ಹಸ್ತಕ್ಷೇಪ ನಿಲ್ಲಿಸಿ ಎಂದ ಸಿದ್ದು, ಡಿಕೆ ಕೇರಳ ಸಿಎಂ ತಿರುಗೇಟು

Published : Jan 02, 2026, 06:22 AM IST
Cm pinarayi vijayan

ಸಾರಾಂಶ

ಬೆಂಗಳೂರಿನ ಯಲಹಂಕದ ಕೋಗಿಲು ಪ್ರದೇಶದಲ್ಲಿ ನಡೆದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ‘ಬುಲ್ಡೋಜರ್‌ ನ್ಯಾಯ’ ಎಂದು ಟೀಕಿಸಿ, ಕರ್ನಾಟಕ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘

ತಿರುವನಂತಪುರಂ : ಬೆಂಗಳೂರಿನ ಯಲಹಂಕದ ಕೋಗಿಲು ಪ್ರದೇಶದಲ್ಲಿ ನಡೆದ ಅಕ್ರಮ ಮನೆಗಳ ತೆರವು ಕಾರ್ಯಾಚರಣೆಯನ್ನು ‘ಬುಲ್ಡೋಜರ್‌ ನ್ಯಾಯ’ ಎಂದು ಟೀಕಿಸಿ, ಕರ್ನಾಟಕ ಸರ್ಕಾರದ ಆಕ್ರೋಶಕ್ಕೆ ಗುರಿಯಾಗಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ‘ಇಂತಹ ವಿಷಯಗಳ ಬಗ್ಗೆ ಪ್ರತಿಕ್ರಿಯಿಸಲು ರಾಜ್ಯದ ಗಡಿ ಅಡ್ಡ ಬರುವುದಿಲ್ಲ’ ಎನ್ನುವ ಮೂಲಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಪ್ರತಿಕ್ರಿಯೆಯನ್ನು ರಾಜ್ಯಕ್ಕೆ ಸೀಮಿತವಾಗಿರಿಸಿಕೊಳ್ಳುವುದಿಲ್ಲ

ಕರ್ನಾಟಕದ ಆಂತರಿಕ ವಿಷಯದಲ್ಲಿ ಮೂಗು ತೂರಿಸದಂತೆ ಕರ್ನಾಟಕ ಸರ್ಕಾರ ಎಚ್ಚರಿಸಿತ್ತು. ಈ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯನ್‌, ಇಂತಹ ನೆಲಸಮ ಕಾರ್ಯಾಚರಣೆಗಳು ನಡೆದಾಗ ಅಥವಾ ಅಲ್ಪಸಂಖ್ಯಾತರ ಹಕ್ಕುಗಳ ಪ್ರಶ್ನೆ ಉದ್ಭವಿಸಿದಾಗ ನನ್ನ ಪ್ರತಿಕ್ರಿಯೆಯನ್ನು ರಾಜ್ಯಕ್ಕೆ ಸೀಮಿತವಾಗಿರಿಸಿಕೊಳ್ಳುವುದಿಲ್ಲ. ಅಂತಹ ವಿಷಯಗಳಲ್ಲಿ ಅತ್ಯಂತ ಕಠಿಣ ಪ್ರತಿಕ್ರಿಯೆ ನೀಡುತ್ತೇನೆ. ಗಾಜಾದಂತಹ ಬೇರೆ ವಿಷಯಗಳ ಬಗ್ಗೆಯೂ ಪ್ರತಿಕ್ರಿಯೆ ನೀಡಿದ್ದೇನೆ ಎಂದು ಹೇಳಿದರು.

‘ಬುಲ್ಡೋಜರ್‌ ಬಳಸಿ ಅಸಹಾಯಕ ಜನರನ್ನು ನಿರಾಶ್ರಿತರನ್ನಾಗಿಸಿದಾಗ ಆ ಬಗ್ಗೆ ಪ್ರತಿಕ್ರಿಯೆ ವ್ಯಕ್ತವಾಗುವುದು ಸಹಜ’ ಎಂದು ತಿಳಿಸಿದರು.

