ಪಿಒಕೆ ಖಾಲಿ ಮಾಡಿ: ಪಾಕ್‌ಗೆ ಭಾರತದ ಸಂದೇಶ

KannadaprabhaNewsNetwork | Published : May 13, 2025 11:49 PM
ಭಾರತ | Kannada Prabha

ಸಾರಾಂಶ

ಭಾರತ ಮತ್ತು ಪಾಕಿಸ್ತಾನ ನಡುವೆ ಬಾಕಿ ಇರುವ ಏಕೈಕ ವಿಷಯವೆಂದರೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಸ್ತಾಂತರಿಸುವುದು ಎಂದು ಪುನರುಚ್ಚರಿಸಿದೆ. ಈ ಮೂಲಕ ಪಿಒಕೆ ಖಾಲಿ ಮಾಡಿ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಮತ್ತೊಮ್ಮೆ ರವಾನಿಸಿದೆ.

ಪಿಒಕೆ ಹಸ್ತಾಂತರವೊಂದೇ ಬಾಕಿ ಉಳಿದಿರುವ ವಿಷಯ

ಅಣ್ವಸ್ತ್ರ ಗುಡ್ಡದ ಮೇಲೆ ದಾಳಿ ಪಾಕ್‌ ಖಚಿತಪಡಿಸಬೇಕು

ಕಾಶ್ಮೀರ ವಿಷಯಕ್ಕೆ ಟ್ರಂಪ್‌ ಮಧ್ಯಸ್ಥಿಕೆ ಬೇಕಿಲ್ಲ: ಸ್ಪಷ್ಟನೆ

==

ನವದೆಹಲಿ: ಭಾರತ ಮತ್ತು ಪಾಕಿಸ್ತಾನ ನಡುವೆ ಬಾಕಿ ಇರುವ ಏಕೈಕ ವಿಷಯವೆಂದರೆ ಪಾಕ್‌ ಆಕ್ರಮಿತ ಕಾಶ್ಮೀರವನ್ನು ಹಸ್ತಾಂತರಿಸುವುದು ಎಂದು ಪುನರುಚ್ಚರಿಸಿದೆ. ಈ ಮೂಲಕ ಪಿಒಕೆ ಖಾಲಿ ಮಾಡಿ ಎಂಬ ಸಂದೇಶವನ್ನು ಪಾಕಿಸ್ತಾನಕ್ಕೆ ಮತ್ತೊಮ್ಮೆ ರವಾನಿಸಿದೆ.

ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್‌ ಜೈಸ್ವಾಲ್‌, ಪಾಕಿಸ್ತಾನಕ್ಕೆ ಈ ಸಂದೇಶ ರವಾನಿಸಿದ್ದಾರೆ. ಜೊತೆಗೆ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು. ಅದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕಾಶ್ಮೀರ ಸಮಸ್ಯೆ ಇತ್ಯರ್ಥಕ್ಕೆ ಮಧ್ಯಸ್ಥಿಕೆ ವಹಿಸುವುದಾಗಿ ಹೇಳಿದ ಅಮೆರಿಕ ಅಧ್ಯಕ್ಷ ಟ್ರಂಪ್ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ಭಾರತದ ಕೇಂದ್ರಾಡಳಿತ ಪ್ರದೇಶವಾದ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಬೇಕು ಎಂಬುದು ನಮ್ಮ ದೀರ್ಘಕಾಲದ ರಾಷ್ಟ್ರೀಯ ನಿಲುವು. ಆ ನೀತಿ ಬದಲಾಗಿಲ್ಲ. ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಭಾರತೀಯ ಪ್ರದೇಶವನ್ನು ಬಿಟ್ಟುಕೊಡುವುದೊಂದೇ ಬಾಕಿ ಇರುವ ವಿಷಯ’ ಎಂದರು.

‘ಈ ಬಾರಿಯ ಸಂಘರ್ಷದಲ್ಲಿ ಪರಮಾಣು ಶಕ್ತಿಯ ಬಳಕೆಯನ್ನು ಸ್ವತಃ ಪಾಕಿಸ್ತಾನದ ವಿದೇಶಾಂಗ ಸಚಿವರು ನಿರಾಕರಿಸಿದ್ದಾರೆ. ಭಾರತವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಮತ್ತು ಅದನ್ನು ಬಳಸಿಕೊಂಡು ಗಡಿಯಾಚೆಗಿನ ಭಯೋತ್ಪಾದನೆಯನ್ನು ನಡೆಸಲು ಬಿಡುವುದಿಲ್ಲ ಎಂಬ ದೃಢ ನಿಲುವನ್ನು ಹೊಂದಿದೆ ಎಂದರು. ಜೊತೆಗೆ ಪಾಕಿಸ್ತಾನ ಅಣ್ವಸ್ತ್ರ ಸಂಗ್ರಹಾಗಾರಗಳ ಬಳಿ ದಾಳಿ ಆಗಿದೆಯೋ ಇಲ್ಲವೋ ಎಂಬ ವಿಷಯವನ್ನು ಪಾಕಿಸ್ತಾನವೇ ಸ್ಪಷ್ಟಪಡಿಸಬೇಕು ಎಂದರು.

PREV