400 ರು. ಕೊಲ್ಹಾಪುರ ಚಪ್ಪಲಿಗೆ ಇಟಲಿ ಕಂಪನಿ 1.2 ಲಕ್ಷ ರು. ದರ!

KannadaprabhaNewsNetwork |  
Published : Jun 29, 2025, 01:32 AM ISTUpdated : Jun 29, 2025, 05:25 AM IST
ಚಪ್ಪಲಿ | Kannada Prabha

ಸಾರಾಂಶ

ಇಟಲಿಯ ವಿಶ್ವವಿಖ್ಯಾತ ಕಂಪನಿಯಾದ ಪ್ರಾಡಾ, ಮಹಾರಾಷ್ಟ್ರದ ಪ್ರಸಿದ್ಧ ಕೊಲ್ಹಾಪುರ ಚಪ್ಪಲಿಯನ್ನೇ ಕಾಪಿ ಮಾಡಿ ಹೊಸ ಚಪ್ಪಲಿ ಬಿಡುಗಡೆ ಮಾಡಿದ್ದು, ಅದನ್ನು ಭರ್ಜರಿ 1.2 ಲಕ್ಷ ರು.ಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ. 

ಮುಂಬೈ: ಇಟಲಿಯ ವಿಶ್ವವಿಖ್ಯಾತ ಕಂಪನಿಯಾದ ಪ್ರಾಡಾ, ಮಹಾರಾಷ್ಟ್ರದ ಪ್ರಸಿದ್ಧ ಕೊಲ್ಹಾಪುರ ಚಪ್ಪಲಿಯನ್ನೇ ಕಾಪಿ ಮಾಡಿ ಹೊಸ ಚಪ್ಪಲಿ ಬಿಡುಗಡೆ ಮಾಡಿದ್ದು, ಅದನ್ನು ಭರ್ಜರಿ 1.2 ಲಕ್ಷ ರು.ಗಳಿಗೆ ಮಾರಾಟ ಮಾಡುತ್ತಿರುವ ವಿಷಯ ಬೆಳಕಿಗೆ ಬಂದಿದೆ.

 ಈ ಬಗ್ಗೆ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾದ ಬಳಿಕ ಕಂಪನಿ ತಾನು ಕಾಪಿ ಮಾಡಿದ್ದನ್ನು ಒಪ್ಪಿಕೊಂಡಿದ್ದು, ನಮ್ಮ ಹೊಸ ಉತ್ಪನ್ನಕ್ಕೆ ಕೊಲ್ಹಾಪುರ ಚಪ್ಪಲಿಯೇ ಸ್ಪೂರ್ತಿ ಎಂದು ಒಪ್ಪಿಕೊಂಡಿದೆ.ಇಟಲಿಯ ಪ್ರಾಡಾ ಕಂಪನಿ ಕೊಲ್ಹಾಪುರ ಚಪ್ಪಲಿ ಹೋಲುವ ಪಾದರಕ್ಷೆ ತಯಾರಿಸಿ ಅದನ್ನು 026ರ ಫ್ಯಾಶನ್‌ ಶೋನಲ್ಲಿ ಪ್ರದರ್ಶಿಸಿತ್ತು. ಆದರೆ ಎಲ್ಲೂ ಭಾರತದ ಹೆಸರನ್ನೇ ಉಲ್ಲೇಖಿಸಿರಲಿಲ್ಲ. 

ಕೊಲ್ಹಾಪುರದ ಈ ಸುಪ್ರಸಿದ್ಧ ಪಾದರಕ್ಷೆಗೆ 2019ರಲ್ಲಿ ಭಾರತ ಸರ್ಕಾರ ಭೌಗೋಳಿಕ ಗುರುತು (ಜಿಐ) ನೀಡಿತ್ತು. ಇದನ್ನು ಪ್ರಾಡಾ ಕಂಪನಿ ತನ್ನ ಬೇಸಿಗೆಯ ಮೆನ್ಸ್‌ ಕಲೆಕ್ಷನ್ಸ್‌ನಲ್ಲಿ ಪರಿಚಯಿಸಿದೆ ಹಾಗೂ ಇದಕ್ಕೆ 1.2 ಲಕ್ಷ ರು. ಬೆಲೆ ನಿಗದಿಪಡಿಸಿದೆ. ಆದರೆ ಇಂತಹ ಚಪ್ಪಲಿಗಳು ಭಾರತದಲ್ಲಿ 300ರಿಂದ 400 ರು.ನಲ್ಲಿ ಲಭ್ಯವಿದೆ.

