- ಇಬ್ಬರನ್ನೂ ‘ಸೂಪರ್ ವುಮೆನ್’ ಎಂದು ಕರೆದ ರಾಯಭಾರ ಕಚೇರಿ ತಿರುವನಂತಪುರ: ಇಸ್ರೇಲ್‌ನಲ್ಲಿ ದಾದಿಯರಾಗಿ ಕೆಲಸ ಮಾಡುತ್ತಿರುವ ಇಬ್ಬರು ಕೇರಳದ ಮಹಿಳೆಯರು ಹಮಾಸ್ ದಾಳಿಯ ವೇಳೆ ಕುಟುಂಬವೊಂದನ್ನು ರಕ್ಷಿಸಿದ ಘಟನೆ ನಡೆದಿದೆ. ಈ ಇಬ್ಬರು ಮಹಿಳೆಯರನ್ನು ಇಸ್ರೇಲ್ ರಾಯಭಾರ ಕಚೇರಿ ‘ಸೂಪರ್ ವುಮೆನ್’ ಎಂದು ಕರೆದು ಗೌರವಿಸಿದೆ. ಸಬಿತಾ ಹಾಗೂ ಮೀರಾ ಮೋಹನನ್ ಎಂಬ ಇಬ್ಬರು ಮಹಿಳೆಯರು ಇಸ್ರೇಲ್‌ನಲ್ಲಿ ದಾದಿಯರ ಕೆಲಸ ಮಾಡುತ್ತಿದ್ದು, ಇಬ್ಬರು ಹಿರಿಯ ವ್ಯಕ್ತಿಗಳಿದ್ದ ಕುಟುಂಬವನ್ನು ನೋಡಿಕೊಳ್ಳುವ ಕೆಲಸ ಮಾಡುತ್ತಿದ್ದರು. ಅ.7ರಂದು ಹಮಾಸ್ ಉಗ್ರರು ದಾಳಿ ನಡೆಸಿದ ಸಮಯದಲ್ಲಿ ಸೈರನ್ ಸದ್ದು ಕೇಳುತ್ತಲೇ ವೃದ್ಧರನ್ನು ಕರೆದೊಯ್ದು ಮನೆಯೊಳಗಿನ ಬಂಕರ್‌ನೊಳಗೆ ಸೇರಿಸಿದ್ದರು. ಇದಾದ ಕೆಲ ಹೊತ್ತಿನಲ್ಲೇ ಉಗ್ರರು ಮನೆಯೊಳಗೆ ದಾಳಿ ನಡೆಸಿ, ಒಳಗೆ ನುಗ್ದಿದ್ದರು. ಜೊತೆಗೆ ಬಂಕರ್ ಪತ್ತೆ ಹಚ್ಚಿ, ಅದನ್ನು ತೆರೆಯುವಂತೆ ಇಲ್ಲವೇ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಿದ್ದರು. ಜೊತೆಗೆ ಬಾಗಿಲಿನ ಮೇಲೆ ಸತತವಾಗಿ ಗುಂಡಿನ ದಾಳಿ ನಡೆಸಿದ್ದರು. ಆದರೆ ಇಬ್ಬರೂ ದಾದಿಯರು, ಬಂಕರ್‌ನೊಳಗಿನಿಂದಲೇ ಬಾಗಿಲಿನ ಚಿಲಕ ಗಟ್ಟಿಯಾಗಿ ಹಿಡಿದು ಅದನ್ನು ತೆರೆಯದಂತೆ ಸತತ 4 ಗಂಟೆ ಕಾಲ ಹಿಡಿದಿಟ್ಟುಕೊಂಡಿದ್ದರು. ಬಳಿಕ ಸ್ಥಳಕ್ಕೆ ಇಸ್ರೇಲ್ ಸೇನೆ ಆಗಮಿಸಿದ ಸುದ್ದಿ ತಿಳಿದು ಬಂದ ಮೇಲಷ್ಟೇ ಹೊರಗೆ ಬಂದಿದ್ದಾರೆ. ಅಲ್ಲಿ ನೋಡಿದಾಗ ಇಡೀ ಮನೆ ನಾಶಗೊಂಡಿದ್ದು ಕಂಡುಬಂದಿದೆ.