ಅಪ್ಪ, ಅಮ್ಮನ ಜಗಳ ಹಿನ್ನೆಲೆ ಮಗುವಿಗೆ ಕೋರ್ಟ್ ನಾಮಕರಣ

KannadaprabhaNewsNetwork | Updated : Oct 09 2023, 04:11 PM IST

ಸಾರಾಂಶ

ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ನಡುವೆ ಮಗುವಿನ ಹೆಸರಿನ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿ ನಾಮಕರಣ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ
-ಮಗುವಿನ ಹೆಸರಿನ ವಿಚಾರವಾಗಿ ದಂಪತಿಗೆ ಮೂಡದ ಒಮ್ಮತ ಕೊಚ್ಚಿ: ಪ್ರತ್ಯೇಕವಾಗಿ ವಾಸಿಸುತ್ತಿದ್ದ ದಂಪತಿ ನಡುವೆ ಮಗುವಿನ ಹೆಸರಿನ ವಿಚಾರವಾಗಿ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕೇರಳ ಹೈಕೋರ್ಟ್‌ ಮಗುವಿಗೆ ತಾನೇ ಹೊಸ ಹೆಸರನ್ನು ಸೂಚಿಸಿ ನಾಮಕರಣ ಮಾಡಿದ ಘಟನೆ ಕೇರಳದಲ್ಲಿ ನಡೆದಿದೆ. ಫೆ.12, 2020ರಂದು ಮಗು ಜನಿಸಿದ ನಂತರ ದಂಪತಿ ಬೇರೆ ಬೇರೆಯಾಗಿ ವಾಸಿಸುತ್ತಿದ್ದರಿಂದ ಮಗುವಿನ ಜನನ ಪ್ರಮಾಣಪತ್ರದಲ್ಲಿ ಹೆಸರು ನಮೂದಿಸಲು ಒಮ್ಮತ ಮೂಡದಿದ್ದ ಕಾರಣ ತಾಯಿ ಕೋರ್ಟ್‌ ಮೆಟ್ಟಿಲೇರಿದ್ದರು. ನ್ಯಾ. ಬೇಚು ಕುರಿಯನ್‌ ಥಾಮಸ್‌ ಸೆ.5ರಂದು ನೀಡಿದ ಆದೇಶದಲ್ಲಿ ‘ತಾಯಿಯ ಬಳಿ ಮಗು ವಾಸಿಸುತ್ತಿರುವ ಕಾರಣ ಆಕೆ ಸೂಚಿಸಿದ ಹೆಸರಿಗೆ ಪ್ರಾಮುಖ್ಯತೆಯನ್ನು ನೀಡಬೆಕಾಗುತ್ತದೆ. ಆದರೆ ಪಿತೃತ್ವದ ವಿಚಾರದಲ್ಲಿ ಯಾವುದೇ ಗೊಮದಲ ಇಲ್ಲದಿರುವುದರಿಂದ ತಂದೆಯ ಹೆಸರನ್ನೂ ಮಗುವಿನೊಂದಿಗೆ ಸೇರಿಸಬೇಕು. ಒಂದು ಮಗುವಿಗೆ ಹೆಸರನ್ನು ಇಡುವಾಗ ಮಗುವಿನ ಬೆಳವಣಿಗೆಯನ್ನು ಪರಿಗಣಿಸಬೇಕೇ ಹೊರತು ತಂದೆ ತಾಯಿಗಳ ಬಯಕೆ ಅಥವಾ ಸಾಮಾಜಿಕ ಪ್ರಭಾವಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ. ಹಾಗಾಗಿ ಪೇರೆನ್ಸ್‌ ಪೇಟ್ರೀ ತತ್ವದ ಪ್ರಕಾರ ನ್ಯಾಯಾಲಯವೇ ಮಗುವಿಗೆ ಪ್ರತ್ಯೇಕ ಹೆಸರನ್ನು ಸೂಚಿಸುತ್ತದೆ’ ಎಂದು ತಿಳಿಸಿದೆ. ಅದರನ್ವಯ ತಾಯಿ ಸೂಚಿಸಿದ ಪುಣ್ಯ ಎಂಬ ಹೆಸರನ್ನು ಮಗುವಿಗೆ ಹೈಕೋರ್ಟ್‌ ಇಟ್ಟಿದ್ದು, ಮಗುವಿನ ಹೆಸರಿನ ಮುಂದೆ ತಂದೆ ಉಪನಾಮವನ್ನು ಸೇರಿಸಲು ಸೂಚಿಸಿದೆ.

Share this article