ನಬಾರ್ಡ್‌ ಸಾಲ ಮಿತಿ ಹೆಚ್ಚಳ ಮಾಡಿ: ವಿತ್ತ ಸಚಿವೆ ನಿರ್ಮಲಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊರೆ

KannadaprabhaNewsNetwork |  
Published : Nov 22, 2024, 01:18 AM ISTUpdated : Nov 22, 2024, 04:31 AM IST
ಮುಖ್ಯಮಂತ್ರಿ ನಿಯೋಗ ವಿತ್ತ ಸಚಿವರ ಭೇಟಿ | Kannada Prabha

ಸಾರಾಂಶ

ನಬಾರ್ಡ್‌ ಅಲ್ಪಾವಧಿ ಕೃಷಿ ಸಾಲದ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು, 2024-25ನೇ ಹಣಕಾಸು ವರ್ಷದ ಸಾಲದ ಮಿತಿಯನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ   ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

 ನವದೆಹಲಿ : ನಬಾರ್ಡ್‌ ಅಲ್ಪಾವಧಿ ಕೃಷಿ ಸಾಲದ ವಿಚಾರದಲ್ಲಿ ರಾಜ್ಯಕ್ಕಾಗುತ್ತಿರುವ ಅನ್ಯಾಯದ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು, 2024-25ನೇ ಹಣಕಾಸು ವರ್ಷದ ಸಾಲದ ಮಿತಿಯನ್ನು ಹೆಚ್ಚಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.

ಕಳೆದ ಹಣಕಾಸು ವರ್ಷದಲ್ಲಿ ನಬಾರ್ಡ್‌ 5,600 ಕೋಟಿ ರು. ಸಾಲ ನೀಡಿತ್ತು. ಈ ವರ್ಷಕ್ಕೆ ನಾವು 9,162 ಕೋಟಿ ರು. ನೀಡುವಂತೆ ಬೇಡಿಕೆ ಇಟ್ಟಿದ್ದೆವು. ಆದರೆ ಕೇವಲ 2,340 ಕೋಟಿ ರು. ಮಾತ್ರ ಸಾಲ ಘೋಷಿಸಲಾಗಿದೆ. ಇದು ಕಳೆದ ಬಾರಿಗಿಂತ ಶೇ.58ರಷ್ಟು ಕಡಿಮೆ ಎಂದು ದೆಹಲಿಯಲ್ಲಿ ಗುರುವಾರ ನಿರ್ಮಲಾ ಸೀತಾರಾಮನ್‌ ರನ್ನು ಭೇಟಿಯಾದ ಸಿದ್ದರಾಮಯ್ಯ ನೇತೃತ್ವದ ರಾಜ್ಯದ ನಿಯೋಗ ಮನವರಿಕೆ ಮಾಡಲು ಪ್ರಯತ್ನಿಸಿತು.

ಕೇಂದ್ರ ಸಚಿವೆಗೆ ಈ ಕುರಿತು ವಿವರವಾದ ವರದಿ ನೀಡಿದ ಸಿದ್ದರಾಮಯ್ಯ ಅವರು, 2023-24ನೇ ಸಾಲಿನಲ್ಲಿ ಕರ್ನಾಟಕ ರೈತರಿಗೆ 22,902 ಕೋಟಿ ರು. ಅಲ್ಪಾವಧಿ ಸಾಲ ನೀಡಿತ್ತು. 2024-25ರಲ್ಲಿ 35 ಲಕ್ಷ ರೈತರಿಗೆ 25,000 ಕೋಟಿ ರು. ಅಲ್ಪಾವಧಿ ಸಾಲ ನೀಡುವ ಗುರಿ ಇರಿಸಿಕೊಂಡಿದೆ ಎಂದು ವಿವರಿಸಿದರು.

ನಬಾರ್ಡ್‌ ಸಾಲ ಮೊತ್ತ ದಿಢೀರ್‌ ಕಡಿತ ಮಾಡುವ ನಿರ್ಧಾರದಿಂದ ಕರ್ನಾಟಕದ ಕೃಷಿ ಸಹಕಾರ ಕ್ಷೇತ್ರಕ್ಕೆ ಹೊಡೆತ ಬೀಳಲಿದೆ. ಕರ್ನಾಟಕದಲ್ಲಿ ಈ ಬಾರಿ ಉತ್ತಮ ಮಳೆಯಾಗಿದ್ದು ಬೆಳೆ ಚೆನ್ನಾಗಿ ಬರುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ಕೃಷಿ ಕಾರ್ಯಗಳಿಗಾಗಿ ಸಾಲವನ್ನು ಅವರು ಎದುರು ನೋಡುತ್ತಿದ್ದಾರೆ. ಹೀಗಾಗಿ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ನಬಾರ್ಡ್‌ ಕೂಡಲೇ ಕರ್ನಾಟಕಕ್ಕೆ ನೀಡುವ ಅಲ್ಪಾವಧಿ ಕೃಷಿ ಸಾಲದ ಮೊತ್ತವನ್ನು ಪರಿಷ್ಕರಣೆ ಮಾಡಬೇಕು ಎಂದು ನಿರ್ಮಲಾ ಅವರಿಗೆ ಸಚಿವರಾದ ಬೈರತಿ ಸುರೇಶ್‌ ಮತ್ತು ಚಲುವರಾಯಸ್ವಾಮಿ ಅವರೊಂದಿಗೆ ಸಿದ್ದರಾಮಯ್ಯ ಮನವಿ ಮಾಡಿದರು.

