ಲಂಡನ್: ನಿರೀಕ್ಷೆಯಂತೆ ಬ್ರಿಟನ್‌ನ ಲೋಕಸಭೆ ಚುನಾವಣೆಯಲ್ಲಿ ಹಾಲಿ ಪ್ರಧಾನಿ ರಿಷಿ ಸುನಕ್ ಅವರ ಕನ್ಸರ್ವೇಟಿವ್ ಪಕ್ಷಕ್ಕೆ ಭಾರೀ ಸೋಲುಂಟಾಗಿದ್ದು, ಲೇಬರ್ ಪಕ್ಷ ಭರ್ಜರಿ ಜಯ ಸಾಧಿಸಿದೆ. ಅದರ ಬೆನ್ನಲ್ಲೇ, 20 ತಿಂಗಳಿನಿಂದ ಪ್ರಧಾನಿಯಾಗಿದ್ದ ಇನ್ಫೋಸಿಸ್ ಸಂಸ್ಥಾಪಕ, ಕನ್ನಡಿಗ ಎನ್.ಆರ್.ನಾರಾಯಣ ಮೂರ್ತಿ ಮತ್ತು ಡಾ। ಸುಧಾಮೂರ್ತಿ ದಂಪತಿಯ ಅಳಿಯ ರಿಷಿ ಸುನಕ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಜೊತೆಗೆ, ಕನ್ಸರ್ವೇಟಿವ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ಪ್ರಕಟಿಸಿದ್ದಾರೆ.
ಲೇಬರ್ ಪಕ್ಷದ ಜಯದೊಂದಿಗೆ 14 ವರ್ಷದಿಂದ ಅಧಿಕಾರದಲ್ಲಿದ್ದ ಕನ್ಸರ್ವೇಟಿವ್ ಪಕ್ಷದ ಆಡಳಿತ ಕೊನೆಗೊಂಡಿದೆ. ವಿಜೇತ ಲೇಬರ್ ಪಕ್ಷದಿಂದ ಕೀರ್ ಸ್ಟಾರ್ಮರ್ (61) ಅವರನ್ನು ನೂತನ ಪ್ರಧಾನಿ ಎಂದು ಬ್ರಿಟನ್ ಅರಸ ಚಾರ್ಲ್ಸ್-3 ಪ್ರಕಟಿಸಿದ್ದಾರೆ. ಇದರ ನಡುವೆ, ‘ಬ್ರಿಟನ್‌ನಲ್ಲಿ ಇನ್ನು ಹೊಸ ಯುಗ ಆರಂಭವಾಗಲಿದೆ. ದೇಶವನ್ನು ಮರುನಿರ್ಮಾಣ ಮಾಡುವೆ’ ಎಂದು ಸ್ಟಾರ್ಮರ್ ಹೇಳಿದ್ದಾರೆ.
650 ಸದಸ್ಯ ಬಲದ ಬ್ರಿಟನ್ ಸಂಸತ್ತಿಗೆ ಗುರುವಾರ ನಡೆದ ಚುನಾವಣೆಯ ಫಲಿತಾಂಶ ಶುಕ್ರವಾರ ಪ್ರಕಟವಾಯಿತು. ಲೇಬರ್ ಪಕ್ಷ 400ಕ್ಕೂ ಹೆಚ್ಚು ಸ್ಥಾನಗಳನ್ನೂ, ಕನ್ಸರ್ವೇಟಿವ್ ಪಕ್ಷ 120 ಕ್ಕೂ ಹೆಚ್ಚು ಸ್ಥಾನಗಳನ್ನೂ ಪಡೆದುಕೊಂಡಿತು. ಇನ್ನುಳಿದ ಸ್ಥಾನಗಳಲ್ಲಿ ಬೇರೆ ಬೇರೆ ಪಕ್ಷಗಳು ಜಯ ಸಾಧಿಸಿದವು. ಬಹುಮತಕ್ಕೆ 326 ಸ್ಥಾನಗಳು ಬೇಕಾಗಿದ್ದವು. ಕನ್ಸರ್ವೇಟಿವ್ ಪಕ್ಷದಿಂದ ಘಟಾನುಘಟಿ ನಾಯಕರು ಸೋಲುಂಡಿದ್ದು, ಮಾಜಿ ಪ್ರಧಾನಿ ಲಿಜ್ ಟ್ರಸ್ ಸೇರಿದಂತೆ ಒಂಭತ್ತು ಕ್ಯಾಬಿನೆಟ್ ಸಚಿವರು ಕೂಡ ಪರಾಭವಗೊಂಡಿದ್ದಾರೆ. ರಿಷಿ ಸುನಕ್ ತಮ್ಮ ರಿಚ್ಮಂಡ್ ಕ್ಷೇತ್ರದಲ್ಲಿ ಜಯ ಗಳಿಸಿದ್ದಾರೆ.
ಸುನಕ್ ಸೋಲಿಗೆ ಏನು ಕಾರಣ?:
ರಾಜಕೀಯ ಅಸ್ಥಿರತೆ, ಆರ್ಥಿಕ ಸಮಸ್ಯೆ, ಹಣದುಬ್ಬರ, ವಲಸಿಗರ ಸಮಸ್ಯೆ ಸೇರಿದಂತೆ ನಾನಾ ಬಿಕ್ಕಟ್ಟುಗಳನ್ನು ಬ್ರಿಟನ್ ಎದುರಿಸುತ್ತಿತ್ತು. ಇದನ್ನು ಪರಿಹರಿಸುವಲ್ಲಿ ಸುನಕ್ ವಿಫಲರಾಗಿದ್ದಾರೆ ಎಂಬ ಆರೋಪವಿತ್ತು. ಆಡಳಿತಾರೂಢ ಕನ್ಸರ್ವೇಟಿವ್ ಪಕ್ಷ ಸೋಲನುಭವಿಸುವುದು ಈ ಬಾರಿಯ ಚುನಾವಣೆಯಲ್ಲಿ ನಿರೀಕ್ಷಿತವಾಗಿತ್ತು.
