ಅಧಿಕಾರಕ್ಕೇರಿದ23 ತಿಂಗಳಲ್ಲೇಬ್ರಿಟನ್‌ ಪ್ರಧಾನಿ ಕೀರ್‌ ಗುಡ್‌ಬೈ!

KannadaprabhaNewsNetwork |  
Published : Jun 23, 2026, 03:45 AM ISTUpdated : Jun 23, 2026, 04:39 AM IST
Briton

ಸಾರಾಂಶ

ಬ್ರಿಟನ್‌ ರಾಜಕೀಯದಲ್ಲಿ ನಾಯಕತ್ವ ಬಿಕ್ಕಟ್ಟಿನ ಪರ್ವ ಮುಂದುವರೆದಿದ್ದು, ಹಾಲಿ ಪ್ರಧಾನಿ ಮತ್ತು ಲೇಬರ್‌ ಪಕ್ಷದ ನಾಯಕ ಕೀರ್‌ ಸ್ಟಾರ್ಮರ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.

 ಲಂಡನ್‌: ಬ್ರಿಟನ್‌ ರಾಜಕೀಯದಲ್ಲಿ ನಾಯಕತ್ವ ಬಿಕ್ಕಟ್ಟಿನ ಪರ್ವ ಮುಂದುವರೆದಿದ್ದು, ಹಾಲಿ ಪ್ರಧಾನಿ ಮತ್ತು ಲೇಬರ್‌ ಪಕ್ಷದ ನಾಯಕ ಕೀರ್‌ ಸ್ಟಾರ್ಮರ್‌ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ. 2 ವರ್ಷ ಅಧಿಕಾರ ಪೂರೈಸುವ ಮುನ್ನವೇ ಅವರ ರಾಜೀನಾಮೆಯೊಂದಿಗೆ ಕಳೆದ 5 ವರ್ಷದಲ್ಲಿ ಬ್ರಿಟನ್‌ನಲ್ಲಿ 4ನೇ ಬಾರಿಗೆ ಪ್ರಧಾನಿಯೊಬ್ಬರು ರಾಜೀನಾಮೆ ನೀಡಿದಂತಾಗಲಿದೆ. ಜೊತೆಗೆ ಕಳೆದ 10 ವರ್ಷದಲ್ಲಿ ಬ್ರಿಟನ್‌ನಲ್ಲಿ 7ನೇ ಪ್ರಧಾನಿಯನ್ನು ಕಾಣುವತ್ತ ಹೆಜ್ಜೆ ಹಾಕಿದೆ.

ಹೊಸ ಪ್ರಧಾನಿ ಆಯ್ಕೆಯಾಗುವವರೆಗೂ ಕೀರ್‌ ತಮ್ಮ ಹುದ್ದೆಯಲ್ಲಿ ಮುಂದುವರೆಯಲಿದ್ದಾರೆ. ಸ್ಟಾರ್ಮರ್‌ ಈಗ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ವೇಳಾಪಟ್ಟಿಯನ್ನು ನಿಗದಿಪಡಿಸುವಂತೆ ಲೇಬರ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಕೇಳಲಿದ್ದಾರೆ. ಜು.9ರಂದು ನಾಮನಿರ್ದೇಶನಗಳು ಪ್ರಾರಂಭವಾಗಿ, ಜು.17ರ ವೇಳೆಗೆ ಇಡೀ ಪ್ರಕ್ರಿಯೆ ಪೂರ್ಣಗೊಳ್ಳುತ್ತದೆ. ಬಳಿಕ ಅವರು ಹುದ್ದೆ ತೊರೆಯಲಿದ್ದಾರೆ.

ರಾಜೀನಾಮೆ:

ಲಂಡನ್‌ನ ಡೌನಿಂಗ್‌ ಸ್ಟ್ರೀಟ್‌ನಲ್ಲಿ ಮಾತನಾಡಿದ ಪ್ರಧಾನಿ ಕೀರ್‌, ‘ನಾನು ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರವೂ ನಾನು ಪ್ರೀತಿಸುವ ದೇಶಕ್ಕೆ ಮೊದಲ ಆದ್ಯತೆ ನೀಡುವುದಾಗಿರುತ್ತದೆ. ಅದಕ್ಕಾಗಿಯೇ ಲೇಬರ್ ಪಕ್ಷದ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ದೊರೆ ಚಾರ್ಲ್ಸ್-3 ಅವರನ್ನು ಭೇಟಿಯಾಗಿ ಈ ನಿರ್ಧಾರ ತಿಳಿಸಿದ್ದೇನೆ’ ಎಂದಿದ್ದಾರೆ.

ರಾಜೀನಾಮೆಗೆ ಕಾರಣ:

