ಕೋಲ್ಕತಾ/ಅಗರ್ತಲಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಮತ್ತು ಭಾರತದ ರಾಷ್ಟ್ರಧ್ವಜಕ್ಕೆ ಅವಮಾನದ ಘಟನೆಯನ್ನು ಖಂಡಿಸಿ, ಯಾವುದೇ ಬಾಂಗ್ಲಾದೇಶದ ನಾಗರಿಕರಿಗೆ ಚಿಕಿತ್ಸೆ ನೀಡದೇ ಇರಲು ಕೋಲ್ಕತಾ ಮತ್ತು ತ್ರಿಪುರಾ ರಾಜಧಾನಿ ಅಗರ್ತಲಾದ ಎರಡು ಖಾಸತಿ ಆಸ್ಪತ್ರೆಗಳು ನಿರ್ಧರಿಸಿವೆ.
ಈ ಕುರಿತು ಮಾಹಿತಿ ನೀಡಿರುವ ಕೋಲ್ಕತಾ ಜೆ.ಎನ್.ರೇ ಆಸ್ಪತ್ರೆಯ ಅಧಿಕಾರಿಯೊಬ್ಬರು, ‘ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ, ಲೂಟಿಯಂಥ ಪ್ರಕರಣಗಳು ಹೆಚ್ಚುತ್ತಿವೆ. ಜೊತೆಗೆ ಭಾರತದ ರಾಷ್ಟ್ರಧ್ವಜ ಅವಮಾನಿಸುವಂತ ಘಟನೆಗಳೂ ನಡೆಯುತ್ತಲೇ ಇವೆ. ಇದನ್ನು ಖಂಡಿಸಿ ಭಾನುವಾರದಿಂದಲೇ ಯಾವುದೇ ಬಾಂಗ್ಲಾ ಪ್ರಜೆಗಳನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳದೇ ಇರಲು ನಿರ್ಧರಿಸಲಾಗಿದೆ. ಜೊತೆಗೆ ನಗರದ ಉಳಿದ ಆಸ್ಪತ್ರೆಗಳು ಇದೇ ನೀತಿ ಪಾಲಿಸಬೇಕು ಎಂದು ಕರೆ ನೀಡಿದ್ದಾರೆ.
ಮತ್ತೊಂದೆಡೆ ಅರ್ಗತಲಾದ ಐಎಲ್‌ಎಸ್ ಆಸ್ಪತ್ರೆ ಕೂಡಾ ಇದೇ ನಿರ್ಧಾರ ಕೈಗೊಂಡಿದೆ. ಈ ಎರಡೂ ಆಸ್ಪತ್ರೆಗಳು ಬಾಂಗ್ಲಾ ಗಡಿಗೆ ಹೊಂದಿಕೊಂಡಿರುವ ಕಾರಣ ಮತ್ತು ಅಗ್ಗದ ದರದಲ್ಲಿ ಗುಣಮಟ್ಟದ ಚಿಕಿತ್ಸೆ ನೀಡುವ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಬಾಂಗ್ಲಾದೇಶಿಯರನ್ನು ಸೆಳೆಯುತ್ತಿವೆ.
ಬಾಂಗ್ಲಾ: 3 ದೇಗುಲಗಳ ಮೇಲೆ ದಾಳಿ
ಢಾಕಾ: ನೆರೆಯ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಶುಕ್ರವಾರವೂ ಸಹ ಅಲ್ಲಿನ ಮೂಲಭೂತವಾದಿಗಳ ಗುಂಪು 3 ಹಿಂದೂ ದೇಗುಲಗಳ ಮೇಲೆ ದಾಳಿ ನಡೆಸಿ ಹಾನಿಗೊಳಿಸಿದೆ.