ಇತ್ತೀಚೆಗೆ ಸಿಎಂ ಸಿದ್ದರಾಮಯ್ಯ ಅವರನ್ನು ವರ್ಕಳದಲ್ಲಿ ಭೇಟಿಯಾದ ವೇಳೆ ಬೆಂಗಳೂರು ಮನೆಗಳ ತೆರವು ಕಾರ್ಯಾಚರಣೆ ಬಗ್ಗೆ ಅವರೊಂದಿಗೆ ಮಾತುಕತೆ ನಡೆಸಿದಿರಾ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ‘ಸಚಿವ ಸಂಪುಟ ಸಭೆಗೆ ತಡವಾಗಿದ್ದರಿಂದ ಕಾರ್ಯಕ್ರಮದಿಂದ ಬೇಗ ಹೊರಟೆ’ ಎಂದಿದ್ದಾರೆ. ಈ ಮೂಲಕ, ಸಿದ್ದರಾಮಯ್ಯನವರೊಂದಿಗಿನ ಮುಖಾಮುಖಿ ಭೇಟಿ ವೇಳೆ ಆ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ತೆರವು ಕಾರ್ಯಾಚರಣೆ ಬಗ್ಗೆ ಕಳೆದ ತಿಂಗಳು ಫೇಸ್‌ಬುಕ್‌ ಬರಹದ ಮೂಲಕ ಪ್ರತಿಕ್ರಿಯಿಸಿದ್ದ ವಿಜಯನ್‌, ಉತ್ತರ ಭಾರತದಲ್ಲಿ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆಸಲಾಗುತ್ತಿರುವ ಒಂದು ಬಗೆಯ ಕಾರ್ಯಾಚರಣೆಯನ್ನು ಬೆಮಗಳೂರು ಘಟನೆ ಪ್ರತಿಬಿಂಬಿಸುತ್ತಿದೆ ಎಂದಿದ್ದರು. ಅಲ್ಲದೆ ಕರ್ನಾಟಕದ ಕಾರ್ಯಾಚರಣೆಯನ್ನು ಬುಲ್ಡೋಜರ್‌ ನ್ಯಾಯ ಎಂದು ಕರೆದಿದ್ದರು.

ಇದಕ್ಕೆ ಕರ್ನಾಟಕ ಸರ್ಕಾರದಿಂದ ತೀಕ್ಷ್ಣ ಆಕ್ಷೇಪ ವ್ಯಕ್ತವಾಗಿತ್ತು. ಕೇರಳದ ಸಂಸದ, ಶಾಸಕರು ಕೋಗಿಲು ಬಡಾವಣೆಗೆ ಭೇಟಿ ನೀಡಿದ್ದು, ಮತ್ತಷ್ಟು ಆಕ್ರೋಶ ಹೆಚ್ಚಲು ಕಾರಣವಾಗಿತ್ತು.

ಕೋಗಿಲು ಸಂತ್ರಸ್ತರಿಗೆ ಜ.5ರ ಬಳಿಕ ವಸತಿ?

ಬೆಂಗಳೂರು: ಯಲಹಂಕದ ಕೋಗಿಲು ಬಳಿ ಅಕ್ರಮ ಒತ್ತುವರಿ ತೆರವಿನಿಂದ ನಿರಾಶ್ರಿತರಾಗಿರುವ ಕುಟುಂಬಗಳಿಗೆ ಜನವರಿ 5ರ ನಂತರವಷ್ಟೇ ಸರ್ಕಾರದಿಂದ ಪುನರ್ವಸತಿ ಸೌಲಭ್ಯ ದೊರೆಯುವ ಸಾಧ್ಯತೆಯಿದೆ. ಸರ್ಕಾರದ ಆಶ್ರಯ ಯೋಜನೆಯಡಿ ಇಲ್ಲಿನ ನಿರಾಶ್ರಿತರಿಗೆ ಮನೆಗಳನ್ನು ಹಂಚಿಕೆ ಮಾಡಬೇಕು. ಆದರೆ ಸ್ಥಳೀಯ ಶಾಸಕರಾಗಿರುವ ಸಚಿವ ಕೃಷ್ಣ ಬೈರೇಗೌಡ ವಿದೇಶದಲ್ಲಿದ್ದಾರೆ. ಅವರ ಜ.5ರ ರಾತ್ರಿ ಬೆಂಗಳೂರಿಗೆ ಮರಳಲಿದ್ದಾರೆ. ಆನಂತರ ಮನೆ ಹಂಚಿಕೆ ನಡೆವ ಸಾಧ್ಯತೆ ಇದೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೀದೀಲಿ ಹೆಣವಾದ ಪುಣೆ ಬಾಂಬ್‌ ಸ್ಫೋಟದ ಉಗ್ರ!
ಸ್ವಿಜರ್ಲೆಂಡಲ್ಲಿ ಗೋವಾ ಪಬ್‌ ಮಾದರಿ ದುರಂತ : 40 ಬಲಿ