ಮುಂಬೈ: ವಿವಾದಿತ ವಿದೂಷಕ ಕುನಾಲ್ ಕಾಮ್ರಾ, ಆರ್‌ಎಸ್‌ಎಸ್ ಎಂಬ ಬರವಣಿಗೆ ಪಕ್ಕದಲ್ಲಿ ನಾಯಿ ಮೂತ್ರ ಮಾಡುತ್ತಿರುವ ರೀತಿಯ ಟೀಶರ್ಟ್ ಫೋಟೋ ಒಂದನ್ನು ಹಾಕಿಕೊಂಡು ಹೊಸ ವಿವಾದ ಸೃಷ್ಟಿಸಿದ್ದಾರೆ. ಜೊತೆಗೆ ಈ ಫೋಟೋ ಅನ್ನು ಯಾವುದೇ ಕಾಮಿಡಿ ಶೋ ವೇಳೆ ತೆಗೆದಿದ್ದಲ್ಲ ಎಂಬ ಮಾಹಿತಿಯನ್ನೂ ನೀಡಿದ್ದಾರೆ. ಅದರ ಬೆನ್ನಲ್ಲೇ ಪೋಸ್ಟ್ ಕುರಿತು ಬಿಜೆಪಿ, ಶಿವಸೇನೆಯ ಶಿಂಧೆ ಬಣದ ನಾಯಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ‘ಇಂತಹ ಆಕ್ಷೇಪಾರ್ಹ ವಿಷಯವನ್ನು ಪೋಸ್ಟ್ ಮಾಡುವವರ ವಿರುದ್ಧ ಪೊಲೀಸರು ಕಾನೂನು ಕ್ರಮ ಕೈಗೊಳ್ಳುತ್ತಾರೆ’ ಎಂದು ಎಚ್ಚರಿಸಿದೆ. ಈ ಹಿಂದೆ ಇಂಥದ್ದೇ ಒಂದು ಪೋಸ್ಟ್ ಹಾಕಿದ ವೇಳೆ ಶಿವಸೇನೆ ಕಾರ್ಯಕರ್ತರು ಕಾಮ್ರಾನ ಕಾರ್ಯಕ್ರಮದ ವೇದಿಕೆ ಧ್ವಂಸ ಮಾಡಿದ್ದರು.
ನವದೆಹಲಿ: ಜನಪ್ರಿಯ ಪಾನ್ ಮಸಾಲಾ ಬ್ರಾಂಡ್‌ಗಳಾದ ಕಮಲಾ ಪಸಂದ್ ಮತ್ತು ರಾಜಶ್ರೀ ಮಾಲೀಕ ಕಮಲ್ ಕಿಶೋರ್ ಚೌರಾಸಿಯಾ ಅವರ ಸೊಸೆ ದೀಪ್ತಿ ಚೌರಾಸಿಯಾ (40) ನೇಣುಹಾಕಿಕೊಂಡು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಕಲಹವೇ ಇದಕ್ಕೆ ಕಾರಣ ಎನ್ನಲಾಗಿದೆ. ದೀಪ್ತಿ ಮೃತದೇಹದ ಬಳಿ ಮರಣಪತ್ರ ಸಿಕ್ಕಿದ್ದು, ಅದರಲ್ಲಿ ತನ್ನ ಸಾವಿಗೆ ಯಾರನ್ನೂ ನೇರವಾಗಿ ದೂಷಿಸದೆ, ‘ಸಂಬಂಧದಲ್ಲಿ ನಂಬಿಕೆ ಮತ್ತು ಪ್ರೀತಿ ಇಲ್ಲದಿದ್ದಮೇಲೆ ಜೀವನಕ್ಕೆ ಅರ್ಥವಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಈ ನಡುವೆ ತಮ್ಮ ಪುತ್ರಿ ಸಾವಿಗೆ ಕಮಲ್ ಕುಟುಂಬಸ್ಥರು ಕಾರಣ ಎಂದು ದೀಪ್ತಿ ಪೋಷಕರು ದೂಷಿಸಿದ್ದಾರೆ. ‘ಮನೆಯಲ್ಲಿ ಆಕೆಗೆ ಮಾನಸಿಕ , ದೈಹಿಕ ಹಿಂಸೆ ನೀಡಲಾಗುತ್ತಿತ್ತು. ಆಕೆ ಗರ್ಭಿಣಿ ಆಗಿದ್ದಲೂ ಹಿಂಸೆ ನೀಡಿದ್ದಾರೆ’ ಎಂದು ದೀಪ್ತಿ ಸಹೋದರ ರಿಷಬ್ ಆರೋಪಿಸಿದ್ದಾರೆ. ಜತೆಗೆ ಹರ್‌ಪ್ರೀತ್ ಇತ್ತೀಚೆಗಷ್ಟೇ ದಕ್ಷಿಣ ಭಾರತದ ನಟಿಯೊಬ್ಬರ ಜತೆ 2ನೇ ಮದುವೆಯಾಗಿದ್ದ ಎನ್ನಲಾಗಿದೆ.
