ಮದುವೆಗೆ ಕನ್ಯಾದಾನ ಬೇಡ, ಸಪ್ತಪದಿ ಸಾಕು: ಹೈಕೋರ್ಟ್‌

ಸಾರಾಂಶ

ಮದುವೆಗೆ ಕಾನೂನಾತ್ಮಕ ಮಾನ್ಯತೆ ದೊರೆಯಲು ಅದರಲ್ಲಿ ಕನ್ಯಾದಾನ ಶಾಸ್ತ್ರವನ್ನು ಮಾಡಿರಲೇಬೇಕೆಂದೇನೂ ಇಲ್ಲ. ಆದರೆ ದಂಪತಿಗಳು ಕಡ್ಡಾಯವಾಗಿ ಸಪ್ತಪದಿಯನ್ನು ತುಳಿದಿರಬೇಕು ಎಂಬುದಾಗಿ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ಲಖನೌ: ಮದುವೆಗೆ ಕಾನೂನಾತ್ಮಕ ಮಾನ್ಯತೆ ದೊರೆಯಲು ಅದರಲ್ಲಿ ಕನ್ಯಾದಾನ ಶಾಸ್ತ್ರವನ್ನು ಮಾಡಿರಲೇಬೇಕೆಂದೇನೂ ಇಲ್ಲ. ಆದರೆ ದಂಪತಿಗಳು ಕಡ್ಡಾಯವಾಗಿ ಸಪ್ತಪದಿಯನ್ನು ತುಳಿದಿರಬೇಕು ಎಂಬುದಾಗಿ ಅಲಹಾಬಾದ್‌ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ.

ತನ್ನ ಮದುವೆ ವೇಳೆ ತನ್ನ ಅತ್ತೆ ಮಾವ (ಪತ್ನಿಯ ತಂದೆ-ತಾಯಿ) ಕನ್ಯಾದಾನ ಮಾಡಿಕೊಡದೇ ಸಂಪ್ರದಾಯ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರನ್ನು ಕರೆಸಿ ವಿಚಾರಣೆ ನಡೆಸಬೇಕು ಎಂದು ಆಶುತೋಷ್‌ ಯಾದವ್‌ ಎಂಬಾತ ಅರ್ಜಿ ಸಲ್ಲಿಸಿದ್ದ, ಆದರೆ ಇದನ್ನು ತಿರಸ್ಕರಿಸಿದ ನ್ಯಾ। ಸುಭಾಷ್‌ ವಿದ್ಯಾರ್ಥಿ ನೇತೃತ್ವದ ಪೀಠ, ಹಿಂದೂ ವಿವಾಹ ಕಾಯ್ದೆಯಂತೆ ಕನ್ಯಾದಾನ ಕಡ್ಡಾಯವಲ್ಲ, ಸಪ್ತಪದಿ ಮಾತ್ರ ಕಡ್ಡಾಯ ಎಂದು ಹೇಳಿ ಅರ್ಜಿದಾನ ಪತ್ನಿಯ ಮಾತಾ-ಪಿತೃಗಳಿಗೆ ಸಮನ್ಸ್‌ ನೀಡಲು ನಿರಾಕರಿಸಿತು.

ಕನ್ಯಾದಾನ ಎಂದರೇನು?:

ಕನ್ಯೆ ಎಂದರೆ ವಿವಾಹವಾಗದ ಹೆಣ್ಣುಮಗಳು ಎಂದರ್ಥ. ಅಂತಹ ಕನ್ಯೆಯನ್ನು ಆಕೆಯ ತಂದೆ ಮತ್ತೊಬ್ಬ ಪುರುಷನ ಸುಪರ್ದಿಗೆ ಒಪ್ಪಿಸುವ ಪ್ರಕ್ರಿಯೆಯನ್ನು ಕನ್ಯಾದಾನ ಎನ್ನಲಾಗುತ್ತದೆ. ಕನ್ಯಾದಾನ ಎನ್ನುವುದು ಹಿಂದೂ ವಿವಾಹಗಳಲ್ಲಿ ನಡೆಯುವ ಒಂದು ಶಾಸ್ತ್ರಬದ್ಧ ಪ್ರಕ್ರಿಯೆಯಾಗಿದೆ.

ಸಪ್ತಪದಿ ಎಂದರೇನು?

ಸಪ್ತಪದಿ ಎಂದರೆ ಹಿಂದೂ ದಂಪತಿಗಳು ಒಟ್ಟಿಗೆ 7 ಹೆಜ್ಜೆಗಳನ್ನು ಹಾಕಿ ಏಳು ರೀತಿಯ ಪ್ರಮಾಣಗಳನ್ನು ಮಾಡುವುದಾಗಿದೆ. ಸಾಮಾನ್ಯವಾಗಿ ಈ ಪ್ರಕ್ರಿಯೆಯನ್ನು ವಿವಾಹದ ಸಮಯದಲ್ಲಿ ತಾಳಿ ಕಟ್ಟಿದ ಬಳಿಕ ಮಾಡಲಾಗುತ್ತದೆ.

Share this article