ಕೊಚ್ಚಿ: ಕಳೆದ ವರ್ಷ ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಸದ್ದು ಮಾಡಿದ್ದ ಹಿಜಾಬ್ ಗಲಾಟೆ ಇದೀಗ ಪಕ್ಕದ ಕೇರಳಕ್ಕೂ ಕಾಲಿಟ್ಟಿದೆ. ಇಲ್ಲಿನ ಕ್ರೈಸ್ತ ಶಾಲೆಯೊಂದರಲ್ಲಿ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಬಂದಿದ್ದು, ಶಾಲೆಯ ಆಡಳಿತ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಆದರೆ ಶಾಲೆಗಳಲ್ಲಿ ಸಮವಸ್ತ್ರ ಕಡ್ಡಾಯವಿದ್ದರೂ, ರಾಜ್ಯ ಸರ್ಕಾರ ವಿದ್ಯಾರ್ಥಿನಿ ಪರ ಬ್ಯಾಟಿಂಗ್ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ. ಆದರೆ ಇಷ್ಟೆಲ್ಲಾ ವಿವಾದದ ಬಳಿಕ ಶಾಲೆಯ ನಿಯಮಗಳನ್ನು ಅನುಸರಿಸುವುದಾಗಿ ವಿದ್ಯಾರ್ಥಿನಿಯ ಪೋಷಕರು ಒಪ್ಪಿಕೊಂಡಿದ್ದರಿಂದ ತಣ್ಣಗಾಗಿದೆ.
ಸಂತ ರೀಟಾ ಶಾಲೆಯ 8ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಹಿಜಾಬ್ ಧರಿಸಿ ಬಂದಿದ್ದು, ಇದಕ್ಕೆ ಶಾಲೆ ಅನುವು ಮಾಡಿಕೊಟ್ಟಿರಲಿಲ್ಲ. ವಿದ್ಯಾರ್ಥಿನಿಯ ತಂದೆ ಅನಾಸ್ ಶಾಲೆಗೆ ಬಂದು, ತಮ್ಮ ಮಗಳು ಹಿಜಾಬ್ ಧರಿಸಿಯೇ ಬರುವುದಾಗಿ ಪಟ್ಟು ಹಿಡಿದಿದ್ದರು. ಈ ವೇಳೆ ವಿದ್ಯಾರ್ಥಿನಿ ಕಡೆಯವರು ಮತ್ತು ಶಾಲೆ ಆಡಳಿತದ ನಡುವೆ ವಾದ-ವಿವಾದ ನಡೆದಿದೆ.
ಎರ್ನಾಕುಲಂ ಸಂಸದ ಹಿಬಿ ಎಡೆನ್ ಮತ್ತು ಶಿಕ್ಷಣ ಸಚಿವ ಸಿವನ್‌ಕುಟ್ಟಿ ಕೂಡ ಪ್ರಕರಣದಲ್ಲಿ ಮಧ್ಯಪ್ರವೇಶಿಸಿದ್ದಾರೆ. ಬಳಿಕ ವಿದ್ಯಾರ್ಥಿನಿಯ ತಂದೆ ಶಾಲೆಯ ನಿಯಮಗಳನ್ನು ಪಾಲಿಸಲು ಒಪ್ಪಿಕೊಂಡಿದ್ದು, ಹಿಜಾಬ್ ಇಲ್ಲದೆ ಮಗಳನ್ನು ಶಾಲೆಗೆ ಕಳಿಸಲು ಸಮ್ಮತಿಸಿದ್ದಾರೆ. ಆದರೆ ಅತ್ತ ಸಿವನ್‌ಕುಟ್ಟಿ, ‘ಹಿಜಾಬ್ ಧಾರಣೆ ನಿರ್ಬಂಧಿಸುವ ಶಾಲೆಯ ನಿರ್ಧಾರದಿಂದ ವಿದ್ಯಾರ್ಥಿನಿಗೆ ಮಾನಸಿಕ ಒತ್ತಡ ಉಂಟಾಗಿದೆ’ ಎಂದಿದ್ದು, ಹಿಜಾಬ್ ಧರಿಸಿಯೇ ವಿದ್ಯಾಭ್ಯಾಸ ಮುಂದುವರಿಸಲು ಅನುವು ಮಾಡಿಕೊಡುವಂತೆ ಸೂಚಿಸಿದ್ದಾರೆ. ಆದರೆ ಇದನ್ನು ಶಾಲಾ ಆಡಳಿತ ಮಂಡಳಿ ತಿರಸ್ಕರಿಸಿದೆ. ಜೊತೆಗೆ ಚರ್ಚ್ ಕೂಡಾ ಶಾಲೆ ನಿಲುವು ಬೆಂಬಲಿಸಿದೆ. ಪ್ರಕರಣ ರಾಜಕೀಯ ತಿರುವು ಪಡೆದುಕೊಂಡ ಬಳಿಕ ಶಿಕ್ಷಣ ಸಚಿವ ತಣ್ಣಗಾಗಿ ತಮ್ಮ ವರಸೆ ಬದಲಾಯಿಸಿದ್ದಾರೆ. ಪ್ರಕರಣ ಸುಖ್ಯಾಂತ್ಯವಾದರೆ ತಮ್ಮದೇನೂ ಅಭ್ಯಂತರವಿಲ್ಲ ಎಂದಿದ್ದಾರೆ.
ಅತ್ತ ಶಾಲೆ ಕೇರಳ ಹೈಕೋರ್ಟ್ ಮೆಟ್ಟಿಲೇರಿದ್ದು, ಶಾಲೆಗೆ ಭದ್ರತೆ ಒದಗಿಸುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.