ಶುಕ್ರವಾರ ಪೂರ್ವ ಬಾಂಗ್ಲಾದೇಶದ ಚತ್ತೋಗ್ರಾಂನಲ್ಲಿ ದುಷ್ಕೃತ್ಯ ನಡೆದಿದೆ. ಮಧ್ಯಾಹ್ನ 2 ಗಂಟೆ ವೇಳೆಗೆ ಇಲ್ಲಿನ ಹರೀಶ್ ಚಂದ್ರ ಮುನ್ಸೆಫ್ ಮಾರ್ಗದಲ್ಲಿ ಮೂಲಭೂತವಾದಿಗಳು ಘೋಷಣೆ ಕೂಗುತ್ತ ಸಾಗುತ್ತಿದ್ದರು. ಮಾರ್ಗ ಮಧ್ಯದಲ್ಲಿ ಇದ್ದ ಶಾಂತಿನೇಶ್ವರಿ ಮಾತ್ರಿ ದೇಗುಲ, ಶನಿ ದೇಗುಲ ಮತ್ತು ಕಾಳಿಬರಿ ದೇಗುಲದ ಮೇಲೆ ಇದ್ದಕ್ಕಿದ್ದಂತೆ ಇದ್ದಕ್ಕಿದ್ದಂತೆ ಇಟ್ಟಿಗೆಯಿಂದ ದಾಳಿ ನಡೆಸಿದ್ದಾರೆ. ಇದರಿಂದ ಕೂಡಲೇ ಎಚ್ಚೆತ್ತ ದೇಗುಲದ ಸಿಬ್ಬಂದಿ ಬಾಗಿಲು ಬಂದ್ ಮಾಡಿದ್ದಾರೆ. ಪರಿಣಾಮ ಯಾವುದೇ ಸಾವು ನೋವು ಸಂಭವಿಸಿಲ್ಲ. ದೇಗುಲದ ಸಿಬ್ಬಂದಿ ಕೂಡಲೇ ಸೇನೆಗೆ ಕರೆ ಮಾಡಿದ ಪರಿಣಾಮ ಅಲ್ಲಿಗೆ ಸೈನಿಕರು ನೆರೆದು ದೇಗುಲವನ್ನು ರಕ್ಷಿಸಿದ್ದಾರೆ.
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲಲಿ: ಆರ್‌ಎಸ್‌ಎಸ್
ನವದೆಹಲಿ: ‘ಬಾಂಗ್ಲಾದೇಶದ ಮಧ್ಯಂತರ ಸರ್ಕಾರ , ತನ್ನ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು. ಅಲ್ಲಿ ಬಂಧನಕ್ಕೆ ಒಳಗಾಗಿರುವ ಇಸ್ಕಾನ್ ಸನ್ಯಾಸಿ ಚಿನ್ಮಯ್ ಕೃಷ್ಣದಾಸ್ ಅವರನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು’ ಎಂದು ಆರ್‌ಎಸ್‌ಎಸ್ ಆಗ್ರಹಿಸಿದೆ.
ಈ ಕುರಿತು ಮಾತನಾಡಿರುವ ಆರ್‌ಎಸ್‌ಎಸ್ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ‘ಭಾರತ ಸರ್ಕಾರವು ಬಾಂಗ್ಲಾದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯವನ್ನು ತಡೆಯಲು ತನ್ನ ಪ್ರಯತ್ನಗಳನ್ನು ಮುಂದುವರೆಸುತ್ತಿದೆ.
ಸಾಧ್ಯವಾದಷ್ಟು ಬೇಗ ಈ ಬಗ್ಗೆ ಜಾಗತಿಕ ಅಭಿಪ್ರಾಯಗಳನ್ನು ರೂಪಿಸಲು ಮುಂದಾಗಿದೆ. ಬಾಂಗ್ಲಾದಲ್ಲಿ ಹಿಂದೂಗಳು, ಮಹಿಳೆಯರು ಮತ್ತು ಎಲ್ಲ ಅಲ್ಪಸಂಖ್ಯಾತರ ಮೇಲೆ ಇಸ್ಲಾಮಿಕ್ ಮೂಲಭೂತವಾದಿಗಳ ದಾಳಿಗಳು, ಕೊಲೆಗಳು, ಲೂಟಿಗಳು, ಬೆಂಕಿ ಹಚ್ಚುವಿಕೆ ಮತ್ತು ಅಮಾನವೀಯ ದೌರ್ಜನ್ಯಗಳು ಅತ್ಯಂತ ಕಳವಳಕಾರಿಯಾಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇದನ್ನು ಖಂಡಿಸುತ್ತದೆ. ಇದನ್ನು ತಡೆಯುವ ಬದಲು ಈಗಿನ ಬಾಂಗ್ಲಾ ಸರ್ಕಾರ ಮತ್ತು ಇತರ ಸಂಸ್ಥೆಗಳು ಮೂಕ ಪ್ರೇಕ್ಷಕರಾಗಿವೆ ’ ಎಂದು ಹೊಸಬಾಳೆ ಟೀಕಿಸಿದ್ದಾರೆ.