾರತೀಯ ಚಿತ್ರಗಳಾಗಿವೆ. ರಾಧಿಕಾ ಆಪ್ಟೆ ಅಭಿನಯದ ‘ಸಿಸ್ಟರ್ ಮಿಡ್ನೈಟ್’ ಚಿತ್ರವು ಬ್ರಿಟನ್‌-ಭಾರತ ಜಂಟಿ ನಿರ್ಮಾಣದ ಹಿಂದಿ ಚಿತ್ರವಾಗಿದ್ದು ಅದು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಆದರೆ ಅದು ಭಾರತದ ವಿಭಾಗದಲ್ಲಿ ಬರುವುದಿಲ್ಲ.

ಹೊಂಬಾಳೆ ಫಿಲ್ಮ್ಸ್ ಗೆ 2 ಗರಿ:

ಮಹಾವತಾರ ನರಸಿಂಹ ಚಿತ್ರವನ್ನು ಅಶ್ವಿನ್ ಕುಮಾರ್ ನಿರ್ದೇಶಿಸಿದ್ದು, ಜಯಪೂರ್ಣ ದಾಸ್ ಕತೆ ಬರೆದಿದ್ದಾರೆ. ಕ್ಲೀಮ್ ಪ್ರೊಡಕ್ಷನ್ಸ್ ಇದನ್ನು ನಿರ್ಮಾಣ ಮಾಡಿದ್ದು ಮತ್ತು ಹೊಂಬಾಳೆ ಫಿಲ್ಮ್ಸ್ ಪ್ರಸ್ತುತಪಡಿಸಿದೆ. ಇನ್ನು ಕಾಂತಾರವನ್ನು ರಿಷಬ್ ಶೆಟ್ಟಿ ನಿರ್ದೇಶಿಸಿದ್ದು, ಹೊಂಬಾಳೆ ಫಿಲ್ಮ್ಸ್ ನಿರ್ಮಾಣ ಮಾಡಿದೆ.

ಈ ಬಗ್ಗೆ ಟ್ವೀಟರ್‌ನಲ್ಲಿ ಹೊಂಬಾಳೆ ಫಿಲ್ಮ್ಸ್ ಹರ್ಷ ವ್ಯಕ್ತಪಡಿಸಿದೆ.ವಿವಿಧ ವಿಭಾಗಗಳಲ್ಲೂ ಭಾರತದ ಚಿತ್ರಗಳು:

ಒಟ್ಟಾರೆಯಾಗಿ, 317 ಚಲನಚಿತ್ರಗಳು 98 ನೇ ಅಕಾಡೆಮಿ ಪ್ರಶಸ್ತಿಗೆ ಸ್ಪರ್ಧಿಸಲು ಅರ್ಹವಾಗಿವೆ. ಇವುಗಳಲ್ಲಿ 201 ಚಲನಚಿತ್ರಗಳು ಅತ್ಯುತ್ತಮ ಚಿತ್ರ ವಿಭಾಗದಲ್ಲಿ ಸ್ಪರ್ಧಿಸಲಿವೆ.

ಅತ್ಯುತ್ತಮ ಚಿತ್ರ ವಿಭಾಗ ಹೊರತುಪಡಿಸಿದರೆ ಭಾರತದ ಇನ್ನು ಕೆಲ ಸಿನಿಮಾಗಳ ವಿವಿಧ ವಿಭಾಗದಲ್ಲಿ ಆಸ್ಕರ್‌ಗೆ ಎಂಟ್ರಿ ಕೊಟ್ಟಿವೆ.ನೀರಜ್ ಘಯ್ವಾನ್‌ ನಿರ್ದೇಶನದ ಹಿಂದಿಯ ‘ಹೋಂಬೌಂಡ್‌’ ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್‌ ಸಿನಿಮಾ ಸ್ಪರ್ಧೆಗೆ ಲಗ್ಗೆಯಿಟ್ಟಿದೆ. ಇದರ ಜತೆಗೆ ‘ದಶಾವತಾರ’(ಮರಾಠಿ), ‘ಗೆವಿ’ (ತಮಿಳು), ‘ಹ್ಯೂಮನ್ಸ್‌ ಇನ್‌ ದಿ ಲೂಪ್‌’, ‘ಮಹಾಮಂತ್ರ - ದಿ ಗ್ರೇಟ್ ಚಾಂಟ್‌’ , ಭಾರತ ಮತ್ತು ಪಪುವಾ ನ್ಯೂಗಿನಿಯಾ ಸಹ ನಿರ್ಮಾಣದ ‘ ಪಾಪಾ ಬುಕಾ’, ‘ ಪೇಪರ್‌ ಫ್ಲವರ್ಸ್‌’, ‘ ಪಾರೋ: ದಿ ಅನ್‌ಟೋಲ್ಡ್ ಸ್ಟೋರಿ ಆಫ್ ಬ್ರೈಡ್ ಸ್ಲೇವರಿ’ ಸಿನಿಮಾಗಳು ಆಸ್ಕರ್‌ನ ಬೇರೆ ಬೇರೆ ವಿಭಾಗಗಳಲ್ಲಿ ಪ್ರಶಸ್ತಿಗಾಗಿ ಸ್ಪರ್ಧಿಸುತ್ತಿವೆ.

ಸ್ಪರ್ಧೆ ಹೇಗೆ?:

ಮಾರ್ಚ್ 15ರಂದು 98ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು 24 ವಿವಿಧ ವಿಭಾಗಗಳಲ್ಲಿ ಪ್ರಶಸ್ತಿಗಳನ್ನು ಪ್ರಕಟಿಸಲಾಗುತ್ತದೆ. ಇದರಲ್ಲಿ ಅತ್ಯುತ್ತಮ ಚಲನಚಿತ್ರ ಘೋಷಣೆಗೆ 10 ನಾಮನಿರ್ದೇಶನ ಬೇಕಾಗುತ್ತದೆ. ಉಳಿದ ವಿಭಾಗಗಳಿಗೆ 5 ನಾಮನಿರ್ದೇಶನ ಸಾಕು.

19 ಸಿನಿಮಾ ವಿಭಾಗಗಳಲ್ಲಿನ ಅರ್ಹ ಸದಸ್ಯರು ಆಸ್ಕರ್‌ಗೆ ನಾಮನಿರ್ದೇಶನಗಳನ್ನು ಮಾಡುತ್ತಾರೆ. ಆಸ್ಕರ್ ಮತದಾನದ ಎಲ್ಲಾ ಸುತ್ತುಗಳನ್ನು ರಹಸ್ಯ ಆನ್‌ಲೈನ್ ಮತದಾನದ ಮೂಲಕ ನಡೆಸಲಾಗುತ್ತದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಜಿ ರಾಮ್‌ ಜಿ ವಿರುದ್ಧ ಕೈ ಹೋರಾಟ ಶುರು
ಇದು ಭಿಕಾರಿ ಸರ್ಕಾರ: ಪಾಕ್‌ ವಿರುದ್ಧ ಲಷ್ಕರ್‌ ಉಗ್ರಾಕ್ರೋಶ