ಇತ್ತೀಚಿನ ಸ್ಥಳೀಯ ಚುನಾವಣೆಗಳಲ್ಲಿ ಲೇಬರ್‌ ಪಕ್ಷ ಹೀನಾಯವಾಗಿ ಸೋತಿತ್ತು. ಹೀಗಾಗಿ ಮುಂದಿನ ಸಾರ್ವತ್ರಿಕ ಚುನಾವಣೆಯನ್ನು ಸ್ಟಾರ್ಮರ್ ನೇತೃತ್ವದಲ್ಲಿ ನಡೆಸುವುದು ಬೇಡ ಎಂದು ಹಲವು ಸಂಸದರು ಧ್ವನಿ ಎತ್ತಿದ್ದರು. ಹಲವು ಹಿರಿಯ ನಾಯಕರು ರಾಜೀನಾಮೆ ನೀಡಿದ್ದರು. 2024ರ ಚುನಾವಣೆ ಸಮಯದಲ್ಲಿ ನೀಡಿದ್ದ ಭರವಸೆಗಳನ್ನು ಸಮರ್ಪಕವಾಗಿ ಜಾರಿಗೆ ತರುವಲ್ಲಿ ಸ್ಟಾರ್ಮರ್‌ ವಿಫಲರಾಗಿದ್ದರು. ಅಲ್ಲದೆ, ಹಲವು ವಿವಾದಗಳಲ್ಲೂ ಸಿಲುಕುವಂತಾಯಿತು. ಮುಖ್ಯವಾಗಿ ಕುಖ್ಯಾತ ಲೈಂಗಿಕ ಆರೋಪಿ ಜೆಫ್ರಿ ಎಪ್‌ಸ್ಟೀನ್‌ ಜತೆ ನಂಟು ಹೊಂದಿದ್ದ ಪೀಟರ್‌ ಮ್ಯಾಂಡಲ್ಸನ್‌ರನ್ನು ಅಮೆರಿಕಕ್ಕೆ ರಾಯಭಾರಿಯನ್ನಾಗಿ ನೇಮಿಸಿದ್ದು, ಭಾರಿ ಆಕ್ರೋಶಕ್ಕೆ ಕಾರಣವಾಯಿತು.

10 ವರ್ಷದಲ್ಲಿ 7 ಪಿಎಂ:

ಕಳೆದ 10 ವರ್ಷದಲ್ಲಿ ಬ್ರಿಟನ್ ಪ್ರಧಾನಿಯಾಗಿ ಡೇವಿಡ್‌ ಕ್ಯಾಮರೂನ್‌, ಥೆರೇಸಾ ಮೇ, ಬೋರಿಸ್‌ ಜಾನ್ಸನ್‌, ಲಿಜ್‌ ಟ್ರಸ್‌, ರಿಷಿ ಸುನಕ್‌, ಕೀರ್‌ ಸ್ಟಾರ್ಮರ್‌ ಸೇವೆ ಸಲ್ಲಿಸಿದ್ದಾರೆ.

ಯಾರು ಉತ್ತರಾಧಿಕಾರಿ?:

ಮುಂದಿನ ಪ್ರಧಾನಿ ಹುದ್ದೆಗೆ ಸಂಸದ ಆ್ಯಂಡಿ ಬರ್ನ್‌ಹ್ಯಾಂ ಹೆಸರು ಹೆಚ್ಚು ಕೇಳಿಬರುತ್ತಿದೆ. ಪಕ್ಷದೊಳಗೆ ಅಧಿಕ ಬೆಂಬಲವೂ ಈತನಿಗೇ ಇದೆ. ಮಾಜಿ ಸಚಿವರಾದ ವೆಸ್‌ ಸ್ಟ್ರೀಟಿಂಗ್‌, ಎಐ ಕಾರ್ನ್ಸ್‌, ಸಂಸದೆ ಆ್ಯಂಜೆಲಾ ರೇನರ್‌, ಪಾಕ್ ಮೂಲಕ ಶಬಾನಾ ಮಹಮ್ಮದ್‌ ಕೂಡಾ ಪೈಪೋಟಿಯಲ್ಲಿದ್ದಾರೆ.

ಬಿಕ್ಕಟ್ಟಿನ ಗೂಡು

- ಬ್ರಿಟನ್‌ನಲ್ಲಿ ಕಳೆದ 10 ವರ್ಷದಿಂದ ರಾಜಕೀಯ ಅಸ್ಥಿರತೆ

- 10 ವರ್ಷಗಳಲ್ಲಿ 7 ಪ್ರಧಾನಮಂತ್ರಿಗಳ ಕಂಡ ಇಂಗ್ಲೆಂಡ್‌

- ಇತ್ತೀಚೆಗೆ ಪ್ರಧಾನಿ ಸ್ಟಾರ್ಮರ್‌ ಬಗ್ಗೆಯೂ ಅಸಮಾಧಾನ

- ಸ್ಥಳೀಯ ಚುನಾವಣೆಯಲ್ಲಿ ಸೋತಿದ್ದ ಅವರ ಲೇಬರ್‌ ಪಕ್ಷ

- ಭರವಸೆಗಳ ಸಮರ್ಪಕ ಜಾರಿಯಲ್ಲೂ ಎಡವಿದ್ದ ಸ್ಟಾರ್ಮರ್‌

- ಎಪ್ಸ್ಟೀನ್‌ ಲೈಂಗಿಕ ಹಗರಣಕ್ಕೂ ಕೇಳಿಬಂದಿದ್ದ ನಂಟು

- ಹೀಗಾಗಿ ಕೀರ್ ಸ್ಟಾರ್ಮರ್ ಪದತ್ಯಾಗಕ್ಕೆ ಹೆಚ್ಚಿದ್ದ ಒತ್ತಡ

- ಆ್ಯಂಡಿ ಬರ್ನ್‌ಹ್ಯಾಂ ಮುಂದಿನ ಪ್ರಧಾನಿ ಸಂಭವ

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಕತಾರ್‌ ಅನಿಲ ಘಟಕ ಸ್ಫೋಟ : 12 ಮಂದಿ ಭಾರತೀಯರ ಸಾವು
ಕಾರ್ಪೊರೆಟ್‌ ಕಂಪನಿ ಬಾಸ್‌ ಮೇಲೆ ಬಾಸ್‌ ಸ್ಕ್ಯಾಮ್‌ ದಾಳಿ