ರಿಷಿ ಸುನಕ್ ರಾಜೀನಾಮೆ:
44 ವರ್ಷದ ರಿಷಿ ಸುನಕ್ ತಮ್ಮ ಪಕ್ಷದ ಸೋಲಿನ ಹೊಣೆಯನ್ನು ತಾವೇ ಸಂಪೂರ್ಣ ಹೊರುವುದಾಗಿ ಪ್ರಕಟಿಸಿದ್ದಾರೆ. ಅಲ್ಲದೆ, ಕಿಂಗ್ ಚಾರ್ಲ್ಸ್ ಅವರನ್ನು ಭೇಟಿಯಾಗಿ ಪ್ರಧಾನಿ ಹುದ್ದೆಗೆ ರಾಜೀನಾಮೆ ಸಲ್ಲಿಸಿದ್ದಾರೆ. ಅದರ ಬೆನ್ನಲ್ಲೇ, ನೂತನ ಪ್ರಧಾನಿಯಾಗಲಿರುವ ಕೀರ್ ಸ್ಟಾರ್ಮರ್ ಮತ್ತು ಅವರ ಲೇಬರ್ ಪಕ್ಷಕ್ಕೆ ಶುಭ ಹಾರೈಸಿದ್ದಾರೆ.
ತಮ್ಮ ಪಕ್ಷ ಸೋಲನುಭವಿಸಿದ ಬಳಿಕ ಭಾವುಕರಾಗಿ ವಿದಾಯ ಭಾಷಣ ಮಾಡಿದ ಅವರು, ‘ಮೊದಲನೆಯದಾಗಿ ನಾನು ಕ್ಷಮೆ ಕೇಳುತ್ತೇನೆ. ಸಂಪೂರ್ಣ ಬದ್ಧತೆಯೊಂದಿಗೆ ಕೆಲಸ ಮಾಡಿದ್ದರೂ ಮತದಾರರಾದ ನೀವು ಬ್ರಿಟನ್‌ನಲ್ಲಿ ಬದಲಾವಣೆ ಬಯಸಿದ್ದೀರಿ. ನಿಮ್ಮ ತೀರ್ಪೇ ಅಂತಿಮ. ನಿಮ್ಮ ಸಿಟ್ಟು ಹಾಗೂ ಬೇಸರ ನನ್ನ ಗಮನಕ್ಕೆ ಬಂದಿದೆ. ಈ ನಷ್ಟದ ಸಂಪೂರ್ಣ ಹೊಣೆ ನಾನೇ ಹೊರುತ್ತೇನೆ. ನಮ್ಮ ಪಕ್ಷದಲ್ಲಿ ಉತ್ತರಾಧಿಕಾರಿ ಆಯ್ಕೆಯಾದ ಬಳಿಕ ಅಧ್ಯಕ್ಷ ಸ್ಥಾನಕ್ಕೂ ರಾಜೀನಾಮೆ ನೀಡುತ್ತೇನೆ. ಹೊಸ ಪ್ರಧಾನಿ ಕೀರ್ ಸ್ಟಾರ್ಮರ್ ಅವರ ಯಶಸ್ಸು ನಮ್ಮೆಲ್ಲರ ಯಶಸ್ಸಾಗಲಿದೆ’ ಎಂದು ಹೇಳಿದರು.
ದೀಪಾವಳಿ ಆಚರಣೆಯ ಸ್ಮರಣೆ:
ರಿಷಿ ಸುನಕ್ ವಿದಾಯ ಭಾಷಣದ ವೇಳೆ ಅವರ ಪತ್ನಿ ಅಕ್ಷತಾ ಮೂರ್ತಿ ಜೊತೆಗಿದ್ದರು. ‘ನನ್ನ ಪೂರ್ವಜರು ಬ್ರಿಟನ್‌ಗೆ ವಲಸೆ ಬಂದ ಎರಡು ತಲೆಮಾರಿನ ಬಳಿಕ ನಾನು ಪ್ರಧಾನಿಯಾಗುವುದು ಸಾಧ್ಯವಾಯಿತು. ಇದು ಬ್ರಿಟನ್‌ನ ಪ್ರಜಾಪ್ರಭುತ್ವದ ಸೌಂದರ್ಯ. ನನ್ನಿಬ್ಬರು ಪುಟ್ಟ ಹೆಣ್ಣುಮಕ್ಕಳು ಡೌನಿಂಗ್ ಸ್ಟ್ರೀಟ್‌ನಲ್ಲಿ ದೀಪಾವಳಿಯ ದೀಪ ಹಚ್ಚುವುದನ್ನು ನೋಡಿ ಸಂತಸಗೊಳ್ಳುವ ಭಾಗ್ಯ ನನ್ನದಾಗಿತ್ತು. ಈ ಎಲ್ಲ ಅವಕಾಶಗಳಿಗಾಗಿ ಧನ್ಯವಾದಗಳು’ ಎಂದು ರಿಷಿ ಹೇಳಿದರು.