ನವದೆಹಲಿ: ಭಾರತದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್, ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ಸಂಸ್ಥೆ ಮತ್ತು ಚುನಾವಣಾ ಸಲಹಾ ಸಮಿತಿಯ 2026ನೇ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಡಿ.3ರಂದು ಅವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದು 1995ರಲ್ಲಿ ಸ್ಥಾಪನೆಯಾದ ಅಂತರ್ ಸರ್ಕಾರ ಮಟ್ಟದ ಸಂಸ್ಥೆಯಾಗಿದೆ. 35 ಸದಸ್ಯ ದೇಶಗಳನ್ನು ಹೊಂದಿದ್ದು, ಜಾಗತಿಕ ಮಟ್ಟದಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳನ್ನು ಮತ್ತಷ್ಟು ಬಲಪಡಿಸುವ ಕೆಲಸ ಮಾಡುತ್ತದೆ. ಜೊತೆಗೆ 142 ದೇಶಗಳ 3169 ಅಧಿಕಾರಿಗಳಿಗೆ ಚುನಾವನೆ ಸಂಬಂಧ ತರಬೇತಿ ನೀಡಿದೆ.
ಡ್ರಂ ಮರ್ಡರ್ ಮಾಡಿದ್ದ ಮುಸ್ಕಾನ್‌ಗೆ ಹೆಣ್ಣು ಮಗು : ಡಿಎನ್‌ಎ ತನಿಖೆಗೆ ಆಗ್ರಹ
ಮೀರತ್: ಪ್ರಿಯತಮನೊಂದಿಗೆ ಸೇರಿ ಪತಿ ಸೌರಭ್‌ನನ್ನು ಕೊಲೆ ಮಾಡಿ ನೀಲಿ ಡ್ರಂನೊಳಗೆ ತುಂಬಿಸಿದ ಪ್ರಕರಣದಲ್ಲಿ ಜೈಲು ಸೇರಿದ್ದ ಮುಸ್ಕಾನ್, ಮಂಗಳವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಅದಕ್ಕೆ ‘ರಾಧಾ’ ಎಂದು ಹೆಸರಿಟ್ಟಿದ್ದಾಳೆ. ಸೌರಭ್ ಜನ್ಮದಿನವಾದ ನ.24ರಂದು, ಮುಸ್ಕಾನ್ ಮಗುವಿಗೆ ಜನ್ಮ ನೀಡಿದ್ದಾಳೆ.
ಆಕೆಯನ್ನೀಗ ಮರಳಿ ಜಿಲ್ಲಾ ಕಾರಾಗೃಹಕ್ಕೆ ಕಳಿಸಲಾಗುವುದು. ಮಗುವಿಗೆ 6 ವರ್ಷ ತುಂಬುವವರೆಗೆ ಮುಸ್ಕಾನ್ ಜತೆಗೇ ಇರಲಿದೆ. ಇತ್ತ ಸೌರಭ್‌ನ ತಾಯಿ ಹಾಗೂ ಸಹೋದರ, ರಾಧಾಳ ಡಿಎನ್‌ಎ ಪರೀಕ್ಷೆಗೆ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಲು ನಿರ್ಧರಿಸಿದ್ದಾರೆ. ಆ ಮಗು ಸೌರಭ್‌ನದ್ದೇ ಆಗಿದ್ದರೆ, ಮೊದಲ ಮಗಳ ಜತೆ ಇದನ್ನೂ ತಾವೇ ಸಾಕುವುದಾಗಿ ಹೇಳಿದ್ದಾರೆ.