ರೈತರಿಗೆ ಮಾಡುವ ಅನ್ಯಾಯ:

ನಂತರ ಕರ್ನಾಟಕ ಭವನದಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಸಿದ್ದರಾಮಯ್ಯ, ನಬಾರ್ಡ್ ನೀಡುವ ಸಾಲದ ಮೊತ್ತದಲ್ಲಿ ಅರ್ಧದಷ್ಟು ಕಡಿತಗೊಳಿಸಿರುವುದರಿಂದ ನಾವು ವಾಣಿಜ್ಯ ಬ್ಯಾಂಕುಗಳ ಬಳಿ ಹೋಗಬೇಕಾಗುತ್ತದೆ. ವಾಣಿಜ್ಯ ಬ್ಯಾಂಕುಗಳಲ್ಲಿ 10 ರಿಂದ 12 % ಬಡ್ಡಿ ಹಾಕುತ್ತಾರೆ. ಇದು ರೈತರಿಗೆ ಮಾಡುತ್ತಿರುವ ಅನ್ಯಾಯವಲ್ಲವೇ? ಎಂದು ಕಿಡಿಕಾರಿದರು.

ಈ ಬಗ್ಗೆ ಪ್ರಧಾನಮಂತ್ರಿ, ಕೇಂದ್ರ ಹಣಕಾಸು ಸಚಿವರಿಗೆ ಪತ್ರ ಬರೆದಿದ್ದು, ಇದನ್ನು ಆರ್‌ಬಿಐ ಒಪ್ಪಿಲ್ಲ ಎಂದು ಸಚಿವರು ಉತ್ತರ ಬರೆದಿದ್ದಾರೆ. ನಬಾರ್ಡ್ ಕೇಂದ್ರ ಸರ್ಕಾರದ ಕೆಳಗೆ ಕಾರ್ಯನಿರ್ವಹಿಸುತ್ತಿದೆ. ಹಾಗಿದ್ದರೂ ಕೇಂದ್ರ ಸಚಿವರೇ ಈ ರೀತಿ ಅಸಹಾಯಕತೆ ವ್ಯಕ್ತಪಡಿಸಿದರೆ ಹೇಗೆ? ಎಂದರು.

ನಬಾರ್ಡ್‌ನಲ್ಲಿ ಕಳೆದ ವರ್ಷ 5600 ಕೋಟಿ ರು.ಗಳನ್ನು ಅಲ್ಪಾವಧಿ ಸಾಲಕ್ಕಾಗಿ ನೀಡಲಾಗಿತ್ತು. ಈ ವರ್ಷ 2340 ಕೊಟಿ ರು. ನೀಡಿದ್ದಾರೆ. ಇದು ರೈತರಿಗೆ ಮಾಡಿರುವ ದ್ರೋಹ. ನಬಾರ್ಡ್ ನವರು 4.50% ಬಡ್ಡಿ ದರದಲ್ಲಿ ಸಾಲ ಕೊಡುತ್ತಾರೆ. ಮಾಮೂಲಿಯಾಗಿ ಸಾಲ ಕೊಡುವುದು ಯಾವಾಗಲೂ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಈ ಬಾರಿ ಎಲ್ಲಾ ರಾಜ್ಯಗಳಿಗೂ ಸಾಲ ಕಡಿತ ಮಾಡಲಾಗಿದೆ. ಈ ಕುರಿತು ನಿರ್ಮಲಾ ಸೀತಾರಾಮನ್ ರನ್ನು ಭೇಟಿಯಾಗಿ ವಿವರಿಸಲಾಗಿದೆ. ಆರು ವರ್ಷಗಳಿಂದ ಜಾಸ್ತಿ ಕೊಟ್ಟಿದ್ದು, ಈಗ ಕಡಿಮೆ ಮಾಡಿದರೆ ಹೇಗೆ? ಎಂದು ತಿಳಿಸಿದರು.

ನಮ್ಮ ಸರ್ಕಾರದಿಂದ 5 ಲಕ್ಷವರೆಗೆ ಬಡ್ಡಿರಹಿತವಾಗಿ ಸಾಲ ನೀಡಲಾಗುತ್ತಿದೆ. 4.50% ಬಡ್ಡಿ ಕೊಡುವುದು ನಮ್ಮ ಸರ್ಕಾರ. ದೀರ್ಘಾವಧಿ ಮತ್ತು ಮಧ್ಯಮಾವಧಿ ಸಾಲವನ್ನು 5-15 ಲಕ್ಷದವರೆಗೆ 3% ಬಡ್ಡಿದರದಲ್ಲಿ ನೀಡಲಾಗುತ್ತಿದೆ. 1,200 ಕೋಟಿಗಳಿಗಿಂತಲೂ ಹೆಚ್ಚು ಬಡ್ಡಿಯನ್ನು ನಾವು ನೀಡುತ್ತೇವೆ. ಈ ಬಗ್ಗೆ ಆರ್.ಅಶೋಕ್, ಬಿ.ಎಸ್.ಯಡಿಯೂರಪ್ಪ, ಯತ್ನಾಳ್, ಸಿ.ಟಿ.ರವಿ, ಎಚ್.ಡಿ.ಕುಮಾರಸ್ವಾಮಿ, ಬಿ.ವೈ.ವಿಜಯೇಂದ್ರ ಮಾತನಾಡುವುದಿಲ್ಲ ಎಂದು ಮುಖ್ಯಮಂತ್ರಿಗಳು ವ್ಯಂಗ್ಯವಾಡಿದರು.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.

Recommended Stories

ರಾಜಕೀಯ ಪಕ್ಷಗಳಿಗೆ ₹3811 ಕೋಟಿ ಫಂಡ್‌ : ಬಿಜೆಪಿಗೇ 82%!
ಕಾಂಗ್ರೆಸ್‌ನಿಂದ ದೇಶ ವಿರೋಧಿ ಚಟುವಟಿಕೆ : ಮೋದಿ ಮತ್ತೆ ತರಾಟೆ