ಆತ್ಮಭೂಷಣ್ ಕನ್ನಡಪ್ರಭ ವಾರ್ತೆ ಮಂಗಳೂರು ಜನವರಿಯಲ್ಲಿ ಅಯೋಧ್ಯೆಯಲ್ಲಿ ನಡೆಯುವ ಭವ್ಯ ಶ್ರೀರಾಮ ಮಂದಿರದ ಪ್ರತಿಷ್ಠಾಪನೆಯು ಕರ್ನಾಟಕ ಕರಾವಳಿಯ ಕನ್ನಡಿಗರೊಬ್ಬರ ಉಸ್ತುವಾರಿಯಲ್ಲಿ ನಡೆಯಲಿದೆ. ಇಡೀ ಬ್ರಹ್ಮಕಲಶೋತ್ಸವದ ಪ್ರಧಾನ ಅಧ್ವರ್ಯ ಸ್ಥಾನ ಕೂಡ ಕನ್ನಡಿಗರೇ ಆದ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಒದಗಿ ಬಂದಿದೆ. ಕರ್ನಾಟಕ-ಕೇರಳ ಗಡಿಭಾಗ ತಲಪಾಡಿಯ ರಾಜಪುರೋಹಿತ ಬಿರುದಾಂಕಿತ ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಅವರ ಉಸ್ತುವಾರಿಯಲ್ಲಿ ಬ್ರಹ್ಮಕಲಶಾಭಿಷೇಕ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ಈ ಕುರಿತು ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸದಸ್ಯರೂ ಆಗಿರುವ ಉಡುಪಿ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಅವರಿಗೆ ಆಹ್ವಾನ ನೀಡಿದ್ದಾರೆ. 48 ದಿನ ಧಾರ್ಮಿಕ ಕಾರ್ಯಕ್ರಮ: ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠೆ ಸೇರಿದಂತೆ ಬ್ರಹ್ಮಕಲಶಾಭಿಷೇಕ, ಧಾರ್ಮಿಕ ಕಾರ್ಯಕ್ರಮಗಳು ಸುಮಾರು 48 ದಿನಗಳ ಕಾಲ ವಿಧಿವತ್ತಾಗಿ ನಡೆಯಲಿವೆ. 2024 ಜನವರಿ 21ರಿಂದ ಮಾರ್ಚ್ 8ರ ಪರ್ಯಂತ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಈ ಪೈಕಿ ಜ.21ರಿಂದ 23 ಹಾಗೂ ಮಾ.8ರ ವರೆಗಿನ ಕೊನೆಯ ಮೂರು ದಿನಗಳ ಪ್ರಮುಖ ಪ್ರತಿಷ್ಠೆ ಮತ್ತು ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮಗಳ ಉಸ್ತುವಾರಿಯನ್ನು ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯರಿಗೆ ವಹಿಸಲಾಗಿದೆ. ಪೇಜಾವರಶ್ರೀ ಪ್ರಧಾನ ಅಧ್ವರ್ಯ: ಅಯೋಧ್ಯೆ ಮಂದಿರದಲ್ಲಿ ಶ್ರೀರಾಮನ ಪ್ರಾಣ ಪ್ರತಿಷ್ಠೆಯನ್ನು ಪ್ರಧಾನ ಅಧ್ವರ್ಯ ಸ್ಥಾನದಿಂದ ಸ್ವತಃ ಪೇಜಾವರ ಮಠಾಧೀಶ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನೆರವೇರಿಸಲಿದ್ದು, ಪ್ರಧಾನಿ ಸಹಿತ ದೇಶಾದ್ಯಂತದ ಸಾಧು, ಸಂತರು, ಗಣ್ಯರು ಇದಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೇಜಾವರ ಹಿರಿಯ ಶ್ರೀಗಳ ನೆಚ್ಚಿನ ಶಿಷ್ಯ: ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯ ಅವರು ತಲಪಾಡಿ ನಿವಾಸಿಯಾದರೂ ಪ್ರಸಕ್ತ ವಾಸ ಚೆನ್ನೈನಲ್ಲಿ. ಇವರು ಪೇಜಾವರ ಮಠದ ಹಿರಿಯ ಶ್ರೀಗಳಾಗಿದ್ದ ವಿಶ್ವೇಶ ತೀರ್ಥರ ಅಚ್ಚುಮೆಚ್ಚಿನ ಶಿಷ್ಯರಾಗಿದ್ದರು. ಬೆಂಗಳೂರಿನ ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ 11 ವರ್ಷಗಳ ಕಾಲ ವಿದ್ಯಾರ್ಜನೆ ನಡೆಸಿದ ವಿಷ್ಣುಮೂರ್ತಿ ಆಚಾರ್ಯರು ಬಳಿಕ ಎರಡು ವರ್ಷ ಕಾಲ ವಿಶ್ವೇಶತೀರ್ಥ ಸ್ವಾಮೀಜಿ ಜತೆಗಿದ್ದು, ಸುಧಾ ಮಂಗಲ ಅಧ್ಯಯನ ನಡೆಸಿದ್ದರು. 1992ರಲ್ಲಿ ಅಯೋಧ್ಯೆಯಲ್ಲಿ ಕರಸೇವೆ ಸಂದರ್ಭ ಗುಂಬಜ್ ಉರುಳಿಸಿದಾಗ ವಿಷ್ಣುಮೂರ್ತಿ ಆಚಾರ್ಯರು ಕೂಡ ವಿಶ್ವೇಶ ತೀರ್ಥರ ಜತೆಗೆ ಇದ್ದರು. ಅಲ್ಲಿ ರಾಮನ ಜನ್ಮಸ್ಥಾನದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯನ್ನು ತಾತ್ಕಾಲಿಕವಾಗಿ ಪ್ರತಿಷ್ಠಾಪಿಸುವಲ್ಲಿ ವಿಶ್ವೇಶ ತೀರ್ಥರಿಗೆ ಸಾಥ್ ನೀಡಿದ್ದು ಕೂಡ ಇದೇ ವಿಷ್ಣುಮೂರ್ತಿ ಆಚಾರ್ಯರು. ಬಳಿಕ ಚೆನ್ನೈಗೆ ತೆರಳಿ, ಅಲ್ಲಿ ಉಡುಪಿ ಪೇಜಾವರ ಶಾಖಾ ಮಠದಲ್ಲಿ ಪೌರೋಹಿತ್ಯ ನಡೆಸುತ್ತಿದ್ದರು. ಪ್ರಧಾನಿ ದಿ. ನರಸಿಂಹ ರಾವ್ ಅವರಿಗೆ ಮದ್ರಾಸಿನಲ್ಲಿ ನವಗ್ರಹ ಹವನವನ್ನು ಪೇಜಾವರ ಹಿರಿಯಶ್ರೀಗಳ ಸಲಹೆ ಮೇರೆಗೆ ವಿಷ್ಣುಮೂರ್ತಿ ಆಚಾರ್ಯರೇ ನೆರವೇರಿಸಿದ್ದರು. ಪೇಜಾವರ ಹಿರಿಯಶ್ರೀಗಳ ವೃಂದಾವನ ಕೂಡ ವಿಷ್ಣುಮೂರ್ತಿ ಆಚಾರ್ಯರ ನೇತೃತ್ವದಲ್ಲಿ ನಿರ್ಮಾಣವಾಗಿತ್ತು. ‘ನಮ್ಮ ಸಹೋದರ ವಿದ್ವಾನ್ ವಿಷ್ಣುಮೂರ್ತಿ ಆಚಾರ್ಯರಿಗೆ ಶ್ರೀರಾಮನ ಜನ್ಮಸ್ಥಾನ ಅಯೋಧ್ಯೆಯಲ್ಲಿ ಬ್ರಹ್ಮಕಲಶೋತ್ಸವದ ನೇತೃತ್ವ ದೊರಕಿರುವುದು ತುಂಬ ಸಂತಸಲಾಗಿದೆ. ಈ ಗೌರವ, ಅವಕಾಶ ದೊರೆತಿರುವುದು ಇಡೀ ಕರಾವಳಿ, ಕರ್ನಾಟಕಕ್ಕೆ ಹೆಮ್ಮೆಯ ಸಂಗತಿ’ ಎನ್ನುತ್ತಾರೆ ವೇ.ಮೂ.ಗಣೇಶ್ ಭಟ್. ಇವರು ತಲಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾಗಿದ್ದಾರೆ. ------------------