ಪ್ರಾಡ ಕಂಪನಿಯ ಈ ನಡೆಯ ವಿರುದ್ಧ ಮಹಾರಾಷ್ಟ್ರದ ವಾಣಿಜ್ಯ, ಕೈಗಾರಿಕೆ ಮತ್ತು ಕೃಷಿ ಮಂಡಳಿಯ ಅಧ್ಯಕ್ಷರಾದ ಲಲಿತ್‌ ಗಾಂಧಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದು, ‘ಕೊಲ್ಹಾಪುರಿ ಚಪ್ಪಲಿಗಳು ಶತಮಾನಗಳಷ್ಟು ಹಳೆಯ ಮಹಾರಾಷ್ಟ್ರದ ಕರಕುಶಲತೆಯನ್ನು ಪ್ರತಿನಿಧಿಸುತ್ತವೆ. ಅದೇ ಮಾದರಿಯ ಚಪ್ಪಲಿಗಳನ್ನು ನೀವು ನಮ್ಮ ಗಮನಕ್ಕೆ ತರದೆ, ಈ ಪರಂಪರೆಯನ್ನು ತಲೆಮಾರುಗಳಿಂದ ಸಂರಕ್ಷಿಸಿರುವ ಕುಶಲಕರ್ಮಿಗಳೊಂದಿಗೆ ಪಾಲುದಾರಿಕೆಯನ್ನೂ ಮಾಡಿಕೊಳ್ಳದೆ ತಯಾರಿಸಿರುವುದು ತಿಳಿದಿದೆ. ಈ ವಿನ್ಯಾಸದ ಹಿಂದಿನ ಸ್ಫೂರ್ತಿಯನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು, ನಮ್ಮ ಕುಶಲಕರ್ಮಿಗಳಿಗೆ ಸಹಾಯವಾಗುವಂತೆ ಏನಾದರೂ ಕ್ರಮ ಕೈಗೊಳ್ಳಿ’ ಎಂದು ಆಗ್ರಹಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಾಡಾದ ಸಿಆರ್‌ಎಸ್‌ ಮುಖ್ಯಸ್ಥರು, ‘ನಮ್ಮ ಚಪ್ಪಲಿಗಳನ್ನು ಕೊಲ್ಹಾಪುರಿ ಪಾದರಕ್ಷೆಗಳಿಂದ ಸ್ಫೂರ್ತಿ ಪಡೆದು ತಯಾರಿಸಲಾಗಿದೆ’ ಎಂದು ಒಪ್ಪಿಕೊಂಡಿದ್ದಾರೆ.

ಅತ್ತ ಕೊಲ್ಹಾಪುರದವರಾದ ಬಿಜೆಪಿ ರಾಜ್ಯಸಭಾ ಸಂಸದ ಧನಂಜಯ್ ಮಹಾದಿಕ್ ಅವರ ನೇತೃತ್ವದಲ್ಲಿ ಕುಶಲಕರ್ಮಿಗಳು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಭೇಟಿಯಾಗಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ವಿನ್ಯಾಸಕಿಯೂ ಆಗಿರುವ ಕಾರ್ಯಕರ್ತೆ ಲೈಲಾ ತ್ಯಾಬ್ಜಿ ಮಾತನಾಡಿ, ‘ಪ್ರಾಡಾದ ನಡೆಯಿಂದ ನೋವಾಗಿದೆ. ಭಾರತೀಯರಿಗೆ ತಮ್ಮ ಕಲೆಯ ಬೆಲೆ ಗೊತ್ತಿಲ್ಲ. ಆದರೆ ವಿದೇಶಿಗರು ಅದನ್ನು ಐಶಾರಾಮಿ ವಸ್ತುವಿನಂತೆ ಮಾರುತ್ತಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

PREV
Stay updated with breaking India news (ರಾಷ್ಟ್ರೀಯ ಸುದ್ಧಿ) – national politics, economy, social issues, major events and real‑time headlines from across India only on KannadaPrabha News.
Read more Articles on

Recommended Stories

ಬೆಂಗಳೂರಿನದ್ದು ಸೇರಿ 16 ಉಪಗ್ರಹಗಳು ಆಗಸದಲ್ಲೇ ಕಾಣೆ
ಅಣ್ಣಾಮಲೈ ರಸಮಲೈ ಎಂದು ರಾಜ್‌ ಠಾಕ್ರೆ ಕೀಳುಭಾಷೆ ಟೀಕೆ